Sunita Williams Press Conference: NASA ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಇಂದು ರಾತ್ರಿ (ಸೆಪ್ಟೆಂಬರ್ 13) 11:45 ಗಂಟೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ISS) ಸುದ್ದಿಗೋಷ್ಠಿ ನಡೆಸುವರು.
ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ ಮಾಹಿತಿ ಪ್ರಕಾರ, ಇಬ್ಬರೂ ಭೂಮಿಯ ಕೆಳ ಕಕ್ಷೆಯಲ್ಲಿರುವ ಬಾಹ್ಯಾಕಾಶ ನಿಲ್ದಾಣದ ಕುರಿತು ಮಾತನಾಡಲಿದ್ದಾರೆ. NASA+, NASA ಆ್ಯಪ್ ಮತ್ತು ವೆಬ್‌ಸೈಟ್‌ನಲ್ಲಿ ಇದು ಲೈವ್ ಸ್ಟ್ರೀಮ್ ಆಗಲಿದೆ.
ಜೂನ್ 5, 2024ರಂದು ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ತೆರಳಿದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಪ್ರಸ್ತುತ ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿದ್ದಾರೆ. ಇದೀಗ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಹೆಚ್ಚುವರಿ ಸಮಯ ಕಳೆಯುತ್ತಿದ್ದಾರೆ. 2025ರ ಫೆಬ್ರವರಿಯಲ್ಲಿ ಸ್ಪೇಸ್‌ಎಕ್ಸ್ ಡ್ರ್ಯಾಗನ್ ಕ್ರಾಫ್ಟ್‌ನಲ್ಲಿ ಹಿಂದಿರುಗಲು ಎದುರು ನೋಡುತ್ತಿದ್ದಾರೆ.
ಇನ್ನು, ಸೆಪ್ಟೆಂಬರ್ 7ರಂದು ಸ್ಟಾರ್‌ಲೈನರ್ ಯಶಸ್ವಿಯಾಗಿ ಭೂಮಿಗೆ ಮರಳಿದೆ. ಇದು ಶನಿವಾರ ಬೆಳಗ್ಗೆ 9:30ಕ್ಕೆ (IST) ನ್ಯೂ ಮೆಕ್ಸಿಕೋದಲ್ಲಿ ಬಂದಿಳಿಯಿತು. ಮಿಷನ್ ಕಂಟ್ರೋಲ್ ಹೂಸ್ಟನ್‌ನ ನಾಸಾ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, "ಸ್ಟಾರ್‌ಲೈನರ್ ಸುರಕ್ಷಿತವಾಗಿ ಮರಳಿದೆ" ಎಂದು ತಿಳಿಸಿದರು.