ಸಿಯೋಲ್: 10 ನ್ಯಾನೋಮೀಟರ್ ಚಿಪ್ ತಯಾರಿಕೆಯ ಆರನೇ ತಲೆಮಾರಿನ ತಂತ್ರಜ್ಞಾನವನ್ನು ಬಳಸಿಕೊಂಡು ವಿಶ್ವದ ಮೊದಲ 16 ಗಿಗಾಬೈಟ್ ಡಿಡಿಆರ್ 5 ಚಿಪ್ ಅನ್ನು ತಯಾರಿಸಿರುವುದಾಗಿ ಎಸ್ ಕೆ ಹೈನಿಕ್ಸ್ ಗುರುವಾರ ಹೇಳಿದೆ. ಎಸ್ ಕೆ ಹೈನಿಕ್ಸ್ ವಿಶ್ವದ ಎರಡನೇ ಅತಿದೊಡ್ಡ ಮೆಮೊರಿ ಚಿಪ್ ತಯಾರಕ ಕಂಪನಿಯಾಗಿದೆ. ಹಿಂದಿನ ಪೀಳಿಗೆಗೆ ಹೋಲಿಸಿದರೆ ಹೊಸ ಚಿಪ್ ಅನ್ನು ಕಡಿಮೆ ವೆಚ್ಚದಲ್ಲಿ ತಯಾರಿಸಬಹುದಾಗಿದೆ ಮತ್ತು ವಿನ್ಯಾಸದಲ್ಲಿ ತಾಂತ್ರಿಕ ಆವಿಷ್ಕಾರದ ಮೂಲಕ ಶೇಕಡಾ 30 ಕ್ಕಿಂತ ಹೆಚ್ಚು ಉತ್ಪಾದಕತೆ ಹೊಂದಿದೆ ಎಂದು ಎಸ್ ಕೆ ಹೈನಿಕ್ಸ್ ಹೇಳಿದೆ.
ಹೆಚ್ಚಿನ ಕಾರ್ಯಕ್ಷಮತೆಯ ಡೇಟಾ ಸೆಂಟರ್ಗಳಲ್ಲಿ ಹೆಚ್ಚಾಗಿ ಬಳಕೆಯಾಗಲಿದೆ ಎಂಬ ನಿರೀಕ್ಷೆಯಿರುವ ಹೊಸ ಚಿಪ್ನ ಕಾರ್ಯಾಚರಣಾ ವೇಗವು ಶೇಕಡಾ 11 ರಷ್ಟು ಸುಧಾರಿಸಿದೆ ಮತ್ತು ವಿದ್ಯುತ್ ಮಿತವ್ಯಯ ಶೇಕಡಾ 9 ಕ್ಕಿಂತ ಹೆಚ್ಚಾಗಿದೆ ಎಂದು ಯೋನ್ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಮುಂದಿನ ವರ್ಷ ಹೊಸ ಚಿಪ್ ಸಗಟು ಉತ್ಪಾದನೆಗೆ ಸಿದ್ಧವಾಗಲಿದೆ ಎಂದು ಎಸ್ ಕೆ ಹೈನಿಕ್ಸ್ ಹೇಳಿದೆ.
ಕೃತಕ ಬುದ್ಧಿಮತ್ತೆಯ ಪ್ರಗತಿಯಿಂದ ವಿದ್ಯುತ್ ಬಳಕೆ ಹೆಚ್ಚಾಗುತ್ತಿರುವ ಇಂದಿನ ಸಮಯದಲ್ಲಿ, ಡಿಆರ್ಎಎಂ ಚಿಪ್ ಡೇಟಾ ಕೇಂದ್ರಗಳ ವಿದ್ಯುತ್ ವೆಚ್ಚವನ್ನು ಶೇಕಡಾ 30 ರಷ್ಟು ಕಡಿಮೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.
"ನಮ್ಮ ಮುಂದಿನ ಪೀಳಿಗೆಯ ಪ್ರಮುಖ ಉತ್ಪನ್ನಗಳಿಗೆ ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ವೆಚ್ಚ ಸ್ಪರ್ಧಾತ್ಮಕತೆ ಹೊಂದಿರುವ 1 ಸಿ ತಂತ್ರಜ್ಞಾನವನ್ನು ಅನ್ವಯಿಸುವ ಮೂಲಕ ಗ್ರಾಹಕರಿಗೆ ವಿಭಿನ್ನ ಮೌಲ್ಯಗಳನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ" ಎಂದು ಎಸ್ಕೆ ಹೈನಿಕ್ಸ್ನ ಡಿಆರ್ಎಎಂ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಕಿಮ್ ಜಾಂಗ್-ಹ್ವಾನ್ ಹೇಳಿದರು.
ಏತನ್ಮಧ್ಯೆ, ಮೂರನೇ ತ್ರೈಮಾಸಿಕದಲ್ಲಿ ತನ್ನ ಮುಂದಿನ ತಲೆಮಾರಿನ ಜಿಡಿಡಿಆರ್ 7 ಗ್ರಾಫಿಕ್ಸ್ ಮೆಮೊರಿ ಚಿಪ್ ನ ಪೂರ್ಣ ಪ್ರಮಾಣದ ಉತ್ಪಾದನೆಯನ್ನು ಪ್ರಾರಂಭಿಸಲು ಎಸ್ ಕೆ ಹೈನಿಕ್ಸ್ ಯೋಜಿಸಿದೆ.
ಹಿಂದಿನ ಜನರೇಶನ್ ಚಿಪ್ಗೆ ಹೋಲಿಸಿದರೆ ಶೇಕಡಾ 60ರಷ್ಟು ಹೆಚ್ಚುವರಿ ಸ್ಫೀಡ್ ಅಂದರೆ ಸೆಕೆಂಡಿಗೆ 32 ಗಿಗಾಬೈಟ್ ಆಪರೇಟಿಂಗ್ ಸ್ಪೀಡ್ನೊಂದಿಗೆ ಜಿಡಿಡಿಆರ್ 7 ಉದ್ಯಮಕ್ಕೆ ಅಗತ್ಯವಾದ ಎಲ್ಲ ಅಂಶಗಳನ್ನು ಒಳಗೊಂಡಿದೆ. ಹೈ-ಎಂಡ್ ಗ್ರಾಫಿಕ್ಸ್ ಕಾರ್ಡ್ಗಳಲ್ಲಿ ಇದನ್ನು ಅಳವಡಿಸಿದಲ್ಲಿ, ಈ ಚಿಪ್ ಒಂದು ಸೆಕೆಂಡಿನಲ್ಲಿ ಸುಮಾರು 300 ಪೂರ್ಣ-ಎಚ್ಡಿ ಚಲನಚಿತ್ರಗಳಿಗೆ ಸಮಾನವಾದ 1.5 ಟೆರಾಬೈಟ್ಗಳಿಗಿಂತ ಹೆಚ್ಚಿನ ಡೇಟಾವನ್ನು ಪ್ರೊಸೆಸ್ ಮಾಡಬಲ್ಲದು.
ಹೊಸ ಚಿಪ್ ತನ್ನ ಅಲ್ಟ್ರಾ-ಫಾಸ್ಟ್ ಡೇಟಾ ಸಂಸ್ಕರಣೆಯಿಂದ ಉಂಟಾಗುವ ಶಾಖ ಸಮಸ್ಯೆಗಳನ್ನು ಪರಿಹರಿಸುವ ಹೊಸ ಪ್ಯಾಕೇಜಿಂಗ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಹಿಂದಿನ ಪೀಳಿಗೆಗೆ ಹೋಲಿಸಿದರೆ ಸುಧಾರಿತ ವಿದ್ಯುತ್ ದಕ್ಷತೆಯನ್ನು ಹೊಂದಿದೆ.
ಇದನ್ನೂ ಓದಿ : ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಳಿಸಲು ಶಾಂತಿದೂತನಾಗಲಿದೆಯಾ ಭಾರತ? ವಿಶ್ಲೇಷಣೆ - Russia Ukraine Peace Talks