ಹೊಸ ಸ್ಮಾರ್ಟ್ ರಿಂಗ್ ನ ಹೆಚ್ಚಿನ ವಿವರಗಳು ತಿಳಿದು ಬಂದಿಲ್ಲವಾದರೂ, ಸ್ಯಾಮ್ ಸಂಗ್ ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್ ನಲ್ಲಿರುವ ಎಸ್ ಎಪಿ ಕೇಂದ್ರದಲ್ಲಿ ತನ್ನ ಇತ್ತೀಚಿನ ಗ್ಯಾಲಕ್ಸಿ ಎಸ್ ಸರಣಿಯ ಸ್ಮಾರ್ಟ್ ಫೋನ್ ಗಳಿಗಾಗಿ ಅನ್ ಪ್ಯಾಕ್ಡ್ ಈವೆಂಟ್ ನಲ್ಲಿ ಈ ಸಾಧನದ ಆಶ್ಚರ್ಯಕರ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಕಾರ್ಯಕ್ರಮದ ನಂತರ ಈ ಬಗ್ಗೆ ಮಾಹಿತಿ ನೀಡಿದ ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ನ ಮೊಬೈಲ್ ವಿಭಾಗದ ಮುಖ್ಯಸ್ಥ ರೋಹ್ ಟೇ-ಮೂನ್ ಅವರು ಕಂಪನಿಯ ಉಂಗುರ ಆಕಾರದ ಹೆಲ್ತ್ ಗ್ಯಾಜೆಟ್ ಬಿಡುಗಡೆ ಯೋಜನೆಯನ್ನು ವರದಿಗಾರರೊಂದಿಗೆ ಹಂಚಿಕೊಂಡಿದ್ದಾರೆ ಎಂದು ಯೋನ್ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
"ಗ್ಯಾಲಕ್ಸಿ ವಾಚ್ ತನ್ನದೇ ಆದ ಪ್ರಯೋಜನಗಳನ್ನು ಹೊಂದಿದೆ. ಆದರೆ ಕೆಲವು ಗ್ರಾಹಕರು ಎಲ್ಲ ಸಮಯದಲ್ಲೂ ಗಡಿಯಾರವನ್ನು ಧರಿಸಲು ಬಯಸುವುದಿಲ್ಲ. ಹೀಗಾಗಿ ಸ್ಯಾಮ್ಸಂಗ್ ಹೆಲ್ತ್ಗೆ ಅಗತ್ಯ ಆರೋಗ್ಯ ಮಾಹಿತಿಯನ್ನು ಕಳುಹಿಸಲು ಮತ್ತು ಅದನ್ನು 24/7, ವಾರವಿಡೀ ಮತ್ತು ವರ್ಷದ 365 ದಿನಗಳು ವಿಶ್ಲೇಷಿಸಲು ಗ್ಯಾಲಕ್ಸಿ ವಾಚ್ ಸಾಕಾಗುವುದಿಲ್ಲ. ಇದಕ್ಕಾಗಿಯೇ ಡಿಜಿಟಲ್ ಆರೋಗ್ಯ ವ್ಯವಸ್ಥೆ ಅಥವಾ ಸ್ಯಾಮ್ಸಂಗ್ ರಿಂಗ್ ಅಗತ್ಯವಾಗಿದೆ" ಎಂದು ಅವರು ತಿಳಿಸಿದರು.
ಗ್ಯಾಲಕ್ಸಿ ವಾಚ್ ಸ್ಯಾಮ್ಸಂಗ್ನ ಸ್ಮಾರ್ಟ್ವಾಚ್ ಆಗಿದ್ದು, ಇದು ವಿವಿಧ ಆರೋಗ್ಯ ಮತ್ತು ಫಿಟ್ನೆಸ್ ವೈಶಿಷ್ಟ್ಯಗಳನ್ನು ಹೊಂದಿದೆ. ಜೊತೆಗೆ ಸ್ಮಾರ್ಟ್ಫೋನ್ಗೆ ರಿಮೋಟ್ ಕಂಟ್ರೋಲ್ ಆಗಿ ಕಾರ್ಯನಿರ್ವಹಿಸುತ್ತದೆ. ಗ್ಯಾಲಕ್ಸಿ ವಾಚ್ ಗಿಂತ ಗ್ಯಾಲಕ್ಸಿ ರಿಂಗ್ ದೀರ್ಘಕಾಲದವರೆಗೆ ಧರಿಸಲು ಹೆಚ್ಚು ಸೂಕ್ತವಾಗಿದೆ ಮತ್ತು ಇದು ಆರೋಗ್ಯ ವೈಶಿಷ್ಟ್ಯಗಳ ಮೇಲೆ ಮಾತ್ರ ಗಮನ ಕೇಂದ್ರೀಕರಿಸುವುದರಿಂದ ಉತ್ತಮ ಬ್ಯಾಟರಿ ಬಾಳಿಕೆಯನ್ನು ಹೊಂದಿದೆ ಎಂದು ರೋಹ್ ಹೇಳಿದರು.
ಹೆಚ್ಚಿನ ಆರೋಗ್ಯ ಮತ್ತು ಫಿಟ್ನೆಸ್ ಟ್ರ್ಯಾಕರ್ ಗಳಂತೆ, ಗ್ಯಾಲಕ್ಸಿ ರಿಂಗ್ ಮೂಲಕ ಆರೋಗ್ಯ, ಫಿಟ್ನೆಸ್ ಮತ್ತು ನಿದ್ರೆಗೆ ಸಂಬಂಧಿಸಿದ ಡೇಟಾವನ್ನು ಸಂಬಂಧಿತ ಸಾಫ್ಟ್ವೇರ್ಗೆ ಟ್ರ್ಯಾಕ್ ಮಾಡಲು, ಅಳೆಯಲು, ಮೇಲ್ವಿಚಾರಣೆ ಮಾಡಲು ಮತ್ತು ಅಪ್ಲೋಡ್ ಮಾಡಲು ಸಾಧ್ಯವಾಗಲಿದೆ.