ವಾಷಿಂಗ್ಟನ್: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್)ದಲ್ಲಿ ಸಿಲುಕಿರುವ ನಾಸಾದ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರನ್ನು ಮರಳಿ ಕರೆತರಲು ನಾಸಾ-ಸ್ಪೇಸ್ ಎಕ್ಸ್ ಬಾಹ್ಯಾಕಾಶ ನೌಕೆಯು ಭಾನುವಾರ ಐಎಸ್ಎಸ್ನತ್ತ ಪಯಣ ಬೆಳೆಸಿದೆ. ಕ್ರೂ-9 (Crew-9) ತಂಡದ ಸದಸ್ಯರಾದ ನಾಸಾ ಗಗನಯಾತ್ರಿ ನಿಕ್ ಹೇಗ್ (ಕಮಾಂಡರ್) ಮತ್ತು ರೋಸ್ ಕಾಸ್ಮೋಸ್ ಗಗನಯಾತ್ರಿ ಅಲೆಕ್ಸಾಂಡರ್ ಗೋರ್ಬುನೊವ್ (ಮಿಷನ್ ಸ್ಪೆಷಲಿಸ್ಟ್) ಅವರು ಈ ನೌಕೆಯಲ್ಲಿ ಐಎಸ್ಎಸ್ಗೆ ತೆರಳಿದ್ದಾರೆ. ಮುಂದಿನ ವರ್ಷದ ಫೆಬ್ರವರಿ ವೇಳೆಗೆ ಸುನೀತಾ ವಿಲಿಯಮ್ಸ್ ಅವರನ್ನು ಭೂಮಿಗೆ ಕರೆತರುವ ನಿರೀಕ್ಷೆಯಿದೆ.
ಫ್ಲೋರಿಡಾದ ಕೇಪ್ ಕೆನವೆರಾಲ್ ಬಾಹ್ಯಾಕಾಶ ಪಡೆ ನಿಲ್ದಾಣದಿಂದ ಯಶಸ್ವಿಯಾಗಿ ಉಡಾವಣೆಯಾದ ನಂತರ ನಾಸಾ-ಸ್ಪೇಸ್ ಎಕ್ಸ್ ಮಿಷನ್ ಸುರಕ್ಷಿತವಾಗಿ ಕಕ್ಷೆಯನ್ನು ತಲುಪಿದೆ. ಬಾಹ್ಯಾಕಾಶ ಉಡಾವಣಾ ಸಂಕೀರ್ಣ -40 ರಿಂದ ಉಡಾವಣೆಯಾದ ಮೊದಲ ಮಾನವ ಬಾಹ್ಯಾಕಾಶ ಯಾನವಾಗಿರುವ ಈ ಮಿಷನ್ ಮಹತ್ವದ್ದಾಗಿದೆ.
Go #Crew9! A @SpaceX Dragon spacecraft is on its way to the @Space_Station following today's launch from Cape Canaveral Space Force Station in Florida. The new crew arrives at the orbiting lab Sunday, Sept. 29, for a five-month science mission: https://t.co/MGfQEm00Fd pic.twitter.com/sHtbOBEjlE
— NASA (@NASA) September 28, 2024
"ಸ್ಪೇಸ್ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ಪ್ರಯಾಣ ಬೆಳೆಸಿದೆ. ಹೊಸ ಗಗನಯಾತ್ರಿಗಳು ಐದು ತಿಂಗಳ ವೈಜ್ಞಾನಿಕ ಕಾರ್ಯಾಚರಣೆ ನಡೆಸಲಿದ್ದಾರೆ" ಎಂದು ನಾಸಾ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ. ನಾಸಾ ಪ್ರಕಾರ, ಭಾನುವಾರ ಸಂಜೆ 5:30ಕ್ಕೆ (ಭಾರತೀಯ ಕಾಲಮಾನ ಸೋಮವಾರ ಮುಂಜಾನೆ 3.30)ಕ್ಕೆ ನೌಕೆಯು ಐಎಸ್ಎಸ್ಗೆ ಲಂಗರು ಹಾಕಲಿದೆ.
ಪ್ರಸ್ತುತ ಐಎಸ್ಎಸ್ನಲ್ಲಿರುವ ನಾಸಾ ಗಗನಯಾತ್ರಿಗಳಾದ ಬ್ಯಾರಿ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರನ್ನು ಮರಳಿ ಕರೆತರುವ ಸಲುವಾಗಿ ಕ್ರೂ -9 ಮಿಷನ್ನಲ್ಲಿ ಎರಡು ಆಸನಗಳನ್ನು ಖಾಲಿ ಬಿಡಲಾಗಿದೆ. ಕ್ರೂ -9 ಮಿಷನ್ ಆರಂಭದಲ್ಲಿ ಗುರುವಾರ ಉಡಾವಣೆಯಾಗಬೇಕಿತ್ತು. ಆದರೆ ಪ್ರಸ್ತುತ ಫ್ಲೋರಿಡಾದ ಗಲ್ಫ್ ಕರಾವಳಿಯಲ್ಲಿ ಹೆಲೆನ್ ಚಂಡಮಾರುತ ಅಪ್ಪಳಿಸಿ ಹವಾಮಾನ ವೈಪರೀತ್ಯ ಉಂಟಾಗಿದ್ದರಿಂದ ಉಡಾವಣೆಯನ್ನು ಮುಂದೂಡಲಾಯಿತು.
ವಿಲಿಯಮ್ಸ್ ಮತ್ತು ವಿಲ್ಮೋರ್ ದೋಷಪೂರಿತ ಬೋಯಿಂಗ್ ಸ್ಟಾರ್ ಲೈನರ್ ನೌಕೆಯ ಮೂಲಕ ಎಂಟು ದಿನಗಳ ವಾಸ್ತವ್ಯಕ್ಕಾಗಿ ಐಎಸ್ಎಸ್ಗೆ ತಲುಪಿದ್ದರು. ಆದರೆ ಮರಳಿ ಬರುವಾಗ ಸ್ಟಾರ್ ಲೈನರ್ ಮಾನವರ ಪ್ರಯಾಣಕ್ಕೆ ಯೋಗ್ಯವಾಗಿಲ್ಲ ಎಂದು ನಾಸಾ ಘೋಷಿಸಿತ್ತು. ಹೀಗಾಗಿ ಇಬ್ಬರೂ ಗಗನಯಾತ್ರಿಗಳನ್ನು ಐಎಸ್ಎಸ್ನಲ್ಲಿಯೇ ಬಿಟ್ಟು ಸ್ಟಾರ್ ಲೈನರ್ ಭೂಮಿಗೆ ಮರಳಿತ್ತು. ಮೇ 2020ರಲ್ಲಿ ಪರೀಕ್ಷಾ ಹಾರಾಟ ನಡೆಸಿದ ನಂತರ ಇದೇ ಮೊದಲ ಬಾರಿಗೆ, ಸ್ಪೇಸ್ಎಕ್ಸ್ ಇಬ್ಬರು ಗಗನಯಾತ್ರಿಗಳನ್ನು ತನ್ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಮೂಲಕ ಐಎಸ್ಎಸ್ನತ್ತ ಕಳುಹಿಸುತ್ತಿದೆ.
ಇದನ್ನೂ ಓದಿ: ವಿಡಿಯೋ ಗೇಮ್‌ನಿಂದ ನಿಮ್ಮ ಮೂಡ್ ಪಾಸಿಟಿವ್: ಸಂಶೋಧನೆ - Positive Mood During Video Game