Europa Clipper Mission Delay: ಯುರೋಪಾ ಕ್ಲಿಪ್ಪರ್ ಗುರುಗ್ರಹದ ಚಂದ್ರ ಯುರೋಪಾವನ್ನು ಅನ್ವೇಷಿಸಲು ಮತ್ತು ಅದರ ಭೂಗತ ಸಾಗರ ವಾಸಯೋಗ್ಯವಾಗಿದೆಯೇ ಎಂದು ನಿರ್ಧರಿಸಲು NASA ಮಿಷನ್ ಆಗಿದೆ. ಸ್ಪೇಸ್‌ಎಕ್ಸ್ ಫಾಲ್ಕನ್ ಹೆವಿ ರಾಕೆಟ್ ಅನ್ನು ಉಡಾವಣೆ ಮಾಡಲು ಸಿದ್ಧತೆ ನಡೆಸಿತ್ತು. ಆದ್ರೆ ಸದ್ಯ ಮಿಲ್ಟನ್ ಚಂಡಮಾರುತದಿಂದಾಗಿ ಈ ಮಿಷನ್ ವಿಳಂಬವಾಗುತ್ತಿದೆ. ಅಮೆರಿಕದ ಫ್ಲೋರಿಡಾದ ಕೆಲವು ಭಾಗಗಳಿಗೆ ಈ ಚಂಡಮಾರುತ ಜೀವ-ಬೆದರಿಕೆ ಉಂಟುಮಾಡುವ ನಿರೀಕ್ಷೆಯಿದೆ ಎಂದು ಬಾಹ್ಯಾಕಾಶ ಸಂಸ್ಥೆ ಮಾಹಿತಿ ನೀಡಿದೆ.
ಅಕ್ಟೋಬರ್ 10 ರಂದು ಫ್ಲೋರಿಡಾದಲ್ಲಿ NASA ಕೆನಡಿಯ ಲಾಂಚ್ ಕಾಂಪ್ಲೆಕ್ಸ್ 39A ನಿಂದ ಸ್ಪೇಸ್‌ಎಕ್ಸ್‌ನ ಫಾಲ್ಕನ್ ಹೆವಿ ರಾಕೆಟ್‌ನಲ್ಲಿ ಗುರುಗ್ರಹದ ಹಿಮಾವೃತ ಚಂದ್ರ ಯುರೋಪಾ ಕುರಿತು ವಿವರವಾದ ತನಿಖೆಯನ್ನು ನಡೆಸಲು ಯುರೋಪಾ ಕ್ಲಿಪ್ಪರ್ ತನ್ನ ಮೊದಲ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಸಿದ್ಧವಾಗಿತ್ತು. ಆದ್ರೆ ಅಮೆರಿಕದಲ್ಲಿ ಮಿಲ್ಟನ್ ಚಂಡಮಾರುತವು ಅನೇಕ ಪ್ರದೇಶಗಳಲ್ಲಿ ತನ್ನ ಆರ್ಭಟ ಮುಂದುವರಿಸಿದೆ. ಗಲ್ಫ್ ಕರಾವಳಿಯತ್ತ ಬೀಸುತ್ತಿರುವಂತೆಯೇ ಫ್ಲೋರಿಡಾದ ಕೆಲವು ಭಾಗಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಹೀಗಾಗಿ ಈ ಮಿಷನ್ ಕಾರ್ಯಾಚರಣೆಯನ್ನು ನಾಸಾ ವಿಳಂಬಗೊಳಿಸಿದೆ.
ಪ್ರದೇಶದಲ್ಲಿ ನಿರೀಕ್ಷಿತ ಚಂಡಮಾರುತದ ಪರಿಸ್ಥಿತಿಗಳಿಂದಾಗಿ ಯುರೋಪಾ ಕ್ಲಿಪ್ಪರ್ ಮಿಷನ್‌ನ ಅಕ್ಟೋಬರ್ 10 ರ ಉಡಾವಣಾ ಪ್ರಯತ್ನದಿಂದ ನಾಸಾ ಮತ್ತು ಸ್ಪೇಸ್‌ಎಕ್ಸ್ ವಿಳಂಬಗೊಳಿಸುತ್ತಿದೆ ಎಂದು ನಾಸಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನ ಮೂಲಕ ಮಾಹಿತಿ ನೀಡಿದೆ.
ಚಂಡಮಾರುತ ಪ್ರಭಾವ ಕಡಿಮೆಗೊಂಡ ಬಳಿಕ ಸಿಬ್ಬಂದಿ ಕೆಲಸಕ್ಕೆ ಮರಳುವ ಮೊದಲು ರಿಕವರಿ ಟೀಂ ಬಾಹ್ಯಾಕಾಶ ನಿಲ್ದಾಣದ ಸುರಕ್ಷತೆ ಮತ್ತು ಉಡಾವಣಾ ಸಂಸ್ಕರಣಾ ಸೌಲಭ್ಯಗಳ ಬಗ್ಗೆ ಗಮನಹರಿಸುತ್ತವೆ. ಏನಾದ್ರೂ ಸಮಸ್ಯೆ ಕಂಡು ಬಂದಲ್ಲಿ ಅದನ್ನು ನಿರ್ವಹಿಸಿದ ಬಳಿಕ ನಮ್ಮ ಕಾರ್ಯಾಚರಣೆ ಮುಂದುವರಿಯುತ್ತದೆ ಎಂದು ನಾಸಾ ಹೇಳಿದೆ.
ಉಡಾವಣಾ ತಂಡದ ಸಿಬ್ಬಂದಿಯ ಸುರಕ್ಷತೆಯು ನಮ್ಮ ಹೆಚ್ಚಿನ ಆದ್ಯತೆಯಾಗಿದೆ. ಯುರೋಪಾ ಕ್ಲಿಪ್ಪರ್ ಬಾಹ್ಯಾಕಾಶ ನೌಕೆಯನ್ನು ರಕ್ಷಿಸಲು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುವುದು ಎಂದು ನಾಸಾದ ಉಡಾವಣಾ ಸೇವೆಗಳ ಕಾರ್ಯಕ್ರಮದ ಹಿರಿಯ ಉಡಾವಣಾ ನಿರ್ದೇಶಕ ಟಿಮ್ ಡನ್ ಅವರು ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಇನ್ನು ನಾಸಾ ಮುಂದಿನ ಈ ಮಿಷನ್ ಉಡಾವಣಾ ದಿನಾಂಕವನ್ನು ಘೋಷಿಸದಿದ್ದರೂ ನವೆಂಬರ್ 6 ರೊಳಗೆ ರಾಕೆಟ್ ಉಡಾವಣೆ ಆಗಲಿದೆ ಎಂದು ಅಮೆರಿಕ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಯುರೋಪಾ ಕ್ಲಿಪ್ಪರ್ ಗುರು ವ್ಯವಸ್ಥೆಯನ್ನು ತಲುಪಲು 2.6 ಶತಕೋಟಿ ಕಿಲೋಮೀಟರ್ ಪ್ರಯಾಣಿಸಬೇಕಾಗಿದ್ದು, ಅದು 2030ಕ್ಕೆ ತಲುಪುವ ಸಾಧ್ಯತೆ ಇದೆ.
ಮಿಲ್ಟನ್ ಚಂಡಮಾರುತವು ಈ ವಾರ ಗಲ್ಫ್ ಆಫ್ ಮೆಕ್ಸಿಕೊದಿಂದ ಪೂರ್ವಕ್ಕೆ ಬಾಹ್ಯಾಕಾಶ ಕರಾವಳಿಗೆ ಚಲಿಸುವ ನಿರೀಕ್ಷೆಯಿದೆ. ಫ್ಲೋರಿಡಾದ ಪೂರ್ವ ಕರಾವಳಿಯ ಕೇಪ್ ಕೆನವೆರಲ್ ಮತ್ತು ಮೆರಿಟ್ ದ್ವೀಪ ಪ್ರದೇಶಗಳಲ್ಲಿ ಹೆಚ್ಚಿನ ಗಾಳಿ ಮತ್ತು ಭಾರೀ ಮಳೆಯನ್ನು ನಿರೀಕ್ಷಿಸಲಾಗಿದೆ.
ಓದಿ: ರಿನಿವಬಲ್ ಎನರ್ಜಿಯಿಂದ ವಿದ್ಯುತ್ ಉತ್ಪಾದನೆ ಮಹತ್ವದ ಸಾಧನೆ: ಜರ್ಮನಿಯಲ್ಲಿ ಸಚಿವ ಜೋಶಿ ಪ್ರತಿಪಾದನೆ