ನವದೆಹಲಿ: ಟೆಕ್ ದೈತ್ಯ ಗೂಗಲ್ ಭಾರತದಲ್ಲಿನ ಆ್ಯಂಡ್ರಾಯ್ಡ್ ಬಳಕೆದಾರರಿಗಾಗಿ ’ಗೂಗಲ್ ವಾಲೆಟ್’ ಆ್ಯಪ್ ಪರಿಚಯಿಸಿದೆ. ಈ ವಾಲೆಟ್ ಮೂಲಕ ಬೋರ್ಡಿಂಗ್ ಪಾಸ್, ಲಾಯಲ್ಟಿ ಕಾರ್ಡ್ಸ್, ಈವೆಂಟ್ ಟಿಕೆಟ್, ಸಾರ್ವಜನಿಕ ಸಾರಿಗೆ ಪಾಸ್ಗಳ ಮಾಹಿತಿಯನ್ನು ಸಂಗ್ರಹಿಸಬಹುದಾಗಿದೆ.
ಗೂಗಲ್ ವಾಲೆಟ್ ಸಂಪೂರ್ಣವಾಗಿ ಡಿಜಿಟಲ್ ವಾಲೆಟ್ ಆಗಿದ್ದು, ಬುಧವಾರದಿಂದ ಭಾರತದಲ್ಲಿ ಕಾರ್ಯ ನಿರ್ವಹಿಸಲಿದೆ. ಪ್ರಸ್ತುತ ಇರುವ ಗೂಗಲ್ ಪೇ ಪೇಮೆಂಟ್ ಆ್ಯಪ್ಗೆ ಪೂರಕ ಸೇವೆಯನ್ನು ಇದು ನೀಡಲಿದೆ. ಗೂಗಲ್ ಪೇ ಮತ್ತು ಗೂಗಲ್ ವಾಲೆಟ್ ಸಂಪೂರ್ಣವಾಗಿ ವಿಭಿನ್ನವಾಗಿದೆ ಎಂದು ಗೂಗಲ್ ತಿಳಿಸಿದೆ.
ಗೂಗಲ್ ಪೇ ಎಲ್ಲಿಯೂ ಹೋಗಲ್ಲ. ಇದು ಪ್ರಾಥಮಿಕ ಪೇಮೆಂಟ್ ಆ್ಯಪ್ ಆಗಿ ಕಾರ್ಯ ನಿರ್ವಹಿಸಲಿದೆ. ಗೂಗಲ್ ವಾಲೆಟ್ ಪಾವತಿ ರಹಿತ ಬಳಕೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಗೂಗಲ್ನ ಆ್ಯಂಡ್ರಾಯ್ಡ್ ಜಿಎಂ ಮತ್ತು ಇಂಡಿಯಾ ಇಂಜಿನಿಯರಿಂಗ್ ಮುಖ್ಯಸ್ಥ ರಾಮ್ ಪಪಟ್ಲಾ ತಿಳಿಸಿದ್ದಾರೆ.
ಏರ್ ಇಂಡಿಯಾ, ಇಂಡಿಗೋಮ ಫ್ಲಿಪ್ಕಾರ್ಟ್, ಪೈನ್ ಲ್ಯಾಬ್ಸ್, ಕೊಚ್ಚಿ ಮೆಟ್ರೋ, ಪಿವಿಆರ್ ಮತ್ತು ಐನಾಕ್ಸ್ನಂತಹ ಭಾರತದ 20 ಬ್ರಾಂಡ್ಗಳೊಂದಿಗೆ ಗೂಗಲ್ ಸಹಭಾಗಿತ್ವ ಹೊಂದಿದೆ. ಈ ತಿಂಗಳಲ್ಲಿ ಮತ್ತುಷ್ಟು ಭಾಗಿದಾರರು ಸೇರಲಿದ್ದಾರೆ.
ಇದರ ಕಾರ್ಯನಿರ್ವಹಣೆ ಹೇಗಿರುತ್ತದೆ?: ಯಾವುದೇ ಬಿಲ್, ಟಿಕೆಟ್, ಅಗತ್ಯ ರಶೀದಿಗಳನ್ನು ಜೋಪಾನ ಮಾಡುವ ಡಿಜಿಟಲ್ ಸಾಫ್ಟವೇರ್ ಆಗಿ ಇದು ಕಾರ್ಯ ನಿರ್ವಹಿಸಲಿದೆ. ಇಲ್ಲಿ ಬಳಕೆದಾರರು ಸಿನಿಮಾ, ಈವೆಂಟ್ ಟಿಕೆಟ್, ಬೋರ್ಡಿಂಗ್ ಪಾಸ್, ಸಾರ್ವಜನಿಕ ಸಾರಿಗೆ ಪಾಸ್, ಗಿಫ್ಟ್ ಕಾರ್ಡ್ ಸೇರಿದಂತೆ ಎಲ್ಲವನ್ನು ಗೂಗಲ್ ವಾಲೆಟ್ನಲ್ಲಿ ಸುರಕ್ಷಿತವಾಗಿಡಬಹುದು. ಅಗತ್ಯ ಸಮಯದಲ್ಲಿ ಬಳಕೆ ಮಾಡಬಹುದು.
ಗೂಗಲ್ ವಾಲೆಟ್ ಬಳಕೆದಾರರಿಗೆ ತಮಗೆ ಬೇಕಾದ ಕಾರ್ಡ್, ಟಿಕೆಟ್ ಮತ್ತು ಪಾಸ್ಗಳನ್ನು ಶೀಘ್ರ ಪತ್ತೆ ಮಾಡಲು ಸಹಾಯ ಮಾಡುವುದರ ಜೊತೆಗೆ ಶೀಘ್ರವಾಗಿ ಸ್ಥಳದ ಆಧಾರದ ಮೇಲೆ ಕೂಡ ಹುಡುಕಲು ಸಹಾಯ ಮಾಡುತ್ತದೆ. ಅದರ ಜೊತೆಗೆ ಅದನ್ನು ಜೋಪಾನ ಕೂಡಾ ಮಾಡುತ್ತದೆ ಎಂದು ಗೂಗಲ್ ತಿಳಿಸಿದೆ.
ಗೂಗಲ್ ಶೀಘ್ರದಲ್ಲೇ ಭವಿಷ್ಯದಲ್ಲಿ ಪಾವತಿ ಮತ್ತು ಪಾವತಿ ರಹಿತ ವ್ಯವಸ್ಥೆಯನ್ನು ಎರಡನ್ನೂ ಒಂದೇ ಆ್ಯಪ್ನಲ್ಲಿ ತರುವ ಪ್ರಯತ್ನ ಮಾಡಲಿದೆ. ಗೂಗಲ್ ವಾಲೆಟ್ ಅನ್ನು ರಕ್ಷಣೆ ಮತ್ತು ಖಾಸಗಿತನ ಅಧಾರದ ಮೇಲೆ ಅಭಿವೃದ್ಧಿ ಮಾಡಲಾಗಿದೆ. ಇದು ಬಳಕೆದಾರರಿಗೆ ಮುಕ್ತ, ಆಯ್ಕೆ ಮತ್ತು ಸುರಕ್ಷತೆ ಭರವಸೆ ನೀಡಲಿದೆ ಎಂದು ಗೂಗಲ್ ತಿಳಿಸಿದೆ. ಸದ್ಯ ಗೂಗಲ್ ವಾಲೆಟ್ 80 ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಇದನ್ನೂ ಓದಿ: ನಿಯಮ ಉಲ್ಲಂಘನೆ: ಪ್ಲೇಸ್ಟೋರ್ನಿಂದ 20 ಲಕ್ಷ ಆ್ಯಪ್ ತೆಗೆದುಹಾಕಿದ ಗೂಗಲ್