ಬೆಂಗಳೂರು: ಮೊಬೈಲ್ ಅಂಗಡಿಯಲ್ಲಿ ಹಾಕಲಾಗಿದ್ದ ಹಾಡಿನ ಸೌಂಡ್ ಜಾಸ್ತಿಯಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿ, ಅಂಗಡಿ ಮಾಲೀಕನ ಮೇಲೆ ಯುವಕರು ಸೇರಿಕೊಂಡು ಹಲ್ಲೆ ನಡೆಸಿರುವ ಘಟನೆ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ನಗರ್ತಪೇಟೆಯಲ್ಲಿ ಭಾನುವಾರ ನಡೆದಿದೆ. ಈ ಸಂಬಂಧ ಹಲಸೂರು ಗೇಟ್ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಸುಲೇಮಾನ್, ಶನವಾಜ್ ಹಾಗೂ ರೋಹಿತ್ ಬಂಧಿತ ಆರೋಪಿಗಳು. ಕೃಷ್ಣ ಟೆಲಿಕಾಂ ಮಾಲೀಕ ಮುಖೇಶ್ ಮೇಲೆ ಆರೋಪಿಗಳು ಹಲ್ಲೆ ಮಾಡಿದ್ದರು.
ಹಲ್ಲೆಗೊಳಗಾಗಿರುವ ಮುಖೇಶ್ ಕೆಲ ವರ್ಷಗಳಿಂದ ನಗರ್ತಪೇಟೆಯಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಆರೋಪಿಗಳು ಸಹ ಅಕ್ಕಪಕ್ಕದ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದವರು ಎಂದು ತಿಳಿದುಬಂದಿದೆ. ನಿನ್ನೆ ಸಂಜೆ 6.30ರ ಸುಮಾರಿಗೆ ಅಂಗಡಿಗೆ ಬಂದ ಯುವಕರು, ''ಅಂಗಡಿಯಲ್ಲಿ ಹಾಕಲಾಗಿದ್ದ ಹಾಡನ್ನು ನಿಲ್ಲಿಸು, ಜೋರಾಗಿ ಹಾಡು ಹಾಕುವುದರಿಂದ ನಮಗೆ ಸಮಸ್ಯೆಯಾಗುತ್ತಿದೆ'' ಎಂದು ಪಟ್ಟು ಹಿಡಿದ್ದಾರೆ. ಈ ವೇಳೆ ಮಾಲೀಕ ಮುಖೇಶ್ ಹಾಗೂ ಆರೋಪಿಗಳ ನಡುವೆ ಮಾತಿನ ಚಕಮಕಿ ನಡೆದಿತ್ತು.
ಇದ್ದಕ್ಕಿದ್ದಂತೆ ಆರೋಪಿಗಳ ಗುಂಪಿನಲ್ಲಿದ್ದ ಓರ್ವ ಯುವಕ ಮುಖೇಶ್ ಮೇಲೆ ಹಲ್ಲೆ ಮಾಡಿದ್ದಾನೆ. ಇದಕ್ಕೆ ಮುಖೇಶ್ ಕೂಡ ಪ್ರತಿರೋಧ ವ್ಯಕ್ತಪಡಿಸಿದ್ದರು. ಬಳಿಕ ಅಂಗಡಿಯಿಂದ ಹೊರಬಂದ ಮಾಲೀಕನ ಮೇಲೆ ಆರೋಪಿಗಳು ಮನಬಂದಂತೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಆರೋಪಿಗಳು ಹಲ್ಲೆ ಮಾಡಿರುವ ದೃಶ್ಯ ಅಂಗಡಿ ಹೊರಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮರದಲ್ಲಿ ಸೆರೆಯಾಗಿದ್ದು, ವೈರಲ್ ಆಗಿತ್ತು.
ಮುಖೇಶ್ ನೀಡಿದ ದೂರಿನ ಮೇರೆಗೆ ಹಲಸೂರು ಗೇಟ್ ಠಾಣೆಯಲ್ಲಿ ಸುಲೇಮಾನ್, ಶನವಾಜ್, ರೋಹಿತ್, ದ್ಯಾನೀಶ್ ಹಾಗೂ ತರುಣ್ ಎಂಬುವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಸದ್ಯ ಮೂವರು ಆರೋಪಿಗಳನ್ನ ಬಂಧಿಸಲಾಗಿದೆ. ಇನ್ನೂ ಕೆಲ ಆರೋಪಿಗಳಿಗಾಗಿ ಶೋಧ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ದಾವಣಗೆರೆ: ಪಾನಿಪೂರಿ ಸೇವಿಸಿ ಅಸ್ವಸ್ಥ; ಚಿಕಿತ್ಸೆ ಫಲಿಸದೇ 6 ವರ್ಷದ ಬಾಲಕ ಸಾವು