ಬೆಂಗಳೂರು : ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಹಲ್ಲೆ, ದರೋಡೆ ಮತ್ತು ಕೊಲೆ ಪ್ರಕರಣಗಳು ಹೆಚ್ಚುತ್ತಿವೆ. ಇದೀಗಾ ಜಗಜೀವನ್‌ರಾಮ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಲೂನ್ ಶಾಪ್‌ವೊಂದಕ್ಕೆ ನುಗ್ಗಿದ ದುಷ್ಕರ್ಮಿಗಳ ಗುಂಪೊಂದು ಯುವಕನಿಗೆ ರೇಸರ್ ನಿಂದ ಇರಿದು ಮಾರಣಾಂತಿಕ ಹಲ್ಲೆೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜೆಜೆನಗರದ ಶಾಹಿದ್ ಅಹಮದ್ ಚಾಕು ಇರಿತಕ್ಕೆೆ ಒಳಗಾದ ಯುವಕ. ತಬ್ರೇಜ್ ನದೀಂ, ಗುಡ್ಡು, ವಾಹೀಂ, ರಾಹಿಲ್ ರಿಯಾನ್, ರೋಷನ್, ಸಲೀಂ ಪರಾರಿಯಾಗಿರುವ ಆರೋಪಿಗಳು.
ಜ.16ರಂದು ರಾತ್ರಿ 9.30ಕ್ಕೆ ಸೆಲೂನ್ ಶಾಪ್ ಮುಂದಿನ ಹಣದ ಕೊಡದ್ದಕ್ಕಾಗಿ ಹಲ್ಲೆಗೊಳಗಾದ ಶಾಹಿದ್ ಅಹಮದ್ ಹಾಗೂ ಆರೋಪಿಗಳ ನಡುವೆ ಜಗಳ ನಡೆದಿತ್ತು. ಜಗಳ ತಾರಕಕ್ಕೇರಿದಾಗ ಐವರು ಆರೋಪಿಗಳು ಶಾಹಿದ್ ಅಹಮದ್ ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದರು. ಆತಂಕಗೊಂಡ ಶಾಹಿದ್ ಅಹಮದ್ ಪಕ್ಕದಲ್ಲಿದ್ದ ಸೆಲೂನ್ ಶಾಪ್‌ನೊಳಗೆ ತೆರಳಿ ಆರೋಪಿಗಳಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು.
ಇವರನ್ನು ಹಿಂಬಾಲಿಸಿಕೊಂಡು ಸೆಲೂನ್ ಶಾಪ್ ಒಳಗೆ ಬಂದ ಆರೋಪಿಗಳು ರೇಸರ್ ನಿಂದ ಇರಿದು ಹಲ್ಲೆ ನಡೆಸಿದ್ದಾರೆ. ಯುವಕರ ಪುಂಡಾಟದ ದೃಶ್ಯ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. ಗಾಯಾಳು ಶಾಹಿದ್ ಅಹಮದ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೆಜೆ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗೆ ಶೋಧ ನಡೆಸುತ್ತಿದ್ದಾರೆ.
ನನ್ನ ಬಳಿ ಹಣ ಕೇಳದಾಗ ಇಲ್ಲ ಎಂದು ಹೇಳಿದೆ. ಅದಕ್ಕೆ ನನ್ನೊಂದಿಗೆ ಜಗಳವಾಡಿದರು. ಬಳಿಕ ನಾನು ಸಲೂನ್ ಒಳಗೆ ಬಂದು ಕುಳಿತುಕೊಂಡಿದ್ದೆ. ಅಲ್ಲಿಗೆ ನಾಲ್ಕು ಜನರು ಬಂದು ಹಲ್ಲೆ ಮಾಡಿ ರೇಸರ್ ನಿಂದ ಇರಿದರು. ಜೇಬಿನಲ್ಲಿದ್ದ 11 ಸಾವಿರ ರೂ., ವಾಚ್ ಮತ್ತು ಬೆಳ್ಳಿ ಸರವನ್ನು ಕಸಿದುಕೊಂಡಿದ್ದಾರೆ ಎಂದು ಹಲ್ಲೆಗೊಳಗಾದ ಶಾಹಿದ್ ಅಹಮದ್ ಆರೋಪಿಸಿದ್ದಾರೆ.
ಡೇಟಿಂಗ್ ಹೋದವನ ಮೇಲೆ ಹಲ್ಲೆ : ಮತ್ತೊಂದೆಡೆ ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ವ್ಯಕ್ತಿಯನ್ನು ರಾತ್ರೋರಾತ್ರಿ ಮನೆಗೆ ಕರೆಯಿಸಿಕೊಂಡು ಆತನನ್ನು ಹಣಕ್ಕೆ ಒತ್ತಾಯಿಸಿ, ನಾಲ್ವರು ಹಲ್ಲೆ ಮಾಡಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಮಮೂರ್ತಿನಗರ ಎನ್ಐಆರ್ ಲೇಔಟ್ ಯುವಕನೊಬ್ಬ ನೀಡಿದ ದೂರಿನ ಮೇರೆಗೆ ಮಡಿವಾಳ ಪೊಲೀಸರು ನಾಲ್ವರ ವಿರುದ್ಧ ಹಲ್ಲೆ ಪ್ರಕರಣ ದಾಖಲಿಕೊಂಡು, ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.
ಹಲ್ಲೆಗೊಳಗಾಗಿರುವ ಯುವಕ ಸಲಿಂಗಕಾಮಿಯಾಗಿದ್ದು, ಡೇಟಿಂಗ್ ಆ್ಯಪ್ವೊಂದರಲ್ಲಿ ಯುವಕನೊಬ್ಬನನ್ನು ಪರಿಚಯಿಸಿಕೊಂಡಿದ್ದ. ಫೋನ್ ನಂಬರ್ ಪಡೆದು ತಾವರೆಕೆರೆಯಲ್ಲಿರುವ ಮನೆಗೆ ಬರುವಂತೆ ಜನವರಿ 10 ರಂದು ಅಪರಿಚಿತನೊಬ್ಬ ಆಹ್ವಾನಿಸಿದ್ದನು. ಪರಿಚಿತನ ಸೂಚನೆ ಮೇರೆಗೆ ಅಂದು ರಾತ್ರಿ ಯುವಕ, ಆರೋಪಿಯ ಮನೆಗೆ ಹೋಗಿದ್ದನು. ಈ ವೇಳೆ ಆರೋಪಿ ಮನೆಯಲ್ಲಿ ಇನ್ನೂ ಮೂವರು ಉಳಿದುಕೊಂಡಿದ್ದರು. ಈ ವೇಳೆ, ಹಣ ನೀಡುವಂತೆ ನಾಲ್ವರು ಒತ್ತಾಯಿಸಿದ್ದತು. ಹಣವಿಲ್ಲ ಎಂದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆಲ್ಟ್ ನಿಂದ ಹೊಡೆದು ಮನಬಂದಂತೆ ಹಲ್ಲೆ ಮಾಡಿದ್ದರು. ಹೊಸೂರು ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಜ.12 ರಂದು ನೀಡಿದ ದೂರಿನ ಮೇರೆಗೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಬಂಧನಕ್ಕಾಗಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಮಂಗಳೂರು: ಕಾಲೇಜು ವಿದ್ಯಾರ್ಥಿಗಳ ಮೇಲೆ ನೈತಿಕ ಪೊಲೀಸ್ ಗಿರಿ; ಮೂವರ ಬಂಧನ