ಮೈಸೂರು: ಮೂರನೇ ಬಾರಿ ನರೇಂದ್ರ ಮೋದಿ ಅವರು ಪ್ರಧಾನಿ ಆಗುತ್ತಾರೆ. ಅದರಲ್ಲಿ ಯಾವುದೇ ಸಂಶಯವಿಲ್ಲ, ಅವರು ಪ್ರಧಾನಿ ಆಗುತ್ತಾರೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಈಟಿವಿ ಭಾರತದೊಂದಿಗಿನ ಸಂದರ್ಶನದಲ್ಲಿ ವಿವರಿಸಿದ್ದಾರೆ.
ಕುವೆಂಪು ನಗರದಲ್ಲಿನ ಬಿಜೆಪಿ ಚುನಾವಣಾ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿ ಬಳಿಕ ಈಟಿವಿ ಭಾರತದ ಪ್ರತಿನಿಧಿಯೊಂದಿಗೆ ಚುನಾವಣಾ ಪ್ರಚಾರದ ಅನುಭವ, ಫಲಿತಾಂಶ, ಕಾರ್ಯಕರ್ತರ ಸಹಕಾರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಕ್ಯಾಂಪೇನ್ ಅನುಭವ: ಕ್ಯಾಂಪೇನ್ ಮಾಡಿದ್ದು ಒಂದು ಒಳ್ಳೆ ಅನುಭವವಾಗಿದೆ. ನಾನು ರಾಜಕೀಯಕ್ಕೆ ಇಳಿದ ತಕ್ಷಣವೇ ಚುನಾವಣೆಗೆ ಸ್ಪರ್ಧಿಸಿರುವುದು. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಸ್ಥಳೀಯ ನಾಯಕರವರೆಗೆ ಹಾಗೂ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಎಲ್ಲರೂ ನನಗೆ ಸಹಾಯ ಮಾಡಿದ್ದಾರೆ. ಆದರಿಂದ ಯಶಸ್ವಿಯಾಗುವೆ. ಫಲಿತಾಂಶ ನಮ್ಮ ಪರವಾಗಿ ಬರುತ್ತದೆ. ಎಷ್ಟು ಲೀಡ್ ನಿಂದ ಬರುತ್ತದೆ ಅನ್ನೋದು ಗೊತ್ತಿಲ್ಲ. ಮೂರನೇಯ ಬಾರಿಗೆ ಮೋದಿ ಪ್ರಧಾನಿ ಆಗೇ ಆಗುತ್ತಾರೆ, ಅದರಲ್ಲಿ ಯಾವುದೇ ಸಂಶಯ ಇಲ್ಲ. ಜನರು ನೀಡಿರುವ ಉತ್ಸಾಹ, ಪ್ರೀತಿಗೆ ನಾವು ಚಿರಋಣಿಯಾಗಿರುತ್ತೇವೆ ಹಾಗೂ ಎಲ್ಲರಿಗೂ ನನ್ನ ಕೃತಜ್ಞತೆ ಹೇಳುತ್ತೇನೆ. ನಿಮ್ಮ ಮತದಾನದ ಮೂಲಕ ನಾನು ಆಯ್ಕೆ ಆದರೆ ನಿಮ್ಮ ಜೊತೆಯಲ್ಲೇ ಕೆಲಸ ಮಾಡುತ್ತೇನೆ ಎಂದರು.
ಜನರು ತಮ್ಮ ಆಕಾಂಕ್ಷೆಗಳು, ನಿರೀಕ್ಷೆಗಳನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಉತ್ಸಾಹದಿಂದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಸಂಘ ಸಂಸ್ಥೆಗಳು, ಜನರು ನನಗೆ ಕೆಲವು ಸಲಹೆ ಹಾಗು ಸಹಕಾರ ಕೊಟ್ಟಿದ್ದಾರೆ. ಅವರಿಗೆಲ್ಲಾ ನನ್ನ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಹೇಳಿದರು.
ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವೆ: ಜನರು ಅಂದಿನ ಕಾಲದಲ್ಲಿ ರಾಜರು ಯಾವ ರೀತಿ ಕೆಲಸ ಮಾಡಿದ್ದರು. ಯಾವ ತತ್ವದಿಂದ ನಾಯಕನ ಪಾತ್ರ ವಹಿಸಿದ್ದರು ಎಂದು ಅವರು ನಿರೀಕ್ಷೆ ಮಾಡುತ್ತಾರೆ. ಅದನ್ನ ನಾವು ಕಾಪಾಡಿಕೊಂಡು ನಮ್ಮ ಕೆಲಸವನ್ನು ನಿರ್ವಹಿಸಿಕೊಂಡು ಹೋಗುತ್ತೇನೆ ಎಂದು ಭರವಸೆ ನೀಡಿದರು.
ಚುನಾವಣೆ ಒಳ್ಳೆಯ ಅನುಭವ: ಚುನಾವಣೆಯಲ್ಲಿ ಒಳ್ಳೆಯ ಅನುಭವಾಗಿದೆ. ಸಿಹಿಯು ಇತ್ತು, ಕಹಿಯೂ ಇತ್ತು. ಕಹಿಯು ಜೀವನದಲ್ಲಿ ಕಲಿಯುವ ಅವಕಾಶ ಮಾಡಿಕೊಟ್ಟಿದೆ. ಸಿಹಿ ನಮಗೆ ಇನ್ನೂ ಶಕ್ತಿ ತುಂಬಿದೆ. ಹಿಂದೆ ಹೇಗೆ ಇದ್ದೆ, ಮುಂದೆಯೂ ಕೂಡಾ ಹಾಗೆಯೇ ಇರುತ್ತೇನೆ. ಅರಮನೆ ನನ್ನ ಮನೆ ಅಷ್ಟೇ, ಅಲ್ಲಿ ನಾನು ವಾಸವಾಗಿರುವುದು. ಅದರಲ್ಲಿ ಏನು ಬದಲಾವಣೆ ಇರುವುದಿಲ್ಲ. ನನ್ನ ಕಚೇರಿಯಲ್ಲಿ ಎಲ್ಲಾ ಸೌಲಭ್ಯ ಇರುತ್ತದೆ. ನಾನು ಆಯ್ಕೆ ಆದರೆ ಕಾರ್ಯಾಲಯದ ಮೂಲಕ ಎಲ್ಲರಿಗೂ ಕೆಲಸವನ್ನು ಮಾಡಿಕೊಡುತ್ತೇನೆ ಎಂದರು.
ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸ ಬರಲು ಸಿದ್ದರಾಮಯ್ಯ ಕಾರಣ: ಆರ್. ಅಶೋಕ್ - R Ashok