ಬೆಂಗಳೂರು: ''ನಮ್ಮ ರಾಜ್ಯಕ್ಕೆ ಪದೇ ಪದೆ ಅನ್ಯಾಯವಾಗುತ್ತಿದೆ. ಇದರ ಬಗ್ಗೆ ನಾವು ಹೋರಾಟ ಮುಂದುವರೆಸುತ್ತೇವೆ'' ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸದಾಶಿವನಗರ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ರಾಜ್ಯಕ್ಕೆ ತೆರಿಗೆ ಪಾಲು ಕಡಿತ ಆರೋಪ ವಿಚಾರವಾಗಿ ಪ್ರತಿಕ್ರಿಯಿಸುತ್ತ, ''ಕರ್ನಾಟಕದ ಜಿಎಸ್ಟಿ ಹೆಚ್ಚಿದೆ. ನಮಗಿಂತ ಆಂಧ್ರಪ್ರದೇಶಕ್ಕೆ ಹೆಚ್ಚು ಹಣ ಕೊಟ್ಟಿದ್ದಾರೆ. ಆಂಧ್ರಕ್ಕಿಂತ ನಮಗೆ ಬರಬೇಕಾದ ತೆರಿಗೆ ಪಾಲು ಕಡಿಮೆಯಾಗಿದೆ. ನಮ್ಮ ತೆರಿಗೆ - ನಮ್ಮ ಹಕ್ಕು ರೂಪಿಸುತ್ತೇವೆ. ಹಣಕಾಸು ಸಚಿವರು ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ. ಬಿಜೆಪಿ ಸಂಸದರು ಸುಮ್ಮನೆ ಕೂತಿದ್ದಾರೆ. ನಾವು ಹೋರಾಟ ಮುಂದುವರೆಸುತ್ತೇವೆ'' ಎಂದರು.
ಸರ್ಕಾರದ ಜಾಹೀರಾತಿಗೆ ಆಕ್ಷೇಪ ವಿಚಾರವಾಗಿ ಮಾತನಾಡಿ, ''ನಮಗಿರುವ ಮಾಹಿತಿಯನ್ನು ಹಾಕಿದ್ದೇವೆ. ನಾವು ನಡೆದುಕೊಂಡು ಹೋಗ್ತಿರುವ ದಾರಿಯ ಆಧಾರದ ಮೇಲೆ ನೋಡುತ್ತಿದ್ದೇವೆ. ನಮ್ಮ ಭಾವನೆಗಳ ಮೇಲೆ ಜಾಹೀರಾತು ಹಾಕಿದ್ದೇವೆ. ಅದನ್ನು ಸದನದಲ್ಲಿ ಮಾತನಾಡುತ್ತೇವೆ. ಅವರು ಏನು ಬೇಕಾದರೂ ಮಾಡಲಿ'' ಎಂದು ತಿರುಗೇಟು ನೀಡಿದರು.
''ಈ ವರ್ಷ ದಸರಾ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದೇವೆ. ಚಾಮುಂಡೇಶ್ವರಿ ತಾಯಿ ಮಳೆ, ಬೆಳೆ ಕೊಟ್ಟಿದ್ದಾಳೆ. ನೀರಿಗಾಗಿ ತಮಿಳುನಾಡಿನ ಹೋರಾಟ ಕಡಿಮೆಯಾಗಿದೆ. ಎಲ್ಲ ಡ್ಯಾಂಗಳು ತುಂಬಿವೆ. ಆರು ದಿನದಲ್ಲೇ ತುಂಗಭದ್ರಾ ಡ್ಯಾಂ ನೀರು ನಿಲ್ಲಿಸಲಾಗಿದೆ. ಸೆ.16ರಂದು ಬೆಂಗಳೂರಿಗೆ ವಿಶೇಷ ದಿನ. ಇದುವರೆಗೆ ಕಾವೇರಿಯಿಂದ 1,500 ಎಂಎಲ್ಡಿ ನೀರು ಬರುತ್ತಿತ್ತು. ಈಗ ಐದನೇ ಹಂತದ ಕಾವೇರಿ ಯೋಜನೆಯಿಂದ 50 ಲಕ್ಷ ಜನರಿಗೆ ಅನುಕೂಲವಾಗಲಿದೆ. ನಾನು ಕೂಡ ಎಲ್ಲಾ ಕಡೆ ವೀಕ್ಷಣೆ ಮಾಡಿದ್ದೇನೆ. ಬೆಂಗಳೂರಿಗೆ ಅನುಕೂಲವಾಗಲಿದೆ'' ಎಂದರು.
ಇದನ್ನೂ ಓದಿ: ಜಗಮಗಿಸುವ ಮೈಸೂರು ದಸರಾ ದೀಪಾಲಂಕಾರಕ್ಕೆ ಮನಸೋತ ಸಿಎಂ; ಸಚಿವರೊಂದಿಗೆ ಅಂಬಾರಿ ಬಸ್ನಲ್ಲಿ ರೌಂಡ್ಸ್
''ದಸರಾ ಲೈಟಿಂಗ್ ವಿಸ್ತರಣೆ ಮಾಡಿದ್ದೇವೆ. ಅದಕ್ಕೆ ಕೋಟ್ಯಂತರ ರೂ. ಖರ್ಚು ಮಾಡಿದ್ದೇವೆ. ನಾನು ಆ ರೀತಿ ಇಲ್ಲಿಯವರೆಗೆ ನೋಡಿರಲಿಲ್ಲ. ರಾಜ್ಯದ ಜನತೆ ನೋಡಿ ಸಂತೋಷಪಡಬೇಕು. ಸಾಂಸ್ಕೃತಿಕ ಹಬ್ಬವನ್ನು ಆಚರಿಸಬೇಕು. 10 ದಿನಗಳ ಕಾಲ ಸಾಂಸ್ಕೃತಿಕ ಉತ್ಸವ ನಡೆದಿದೆ'' ಎಂದು ಹೇಳಿದರು.
ಇದನ್ನೂ ಓದಿ: ಒಂದೆಡೆ ಜಾತಿ ಜನಗಣತಿ, ಇನ್ನೊಂದೆಡೆ ಒಳಮೀಸಲಾತಿ ಜಾರಿಗೆ ಕೂಗು: ಸಿದ್ದರಾಮಯ್ಯ ಸರ್ಕಾರಕ್ಕೆ ಸವಾಲು