ಹುಬ್ಬಳ್ಳಿ: ನಲ್ ಜಲಮಿತ್ರ ಕಾರ್ಯಕ್ರಮದಡಿ ಜಲಜೀವನ್ ಮಿಷನ್ ಅಡಿಯಲ್ಲಿ ಗ್ರಾಮೀಣ ಮಹಿಳೆಯರಿಗೆ ಪೈಪ್ ಮೂಲಕ ನೀರು ಸರಬರಾಜು ವ್ಯವಸ್ಥೆಯನ್ನು ನಿರ್ವಹಿಸಲು ಮತ್ತು ದುರಸ್ತಿ ಮಾಡಲು ತರಬೇತಿ ನೀಡಲಾಗುತ್ತಿದೆ. ಇದಕ್ಕಾಗಿ ಐಟಿಐಗಳಂತಹ ಸರ್ಕಾರಿ ತರಬೇತಿ ಕೇಂದ್ರಗಳ ಮೂಲಕ ಪ್ಲಂಬಿಂಗ್ ಮತ್ತು ಎಲೆಕ್ಟ್ರಿಕಲ್ ಕೆಲಸಗಳಲ್ಲಿ 17 ದಿನಗಳ ಕೌಶಲ್ಯ ತರಬೇತಿ ನೀಡಲಾಗುತ್ತಿದೆ.
ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಮತ್ತು ಸರ್ಕಾರದ ಕಾರ್ಯಕ್ರಮಗಳ ನಿರ್ವಹಣೆಗೆ ಅನುಕೂಲವಾಗುವಂತೆ ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಬಹುಕೌಶಲ್ಯ ತರಬೇತಿ ನೀಡಲು ಸರ್ಕಾರ ನಿರ್ಧರಿಸಿದೆ. ಗ್ರಾಮ ಪಂಚಾಯಿತಿಗಳಲ್ಲಿ ನಲ್‌ಜಲ ಕಾರ್ಯಕ್ರಮವನ್ನು ನಿರ್ವಹಿಸಲು ‘ನಲ್ ಜಲಮಿತ್ರ’ ಎಂಬ ಹೆಸರಿನಲ್ಲಿ ನುರಿತ ಮಾನವ ಸಂಪನ್ಮೂಲ ಅಭಿವೃದ್ಧಿಪಡಿಸಲು ತರಬೇತಿ ನೀಡಲಾಗುತ್ತಿದೆ. ತರಬೇತಿಗೆ ತಗಲುವ ವೆಚ್ಚವನ್ನು ಗ್ರಾಮ ಪಂಚಾಯಿತಿಗಳೇ ಭರಿಸುತ್ತಿವೆ.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಹುಬ್ಬಳ್ಳಿಯ ಜಿಟಿಟಿಸಿಯಲ್ಲಿ ಕೌಶಲ್ಯ ತರಬೇತಿ ಆರಂಭಿಸಲಾಗಿದೆ. ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 44 ಸ್ವಸಹಾಯ ಗುಂಪಿನ ಮಹಿಳೆಯರಿಗೆ 512 ಗಂಟೆಗಳ ಕಾಲ ತರಬೇತಿ ನೀಡಲಾಗುತ್ತದೆ. ನಂತರ, 23 ದಿನಗಳ ಕಾಲ ಉದ್ಯೋಗ ತರಬೇತಿ ನೀಡಲಾಗುತ್ತದೆ.
ಗ್ರಾಮ ಪಂಚಾಯತ್ ಪ್ರತೀ ಅಭ್ಯರ್ಥಿಗೆ 24,790 ರೂ ಪಾವತಿಸುತ್ತದೆ. ಇದನ್ನು ಗ್ರಾಮ 15ನೇ ಹಣಕಾಸು ಆಯೋಗ ಮತ್ತು ಇತರ ಅನುದಾನಗಳಿಂದ ಪೂರೈಸಬೇಕು. ತರಬೇತಿಯ ನಂತರ, ಮಹಿಳೆಯರು ಜಲಜೀವನ್ ಮಿಷನ್ ಯೋಜನೆಗಾಗಿ ಗ್ರಾಮ ಪಂಚಾಯಿತಿಯಲ್ಲಿ 'ನೀರು ವಿತರಣಾ ಆಪರೇಟರ್' ಆಗಿ ಕೆಲಸ ಮಾಡುತ್ತಾರೆ.
"ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ 'ಹರ ಘರ್ ನಲ್'ನಲ್ಲಿ ಪ್ರತೀ ಮನೆಗೂ ನೀರು ಸರಬರಾಜು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅವುಗಳ ನಿರ್ವಹಣೆಗೆ ಪ್ರತೀ ಗ್ರಾಮ ಪಂಚಾಯಿತಿಯಿಂದ ಇಬ್ಬರಿಗೆ ತರಬೇತಿ ನೀಡಲಾಗುತ್ತಿದೆ. 44 ಮಹಿಳೆಯರಿಗೆ ತರಬೇತಿ ನೀಡಲಾಗುತ್ತದೆ. 17 ದಿನಗಳ ಕಾಲ ಬೇಸಿಕ್ ಪ್ಲಂಬಿಂಗ್, ಪೈಪ್ ಜೋಡಿಸುವುದರ ಬಗ್ಗೆ ಮಾಹಿತಿ ಕೊಟ್ಟಿದ್ದೇವೆ" ಎಂದು ಹುಬ್ಬಳ್ಳಿ ಜಿಟಿಟಿಸಿಯ ಮುಖ್ಯಸ್ಥ ಮಾರುತಿ ಭಜಂತ್ರಿ ತಿಳಿಸಿದರು.
"ಮಹಿಳೆಯರಿಗೆ ನಲ್ಲಿ ನೀರಿನ ವಿತರಣಾ ವ್ಯವಸ್ಥೆ ಮತ್ತು ನೀರಿನ ವ್ಯವಸ್ಥೆಯ ಪ್ರಾತ್ಯಕ್ಷಿಕೆ, ನೀರಿನ ಪಂಪ್‌ನ ಕಾರ್ಯ, ಪಂಪ್‌ಗಳ ಅಳವಡಿಕೆ, ಪ್ರಾತ್ಯಕ್ಷಿಕೆಗಳ ಮೂಲಕ ಕಲಿಸಲಾಗಿದೆ. ನೀರು ಸಂಪ್, ಟ್ಯಾಂಕ್ ನಲ್ಲಿ ನೀರು ನಿರ್ವಹಣೆ, ಅದರ ಕಾರ್ಯಗಳ ಬಗ್ಗೆ ಪ್ರಾಯೋಗಿಕವಾಗಿ ಕಲಿಸಲಾಗಿದೆ. ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತವಾಗಿ ತರಬೇತಿ ಹಾಗೂ ವೆಚ್ಚ ನೀಡಲಿದೆ" ಎಂದು ಅವರು ಮಾಹಿತಿ ನೀಡಿದ್ದಾರೆ.
ತರಬೇತಿದಾರ ಸುಧೀರ್ ಪುಟಾಣಿ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ''ನಲ್ ಜಲಮಿತ್ರ ಯೋಜನೆಯಡಿಯಲ್ಲಿ 17 ದಿನಗಳವರೆಗೆ ಕಾರ್ಯಕ್ರಮ ಇರುತ್ತದೆ. ಇದರಲ್ಲಿ ಬೇಸಿಕ್ ಟ್ರೈನಿಂಗ್ ನೀಡುಲಾಗುತ್ತದೆ. ಉಳಿದ 23 ದಿನಗಳ ಕಾಲ ಉದ್ಯೋಗದಲ್ಲಿ ತರಬೇತಿ ನೀಡುತ್ತೇವೆ. ಅವರು ಅಲ್ಲಿ ನೇರವಾಗಿ ಕೆಲಸ ಮಾಡಿ ತಿಳಿದುಕೊಳ್ಳುತ್ತಾರೆ. ಇಲ್ಲಿ ನಾವು ಪೈಪ್ ಜೋಡಣೆ, ಮಿಷನರಿ ವರ್ಕ್ ಬಗ್ಗೆ ತಿಳಿಸಿಕೊಡುತ್ತೇವೆ'' ಎಂದರು.
ತರಬೇತಿ ಪಡೆದ ಶೋಭಾ ಮಾಯಣ್ಣವರ್ ಮಾತನಾಡಿ, ''ರಾಜ್ಯ ಸರ್ಕಾರ ಮಹಿಳಾ ಸಬಲೀಕರಣಕ್ಕಾಗಿ ತರಬೇತಿ ನೀಡಿದೆ. ನಮಗೆ ಅರ್ಥವಾಗುವ ರೀತಿಯಲ್ಲಿ ಥಿಯರಿ ಹಾಗೂ ಪ್ರಾಯೋಗಿಕವಾಗಿ ಸುಲಭವಾಗಿ ಕಲಿಸಿಕೊಟ್ಟಿದ್ದಾರೆ. ತರಬೇತಿ ಪಡೆದು ಗ್ರಾಮೀಣ ಮಟ್ಟದಲ್ಲಿ ಜಲಜೀವನ್ ಮಿಷನ್ ಅಡಿಯಲ್ಲಿ ಕೆಲಸ ಮಾಡುತ್ತೇವೆ. ಇದರಿಂದ ನಮಗೆ ಬಹಳ ಖುಷಿಯಾಗಿದೆ. ರಾಜ್ಯ ಸರ್ಕಾರಕ್ಕೆ ತುಂಬು ಹೃದಯದ ಧನ್ಯವಾದಗಳು'' ಎಂದು ಹೇಳಿದರು.
ತರಬೇತಿ ಪಡೆದ ಭಾಗ್ಯ ಪುಟಗಿ ಮಾತನಾಡಿ, ''ನಮಗೆ ಪ್ಲಂಬಿಂಗ್ ಅಂದ್ರೆ ಏನೂ ಅಂತ ಗೊತ್ತಿರಲಿಲ್ಲ. ಯಾವ ಪೈಪ್ಎಲ್ಲಿ ಜೋಡಿಸಬೇಕು ಎಂಬುದರ ಬಗ್ಗೆ ಗೊತ್ತಿರಲಿಲ್ಲ. ಇಲ್ಲಿಗೆ ಬಂದ ನಂತರ ಸವಿಸ್ತಾರವಾಗಿ ನಮಗೆ ಹೇಳಿಕೊಟ್ಟಿದ್ದಾರೆ'' ಎಂದು ತಿಳಿಸಿದರು.
ಇದನ್ನೂ ಓದಿ: ಬದುಕಿಗೆ ಆಸರೆಯಾದ ಸ್ವ-ಸಹಾಯ ಸಂಘಗಳು.. ಬಾಗಲಕೋಟೆಯ ಗ್ರಾಮೀಣ ಮಹಿಳೆಯರೀಗ ಸಬಲೆಯರು