ಗ್ವಾಲಿಯರ್ (ಮಧ್ಯ ಪ್ರದೇಶ): ಕೃಷಿ, ರಕ್ಷಣೆ, ಔಷಧ ಸರಬರಾಜು ಸೇರಿದಂತೆ ವಿವಿಧ ಕಾರ್ಯಗಳಿಗೆ ಡ್ರೋನ್ ಬಳಕೆ ಇಂದು ಸಾಮಾನ್ಯವಾಗಿದೆ. ಆದರೆ, ಇಲ್ಲೊಬ್ಬ ವಿದ್ಯಾರ್ಥಿ ಆವಿಷ್ಕರಿಸಿರುವ ಡ್ರೋನ್ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಕಾರಣಕ್ಕೆ ಈ ಡ್ರೋನ್ ಕೇವಲ ವಸ್ತು ಸಾಗಣೆಯ ಡ್ರೋಣ್ ಅಲ್ಲ, ಮನುಷ್ಯರನ್ನೇ ಸಾಗಿಸುವ ಡ್ರೋನ್ ಆಗಿದೆ. ನೆರೆಯ ಚೀನಾ ದೇಶದ ಡ್ರೋನ್ ತಂತ್ರಜ್ಞಾನದಿಂದ ಈತ ಪ್ರೇರಣೆಗೊಂಡು ಇದನ್ನು ನಿರ್ಮಾಣ ಮಾಡಿದ್ದಾನೆ. ಸುಮಾರು 80 ಕೆ.ಜಿ ತೂಕ ಹೊಂದಿರುವ ಜನರು ಕೂಡ ಈ ಡ್ರೋನ್ ಮೂಲಕ ಹಾರಾಟ ನಡೆಸಬಹುದಾಗಿದೆ.
ಮೆಧಾಂಶ್ ತ್ರಿವೇದಿ ಈ ಆವಿಷ್ಕಾರದ ಜನಕ. ಸಿಂದಿಯಾ ಶಾಲೆಯಲ್ಲಿ 12ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಈತ 3.5 ಲಕ್ಷ ವೆಚ್ಚದಲ್ಲಿ ಈ ಡ್ರೋನ್ ತಯಾರಿಸಿದ್ದು, ಇದಕ್ಕಾಗಿ ಮೂರು ತಿಂಗಳ ಕಾಲ ಶ್ರಮವಹಿಸಿದ್ದಾನೆ. ಈ ಡ್ರೋನ್ಗೆ ಎಂಎಲ್ಡಿಟಿ 01 ಎಂದು ಹೆಸರಿಟ್ಟಿದ್ದಾನೆ.
ಚೀನಿ ಡ್ರೋನ್ ತಂತ್ರಜ್ಞಾನದಿಂದ ಪ್ರೇರಣೆ: ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿರುವ ಮೆಧಾಂಶ್, ಚೀನಾದ ಡ್ರೋನ್ಗಳನ್ನು ನೋಡಿದ ಬಳಿಕ ಅವುಗಳಿಂದ ನಾನು ಪ್ರೇರೆಪಿತನಾದೆ. ಹಲವು ತಂತ್ರಜ್ಞಾನ ಸೇರಿದಂತೆ ಡ್ರೋನ್ ಅಭಿವೃದ್ಧಿಯಲ್ಲಿ ನನಗೆ ನನ್ನ ಶಿಕ್ಷಕರಾದ ಮನೋಜ್ ಮಿಶ್ರಾ ಪ್ರೋತ್ಸಾಹ ನೀಡಿದರು.
ಮನುಷ್ಯರನ್ನೇ ಹೊತ್ತೊಯ್ಯುವ ಡ್ರೋನ್: ಈ ಡ್ರೋನ್ 45 ಹಾರ್ಸ್ಪವರ್ನಲ್ಲಿ ಗಂಟೆಗೆ 60 ಕಿ.ಮೀ ವೇಗದಲ್ಲಿ 6 ನಿಮಿಷಗಳ ಕಾಲ ನಿರಂತರವಾಗಿ ಹಾರಾಡಬಲ್ಲದು. 80 ಕೆಜಿ ತೂಕದವರೆಗಿನ ವ್ಯಕ್ತಿಗಳು ಇದರಲ್ಲಿ ಹಾರಾಟ ನಡೆಸಬಹುದು. ಈ ಡ್ರೋನ್ 1.8 ಮಿ ಅಗಲವಿದ್ದು, ಇದರ ಸುರಕ್ಷತಾ ದೃಷ್ಟಿಯಿಂದ ಕೇವಲ 10 ಮೀಟರ್ ಎತ್ತರದವರೆಗೆ ಮಾತ್ರ ಹಾರಾಟ ನಡೆಸುವಂತೆ ಅಭಿವೃದ್ಧಿ ಪಡಿಸಲಾಗಿದೆ. ಕೃಷಿ ಡ್ರೋನ್ಗೆ ಬಳಕೆ ಮಾಡುವ ನಾಲ್ಕು ಮೋಟರ್ ಅನ್ನು ಇದಕ್ಕೆ ಬಳಕೆ ಮಾಡಲಾಗಿದೆ.
ಕೇಂದ್ರ ಸಚಿವರು, ಇಸ್ರೋ ಮುಖ್ಯಸ್ಥರಿಂದಲೂ ಮೆಚ್ಚುಗೆ: ಸಿಂದಿಯಾ ಶಾಲಾ ಸಂಸ್ಥಾಪನಾ ದಿನದಂದು ಈ ಡ್ರೋನ್ ಪ್ರದರ್ಶನ ಮಾಡಲಾಯಿತು. ಇದರ ಕೆಲಸ ಕಂಡ ಶಾಲಾ ಸಂಸ್ಥಾಪಕರಾದ ಜ್ಯೋತಿರಾಧಿತ್ಯ ಸಿಂದಿಯಾ ಮತ್ತು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಮೆಧಾಂಶ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭವಿಷ್ಯದ ಕನಸು: ಈ ಡ್ರೋನ್ ಅನ್ನು ಹೈಬ್ರೀಡ್ ಮೋಡ್ನಲ್ಲಿ ಚಾಲನೆ ಮಾಡಲು ನಾವು ನಿಧಿಗಾಗಿ ವ್ಯವಸ್ಥೆ ಮಾಡುತ್ತಿದ್ದೇವೆ. ಭವಿಷ್ಯದಲ್ಲಿ ಸಾಮಾನ್ಯ ಜನರಿಗೆ ಸರಕು ಸೇರಿದಂತೆ ಜನರ ಸಾರಿಗೆಗೆ ಪ್ರಯೋಜನಕಾರಿ ಡ್ರೋನ್ ಬಳಕೆ ಅಬಿವೃದ್ಧಿ ಮಾಡುವ ಇಚ್ಛೆ ಹೊಂದಿದ್ದೇನೆ ಎನ್ನುವ ಮೆಧಾಂಶ್, ಏರ್ ಟಾಕ್ಸಿ ಮತ್ತು ಜನರಿಗೆ ಅಗ್ಗದ ದರದ ಹೆಲಿಕಾಪ್ಟರ್ ಸೇವೆ ಒದಗಿಸುವ ಹಂಬಲ ಹೊಂದಿರುವುದಾಗಿ ತಿಳಿಸಿದರು.
ಶಿಕ್ಷಕರ ಪ್ರಶಂಸೆ: ಮೆಧಾಂಶ್ ಅವಿಷ್ಕಾರಕ್ಕೆ ಆತನ ಶಿಕ್ಷಕ ವರ್ಗ ಕೂಡ ಸಂತಸ ವ್ಯಕ್ತಪಡಿಸಿ, ಪ್ರಶಂಸೆ ವ್ಯಕ್ತಪಡಿಸಿದೆ. ಆತ ಹೊಸತನದ ಆವಿಷ್ಕರಿಸುವ ವಿದ್ಯಾರ್ಥಿಯಾಗಿದ್ದು, 7ನೇ ತರಗತಿಯಿಂದಲೂ ತನ್ನ ಕ್ರಿಯಾತ್ಮಕತೆಯಿಂದ ಗಮನ ಸೆಳೆದಿದ್ದಾನೆ. ಏನನ್ನಾದರೂ ವಿಭಿನ್ನವಾಗಿ ಮಾಡಬೇಕು ಎಂಬ ಹಂಬಲ ಆತನಲ್ಲಿದೆ. ಹೊಸ ಆವಿಷ್ಕಾರದ ಬಗ್ಗೆ ಆತ ಸದಾ ಮಾಹಿತಿ ಪಡೆಯುತ್ತಾನೆ. ಇದರಿಂದ ನಮಗೂ ಕೂಡ ಗರ್ವ ಉಂಟಾಗುತ್ತದೆ ಎಂದು ಶಿಕ್ಷಕ ಮನೋಜ್ ಮಿಶ್ರಾ ತಿಳಿಸಿದ್ದಾರೆ.
ಇದನ್ನೂ ಓದಿ: ಮೀನುಗಾರಿಕಾ ವಲಯಕ್ಕೆ ಡ್ರೋನ್ ತಂತ್ರಜ್ಞಾನ: ಅನುಕೂಲಗಳೇನು?