ಹುಬ್ಬಳ್ಳಿ : ಬೇಸಿಗೆ ಆರಂಭವಾಗುತ್ತಿದ್ದಂತೆ ರಾಜ್ಯದ ಹಲವೆಡೆ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸಿದೆ. ಕಳೆದ ವರ್ಷ ಮುಂಗಾರು ಮತ್ತು ಹಿಂಗಾರು ಮಳೆ ಆಗದೇ ಇರುವುದರಿಂದ ಜನರು ನೀರಿಗಾಗಿ ಪರಿತಪಿಸುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ನೀರಸಾಗರ ಜಲಾಶಯದ ಸುತ್ತಮುತ್ತಲಿನ ರೈತರಿಗೆ ನೀರನ್ನು ವ್ಯವಸಾಯಕ್ಕೆ ಬಳಸದಂತೆ ಜಿಲ್ಲಾಡಳಿತ ಖಡಕ್ ಸೂಚನೆ ಹೊರಡಿಸಿದೆ.
ನೀರಸಾಗರ ಜಲಾಶಯದ ಸುತ್ತಲೂ ಬರುವ ಗಂಭ್ಯಪೂರ ಗ್ರಾಮ ಪಂಚಾಯಿತ ವ್ಯಾಪ್ತಿಯ ಗ್ರಾಮಗಳಾದ ಗಂಭ್ಯಪೂರ, ಹುಲಿಕಟ್ಟಿ, ಲಿಂಗನಕೊಪ್ಪ ಮತ್ತು ಬಸವನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಕೊಪ್ಪ, ಕಳಸದಕೊಪ್ಪ, ನೀರಸಾಗರ ಮತ್ತು ಕನ್ಯಾಕೊಪ್ಪ ಗ್ರಾಮಗಳ ರೈತರು ತಮ್ಮ ಹೊಲಗಳಿಗೆ ಜಲಾಶಯದ ನೀರನ್ನು ಮೋಟಾರ್ ಮೂಲಕ ಪಂಪ್ ಮಾಡುವುದನ್ನು ತಕ್ಷಣ ನಿಲ್ಲಿಸಲು ತಿಳಿಸಲಾಗಿದೆ. ಒಂದು ವೇಳೆ ಮೋಟಾರ್ ಹಚ್ಚಿ ನೀರು ಪಂಪ್ ಮಾಡುವುದು ಕಂಡು ಬಂದಲ್ಲಿ ಅಂತಹವರ ಮೋಟಾರ್ಗಳನ್ನು ವಶಪಡಿಸಿಕೊಂಡು ಸಕ್ಷಮ ಪ್ರಾಧಿಕಾರದ ಮೂಲಕ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಳೆ ಹುಬ್ಬಳ್ಳಿಯ 22 ವಾರ್ಡ್ಗಳಿಗೆ ಕುಡಿವ ನೀರನ್ನು ಪೂರೈಸಲು ನೀರಸಾಗರ ಜಲಾಶಯದಿಂದ ನಿತ್ಯ 25 ಎಂಎಲ್ಡಿ ನೀರು ಪಡೆಯಲಾಗುತ್ತಿದೆ. ಪ್ರಸ್ತುತ ನೀರಸಾಗರ ಜಲಾಶಯದಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, 0.3 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಲಭ್ಯವಿರುವ 0.3 ಟಿಎಂಸಿ ನೀರನ್ನು ಹುಬ್ಬಳ್ಳಿ ನಗರಕ್ಕೆ ಬೇಕಾಗುವ ಕುಡಿಯುವ ನೀರಿನ ಪ್ರಮಾಣ ಕಾಯ್ದಿರಿಸಬೇಕಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ವಿಡಿಯೋ ಕಾಲ್ ಮೂಲಕ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಸೂಕ್ತ ಕ್ರಮವಹಿಸಲು ಸೂಚಿಸಿದ್ದಾರೆ. ಜಿಲ್ಲಾಧಿಕಾರಿಗಳು ಲಭ್ಯವಿರುವ ಕುಡಿಯುವ ನೀರನ್ನು ಮಳೆಗಾಲ ಪ್ರಾರಂಭವಾಗಿ ಜಲಾಶಯಗಳಿಗೆ ನೀರು ಬರುವವರೆಗೆ ಜಲಾಶಯಗಳಲ್ಲಿ ನೀರಿನ ಮಟ್ಟವನ್ನು ಕಾಯ್ದಿರಿಸಬೇಕಾಗಿರುವುದರಿಂದ ಕುಡಿಯುವ ನೀರನ್ನು ಬೇರೆ ಉದ್ಧೇಶಗಳಿಗೆ ಬಳಸದಂತೆ ನಿರ್ದೇಶಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಲ್ಲಿ ನೀರಿಗಾಗಿ ಹಾಹಾಕಾರ: ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆ