ಬೆಂಗಳೂರು: ಏಳನೇ ವೇತನ ಆಯೋಗದ ವರದಿ ಜಾರಿಯ ಅನಿವಾರ್ಯತೆಗೆ ರಾಜ್ಯ ಸರ್ಕಾರ ಬಿದ್ದಿದೆ. ಹಣಕಾಸು ಒತ್ತಡದ ಮಧ್ಯೆ ವೇತನ ಪರಿಷ್ಕರಣೆಯ ಅನಿವಾರ್ಯತೆ ಸಿಎಂ ಸಿದ್ದರಾಮಯ್ಯರನ್ನು ಅಡ್ಡಕತ್ತರಿಗೆ ಸಿಲುಕಿಸಿದೆ. ಆರ್ಥಿಕ ಒತ್ತಡ, ಗ್ಯಾರಂಟಿ ಹೊರೆಯ ಮಧ್ಯೆ ರಾಜ್ಯ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗದ ವರದಿಯಂತೆ ಪರಿಷ್ಕೃತ ವೇತನ ಜಾರಿಗೆ ಕಾಂಗ್ರೆಸ್ ಸರ್ಕಾರ ಕಸರತ್ತು ನಡೆಸುತ್ತಿದೆ.
ಏಳನೇ ವೇತನ ಆಯೋಗ ವರದಿಯಲ್ಲಿ 27.5% ಶಿಫಾರಸು ಮಾಡಿದೆ. ಲೋಕಸಭೆ ಚುನಾವಣೆ ಘೋಷಣೆಯ ಮುನ್ನ ಮಾ.16ರಂದು ಕೆ.ಸುಧಾಕರ್ ರಾವ್ ಅಧ್ಯಕ್ಷತೆಯ ವೇತನ ಆಯೋಗ ವರದಿಯನ್ನು ಸಲ್ಲಿಸಿತ್ತು. 30 ವಿವಿಧ ಶಿಫಾರಸುಗಳೊಂದಿಗೆ ವರದಿಯನ್ನು ಸಿಎಂ ಸಿದ್ದರಾಮಯ್ಯಗೆ ಸಲ್ಲಿಕೆ ಮಾಡಲಾಗಿತ್ತು. ಸರ್ಕಾರಿ ನೌಕರರು ವರದಿ ಜಾರಿಗೆ ಪಟ್ಟು ಹಿಡಿದಿದ್ದು, ವೇತನ ಪರಿಷ್ಕರಣೆ ಅನಿವಾರ್ಯವಾಗಿದೆ.
ಪಂಚ ಗ್ಯಾರಂಟಿಗಾಗಿ ವಾರ್ಷಿಕ ಸುಮಾರು 60,000 ಕೋಟಿ ರೂ. ಹೊರೆ ಎದುರಿಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ವೇತನ ಪರಿಷ್ಕರಣೆಯ ಬೃಹತ್ ಹೊರೆ ದೊಡ್ಡ ತಲೆನೋವಾಗಿದೆ. ಮೊನ್ನೆ ನಡೆದ ಸಂಪುಟ ಸಭೆಯಲ್ಲಿ ವೇತನ ಪರಿಷ್ಕರಣೆ ಬಗ್ಗೆ ಚರ್ಚೆ ನಡೆದಿದೆ. ಕೆಲ ಸಚಿವರು ಸದ್ಯದ ಪರಿಸ್ಥಿತಿಯಲ್ಲಿ ವೇತನ ಪರಿಷ್ಕರಣೆ ಬೇಡ ಎಂದರೆ, ಇನ್ನು ಕೆಲವರು ಆಯೋಗ ಶಿಫಾರಿಸಿನಷ್ಟು ವೇತನ ಪರಿಷ್ಕರಣೆ ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇತ್ತ ಸಿಎಂ ಸಿದ್ದರಾಮಯ್ಯ ಶಿಫಾರಸಿನಂತೆ 27.5% ವೇತನ ಪರಿಷ್ಕರಣೆಗೆ ಒಲವು ಹೊಂದಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.
ರಾಜ್ಯ ಸರ್ಕಾರದ ಲೆಕ್ಕಾಚಾರ ಏನು?: ವೇತನ ಆಯೋಗದ ವರದಿ ಶಿಫಾರಸಿನಂತೆ 27.5% ವೇತನ ಪರಿಷ್ಕರಣೆ ಮಾಡಿದರೆ ಸರ್ಕಾರದ ಬೊಕ್ಕಸಕ್ಕೆ 2024-25 ಸಾಲಿನಲ್ಲಿ 17,440.15 ಕೋಟಿ ರೂ. ವಾರ್ಷಿಕ ಹೆಚ್ಚುವರಿ ಹೊರೆ ಬೀಳಲಿದೆ. ಬೊಮ್ಮಾಯಿ ಸರ್ಕಾರ ಕಳೆದ ವರ್ಷ ಮಾರ್ಚ್ ನಲ್ಲಿ ಮಧ್ಯಂತರ ಪರಿಹಾರವಾಗಿ 17% ವೇತನ ಪರಿಷ್ಕರಣೆ ಮಾಡಿತ್ತು. ಈಗ ಏಳನೇ ವೇತನ ಆಯೋಗ ತನ್ನ ವರದಿ ಸಲ್ಲಿಸಿ, 27.5% ವೇತನ ಪರಿಷ್ಕರಣೆಗೆ ಶಿಫಾರಸು ಮಾಡಿದೆ.
ಸರ್ಕಾರಿ ನೌಕರರು ಶಿಫಾರಸಿನಂತೆ ವೇತನ ಪರಿಷ್ಕರಣೆಗೆ ಪಟ್ಟು ಹಿಡಿದಿದ್ದಾರೆ. 27.5% ವೇತನ ಪರಿಷ್ಕರಣೆ ಆದರೆ, ರಾಜ್ಯ ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನ ತಿಂಗಳಿಗೆ ಅಸ್ತಿತ್ವದಲ್ಲಿರುವ ರೂ.17,000 ರಿಂದ ರೂ.27,000ಗೆ ಪರಿಷ್ಕರಣೆ ಆಗಲಿದೆ. ಈಗಾಗಲೇ 17% ಏರಿಕೆ ಮಾಡಲಾಗಿದ್ದು, 27.5%ರಷ್ಟು ವೇತನ ಪರಿಷ್ಕರಣೆ ಮಾಡಿದರೆ ಇನ್ನು ಕೇವಲ 10% ವೇತನ ಏರಿಕೆ ಮಾಡಬೇಕಾಗಿದೆ. 2024-25 ಸಾಲಿನ ಬಜೆಟ್ ನಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವೇತನ ಪರಿಷ್ಕರಣೆ ಹಿನ್ನೆಲೆ 15,000 ಕೋಟಿ ರೂ. ಮೀಸಲಿಟ್ಟಿದ್ದಾರೆ. ಅಂದರೆ ಇನ್ನೂ 2,500 ಕೋಟಿ ರೂ. ಹೆಚ್ಚುವರಿ ಹಣ ಬೇಕಾಗಿದೆ. ಈ ನಿಟ್ಟಿನಲ್ಲಿ ಸಂಪನ್ಮೂಲ ಕ್ರೋಢೀಕರಣ ಮಾಡಲು ಮುಂದಾಗಿದೆ.
ಸರ್ಕಾರ ಮೇಲಾಗುವ ಹೊರೆ ಎಷ್ಟು?: 2024-25ರ ಆಯವ್ಯಯ ಅಂದಾಜುಗಳಲ್ಲಿ ವೇತನಕ್ಕಾಗಿ 80,434 ಕೋಟಿ ರೂ. ಮತ್ತು ಪಿಂಚಣಿಗಳಿಗಾಗಿ 32,355 ಕೋಟಿ ರೂ. ಒಟ್ಟಾಗಿ 1,12,789 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಇದು 2023-24 ರಲ್ಲಿ ಅಂದಾಜಿಸಿದ್ದಕ್ಕಿಂತ 22,670 ಕೋಟಿ ರೂ. ಹೆಚ್ಚಳವಾಗಿದ್ದು, ಇದು ಹಿಂದಿನ ವರ್ಷಕ್ಕಿಂತ ಶೇ.25 ರಷ್ಟು ಹೆಚ್ಚಾಗಿದೆ. ಮಧ್ಯಮಾವಧಿ ವಿತ್ತೀಯ ಯೋಜನೆಯಂತೆ ನೌಕರರ ವೇತನ ಮತ್ತು ಭತ್ಯೆಗಳು, ಪಿಂಚಣಿಗಳು ಮತ್ತು ಇತರ ನಿವೃತ್ತಿ ವೇತನ ಸೌಲಭ್ಯಗಳ ಪರಿಷ್ಕರಣೆಯ ಕಾರಣದಿಂದ ವಾರ್ಷಿಕ ಸುಮಾರು 15,000 ಕೋಟಿ ರೂ. ನಿಂದ ರೂ.20,000 ಕೋಟಿಗಳವರೆಗಿನ ಹೆಚ್ಚುವರಿ ಹೊರೆ ಸರ್ಕಾರದ ಮೇಲೆ ಬೀಳಲಿದೆ.
ಏಳನೇ ವೇತನ ಆಯೋಗದ ವರದಿಯಂತೆ ವೇತನ ಪರಿಷ್ಕರಣೆ ಜಾರಿ ಮಾಡಿದರೆ, ವೇತನದ ಹೆಚ್ಚುವರಿ ವೆಚ್ಚ 7,408.79 ಕೋಟಿ ರೂ. ಆಗಲಿದೆ. ಇನ್ನು ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ, ಇತರ ಭತ್ಯೆಯ ಹೆಚ್ಚುವರಿ ವೆಚ್ಚ 824 ಕೋಟಿ ರೂ. ತಲುಪಲಿದೆ. ವೈದ್ಯಕೀಯ ಭತ್ಯೆಗಳ ಹೆಚ್ಚುವರಿ ವೆಚ್ಚ 109.30 ಕೋಟಿ ರೂ. ಆಗಲಿದೆ. ಪಿಂಚಣಿ ಮತ್ತು ಕುಟುಂಬ ಪಿಂಚಣಿ ಮೇಲಿನ ಹೆಚ್ಚುವರಿ ವೆಚ್ಚ 3,791.43 ಕೋಟಿ ರೂ. ಆಗಲಿದೆ. ಎನ್ ಪಿಎಸ್ ವಂತಿಕೆಗೆ ಹೆಚ್ಚುವರಿ ವೆಚ್ಚ 530.45 ಕೋಟಿ ರೂ., ಮತ್ತು ಮರಣ ಮತ್ತು ನಿವೃತ್ತಿ ಉಪದಾನ ಹೆಚ್ಚುವರಿ ವೆಚ್ಚ 1,083.56 ಕೋಟಿ ರೂ.ಗೆ ತಲುಪಲಿದೆ. ರಜೆ ನಗದೀಕರಣದ ಹೆಚ್ಚುವರಿ ವೆಚ್ಚವಾಗಿ 241.02 ಕೋಟಿ ರೂ. ಹೊರೆ ಬೀಳಲಿದೆ.
ನಿವೃತ್ತಿ ವೇತನದ ಪರಿವರ್ತನೆಯ ಹೆಚ್ಚುವರಿ ವೆಚ್ಚವಾಗಿ 563.41 ಕೋಟಿ ರೂ., ಹೆಚ್ಚುವರಿ ಪಿಂಚಣಿ/ಕುಟುಂಬ ಪಿಂಚಣಿ ಹೆಚ್ಚುವರಿ ವೆಚ್ಚದ ರೂಪದಲ್ಲಿ 373.89 ಕೋಟಿ ರೂ., ನಿವೃತ್ತಿದಾರರರಿಗೆ ವೈದ್ಯಕೀಯ ಸೌಲಭ್ಯದ ಮೇಲಿನ ಹೆಚ್ಚುವರಿ ವೆಚ್ಚವಾಗಿ 315 ಕೋಟಿ ರೂ. ಹಾಗೂ ಅನುದಾನಿತ ಸಂಸ್ಥೆಗಳ ವೇತನಾನುದಾನದ ಹೆಚ್ಚುವರಿ ವೆಚ್ಚವಾಗಿ 2,599.30 ಕೋಟಿ ರೂ. ಆಗಲಿದೆ ಎಂದು ಅಂದಾಜಿಸಲಾಗಿದೆ.
ವೇತನ ಪರಿಷ್ಕರಣೆ ವಿಳಂಬವಾದರೆ ಹೋರಾಟಕ್ಕೆ ಸಜ್ಜು: ಇತ್ತ ಏಳನೇ ವೇತನ ಪರಿಷ್ಕರಣೆಗೆ ರಾಜ್ಯ ಸರ್ಕಾರಿ ನೌಕರರು ಪಟ್ಟು ಹಿಡಿದಿದ್ದಾರೆ. ಒಂದು ವೇಳೆ ಪರಿಷ್ಕರಣೆ ವಿಳಂಬವಾದರೆ ಹೋರಾಟಕ್ಕೆ ಸರ್ಕಾರಿ ನೌಕರರು ಮುಂದಾಗಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯಗೆ ಕಷ್ಟನೋ, ನಷ್ಟನೋ ವೇತನ ಪರಿಷ್ಕರಣೆ ಅನಿವಾರ್ಯ ಎಂಬಂತಾಗಿದೆ.
ಈ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಏಳನೇ ವೇತನ ಆಯೋಗದ ಶಿಫಾರಸನ್ನು ಆದಷ್ಟು ಬೇಗ ಸರ್ಕಾರ ಜಾರಿ ಮಾಡುವ ವಿಶ್ವಾಸ ಇದೆ. ಈಗಾಗಲೇ ಸಿಎಂ, ಡಿಸಿಎಂ ಪರಿಷ್ಕರಣೆಯ ಭರವಸೆ ನೀಡಿದ್ದಾರೆ. ಏಳನೇ ವೇತನ ಆಯೋಗ ಶಿಫಾರಸು ಮಾಡಿದ ಎಲ್ಲಾ ಅಂಶಗಳನ್ನು ಜಾರಿಗೊಳಿಸಬೇಕು. ಸರ್ಕಾರ ಆದಷ್ಟು ಬೇಗ ತೀರ್ಮಾನಕ್ಕೆ ಬರುವ ವಿಶ್ವಾಸ ಇದೆ. ಇಲ್ಲದೇ ಹೋದರೆ ನಾವು ಸಭೆ ನಡೆಸಿ ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಯೋಚಿಸುತ್ತೇವೆ ಎಂದು ತಿಳಿಸಿದ್ದಾರೆ.
ಇದರ ಜೊತೆಗೆ ಏಪ್ರಿಲ್ ನಿಂದ ಪೂರ್ವಾನ್ವಯವಾಗುವಂತೆ ವೇತನ ಬಾಕಿ ನೀಡುವ ಬೇಡಿಕೆ ನೌಕರರ ಸಂಘದ್ದಾಗಿದೆ. ಇದರಿಂದ ಸುಮಾರು 2,800 ಕೋಟಿ ರೂ. ಹೆಚ್ಚುವರಿ ಹೊರೆ ಬೀಳುತ್ತೆ. ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ಶೀಘ್ರದಲ್ಲೇ ಸರ್ಕಾರ ವರದಿ ಜಾರಿ ಸಂಬಂಧ ತೀರ್ಮಾನಕ್ಕೆ ಬರಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಕೇಂದ್ರ ಸರ್ಕಾರ ಮಾದರಿಯಲ್ಲಿ ನಾವು ಖಾಸಗಿ ಸಂಸ್ಥೆಯಿಂದ ಸಲಹೆ ಕೇಳಿದರೆ ತಪ್ಪೇನಿದೆ?: ಡಿ.ಕೆ.ಶಿವಕುಮಾರ್ - D K Shivakumar