ತುಮಕೂರು : ತುಮಕೂರಿನಲ್ಲಿ ಲೋಕಸಭೆ ಚುನಾವಣಾ ಅಖಾಡ ರಂಗೇರಿದೆ. ಎನ್ಡಿಎ ಮೈತ್ರಿ ಅಭ್ಯರ್ಥಿ ವಿ. ಸೋಮಣ್ಣ ಇಂದು ಸಾವಿರಾರು ಕಾರ್ಯಕರ್ತರ ಜೊತೆ ಮೆರವಣಿಗೆಯಲ್ಲಿ ತೆರಳಿ ಶಕ್ತಿ ಪ್ರದರ್ಶನ ಮಾಡಿದರು. ಬೃಹತ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಿದರು.
ಅರ್ಧನಾರೀಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಮೆರವಣಿಗೆಯು ಬಿಜಿ ಪಾಳ್ಯ ಸರ್ಕಲ್ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಸಾಗಿತು. ಮೆರವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್ ಯಡಿಯೂರಪ್ಪ, ಹೆಚ್ ಡಿ ಕುಮಾರಸ್ವಾಮಿ, ಮಾಜಿ ಸಚಿವ ಜನಾರ್ದನ ರೆಡ್ಡಿ, ವಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಸಚಿವ ಬಿ. ಸಿ ನಾಗೇಶ್, ಜಿಲ್ಲೆಯ ಜೆಡಿಎಸ್ ಬಿಜೆಪಿ ಪ್ರಮುಖರು ಭಾಗಿಯಾಗಿದ್ದರು.
ರೋಡ್ ಶೋದಲ್ಲಿ ಆರ್. ಅಶೋಕ್ ಮಾತನಾಡಿ, ರಾಮಮಂದಿರ ಕಟ್ಟೋಕೆ 100 ವರ್ಷ ಆಯ್ತು. ಯಾರಿಗೂ ಕಟ್ಟೋಕೆ ಆಗಿಲ್ಲ. ಮೋದಿನೇ ಬರಬೇಕಾಯ್ತು. ನಮ್ಮ ಬೆಂಬಲ ಯಾರಿಗೆ, ಮೋದಿಗೆ ಎಂದರು. ಕಾಂಗ್ರೆಸ್ ಕಾಶ್ಮೀರವನ್ನ ಬಿಟ್ಟುಬಿಟ್ರು. ಆದರೆ ಮೋದಿ ನಮ್ಮದಾಗಿಸಿಕೊಂಡ್ರು. ರಾಹುಲ್ ಗಾಂಧಿ, ಮೋದಿಗೆ ಸರಿಸಮನಾಗಿ ನಿಲ್ಲೋಕೆ ಆಗುತ್ತಾ?. ಯಾವಾಗ ಫಾರಿನ್ಗೆ ಓಡೋಗ್ತಾರೋ ಗೊತ್ತಿಲ್ಲ ಎಂದರು.
ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಭೀಕರ ಬರಗಾಲ ಇತ್ತು. ಆಮೇಲೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಕ್ಯಾಬಿನೆಟ್ನಲ್ಲಿ ಕೂತ್ರು. ಇಡೀ ರಾಜ್ಯದಲ್ಲೆಲ್ಲ ಮಳೆ ಬಂತು. ಕಾಂಗ್ರೆಸ್ ಸರ್ಕಾರ ಬಂದಾಗ ಬರಗಾಲ. ಬಿಜೆಪಿ ಸರ್ಕಾರ ಬಂದಾಗ ಮಳೆ. ಕಾಂಗ್ರೆಸ್ನವರ ದರಿದ್ರ ಕಾಲುಗುಣದಿಂದ ಬರಗಾಲ ಬಂದಿದೆ ಎಂದು ಅಶೋಕ್ ಟೀಕಿಸಿದರು.
ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ. ಸೋಮಣ್ಣ ಇಂದು ನಾಮಪತ್ರ ಸಲ್ಲಿಸುವ ವೇಳೆ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಹಾಜರಾಗಿ ಸಾಥ್ ನೀಡಿದರು. ಮಾಜಿ ಸಿಎಂಗಳಾದ ಬಿ. ಎಸ್ ಯಡಿಯೂರಪ್ಪ ಹಾಗೂ ಹೆಚ್. ಡಿ ಕುಮಾರಸ್ವಾಮಿ ಹಾಗೂ ವಿರೋಧ ಪಕ್ಷದ ನಾಯಕ ಅಶೋಕ್, ಸಂಸದ ಜಿ ಎಸ್ ಬಸವರಾಜು ಅವರು ಸೋಮಣ್ಣ ನಾಮಪತ್ರ ಸಲ್ಲಿಸುವ ವೇಳೆ ಖುದ್ದು ಹಾಜರಿದ್ದರು. ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಯೂ ಆಗಿರುವ ಶುಭ ಕಲ್ಯಾಣ ಅವರಿಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.
ಇದನ್ನೂ ಓದಿ : ಚಾಮರಾಜನಗರದಲ್ಲಿ ಸಿಎಂ ಸಿದ್ದರಾಮಯ್ಯ ರೋಡ್ ಶೋ: ಮೋದಿ, ಅಮಿತ್ ಶಾ ವಿರುದ್ಧ ವಾಗ್ದಾಳಿ - CM Siddaramaiah Road Show