ಬೆಂಗಳೂರು: ಬೀಗ ಹಾಕಿರುವ ಮನೆಗಳನ್ನ ಗುರಿಯಾಗಿಸಿಕೊಂಡು ಮುಸುಕುಧಾರಿ ವೇಷದಲ್ಲಿ ನುಗ್ಗಿ ದರೋಡೆ ಮಾಡುತ್ತಿದ್ದ ಉತ್ತರಪ್ರದೇಶ ಗ್ಯಾಂಗ್ವೊಂದನ್ನು ಬಂಧಿಸಿರುವ ಕೊಡಿಗೆಹಳ್ಳಿ ಠಾಣೆ ಪೊಲೀಸರು, ಆರೋಪಿಗಳಿಂದ 70 ಲಕ್ಷ ಮೌಲ್ಯದ 1 ಕೆ.ಜಿ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.
ಕಳೆದ ಏ. 24ರಂದು ಸಹಕಾರನಗರದ ನಿವಾಸಿಯಾಗಿರುವ ವೈದ್ಯ ಡಾ.ಉಮಾಶಂಕರ್ ಮನೆಗೆ ನುಗ್ಗಿ 40 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿದ್ದರು. ಈ ಸಂಬಂಧ ದೂರು ನೀಡಲಾಗಿತ್ತು. ತನಿಖೆ ಕೈಗೊಂಡಿದ್ದ ಪೊಲೀಸರು, ಮಹಿಳೆ ಸೇರಿ ಮೂವರನ್ನ ಬಂಧಿಸಿದ್ದರು. ಇದೀಗ ಕಳ್ಳತನ ಪ್ರಕರಣವೊಂದರಲ್ಲಿ ಛತ್ತೀಸ್ಗಢ ಪೊಲೀಸರಿಂದ ಬಂಧಿತರಾಗಿದ್ದ ಜಾಫರ್ ಹಾಗೂ ಇಮ್ರಾನ್ ಎಂಬುವರನ್ನು ಬಾಡಿ ವಾರಂಟ್ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಗರದೆಲ್ಲೆಡೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದಾಗಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳ್ಳತನ ಕೃತ್ಯದಲ್ಲಿ ಸಕ್ರಿಯವಾಗಿದ್ದ ಯುಪಿ ಗ್ಯಾಂಗ್: ಅಪರಾಧ ಕೃತ್ಯವೆಸಗಲು ಬೆಂಗಳೂರು ಸೇರಿದಂತೆ ದೇಶದ ವಿವಿಧ ಕೃತ್ಯಗಳಲ್ಲಿ ಕೈಚಳಕ ತೋರಿಸಿದ್ದರು. ಬೀಗ ಹಾಕಿರುವ ಮನೆಗಳನ್ನ ಟಾರ್ಗೆಟ್ ಮಾಡಿಕೊಂಡು ವ್ಯವಸ್ಥಿತ ಸಂಚು ರೂಪಿಸಿ ಮುಸುಕು ವೇಷಧಾರಿಗಳಾಗಿ ಬಂದು ಅಪಾರ ಪ್ರಮಾಣ ನಗ - ನಾಣ್ಯ ದೋಚುತ್ತಿದ್ದರು. ಅಲ್ಲದೆ, ಮನೆ ಮಾಲೀಕರು ಎದುರಾದರೆ ಪಿಸ್ತೂಲ್ ತೋರಿಸಿ ಬೆದರಿಸಿ ಕೃತ್ಯವೆಸಗುತ್ತಿದ್ದರು. ಕೊಡಿಗೆಹಳ್ಳಿಯಲ್ಲಿ ಎರಡು ಪ್ರಕರಣಗಳಲ್ಲಿ ಭಾಗಿಯಾಗಿದ್ದ ದರೋಡೆಕೋರರು ಎಲೆಕ್ಟ್ರಾನಿಕ್ ಸಿಟಿ ಠಾಣಾ ವ್ಯಾಪ್ತಿಯಲ್ಲಿ ಮೂರು ಪ್ರಕರಣಗಳಲ್ಲಿ ಶಾಮೀಲಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ರಾಬರಿ ಹಣದಲ್ಲಿ ಗೋವಾದಲ್ಲಿ ಕ್ಯಾಸಿನೊದಲ್ಲಿ ಭಾಗಿ: ದರೋಡೆ ಮಾಡಿದ ಹಣದಲ್ಲಿ ಗೋವಾಕ್ಕೆ ತೆರಳಿ ಕ್ಯಾಸಿನೊ ಜೂಜಾಟವಾಡಿ ಮೋಜು ಮಾಡುತ್ತಿದ್ದರು. ಹಣ ಖಾಲಿಯಾಗುವರೆಗೂ ಮೋಜು - ಮಸ್ತಿ ಮಾಡಿ ಬಳಿಕ ಹಣ ಖಾಲಿಯಾಗುತ್ತಿದ್ದಂತೆ ಮತ್ತೆ ಅಪರಾಧ ಕೃತ್ಯಗಳನ್ನ ಎಸಗುತ್ತಿದ್ದರು. ಇಬ್ಬರು ಆರೋಪಿಗಳ ವಿರುದ್ಧ ಮಹಾರಾಷ್ಟ್ರ, ಆಂಧ್ರ, ಛತ್ತೀಸ್ಗಢ ಸೇರಿ ವಿವಿಧ ರಾಜ್ಯಗಳಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕಣ್ಣಿಗೆ ಕಾರದ ಪುಡಿ ಎರಚಿ ಸಿನಿಮೀಯ ರೀತಿಯಲ್ಲಿ ದರೋಡೆ: ಹೆಡ್ ಕಾನ್ಸ್ಟೇಬಲ್ ಸೇರಿ ಏಳು ಆರೋಪಿಗಳ ಬಂಧನ - Robbery Case