ಬೆಂಗಳೂರು: ಈಜು ಕೊಳಗಳಿಗೆ ಕಾವೇರಿ ನೀರು ಬಳಕೆ ಮಾಡುವುದನ್ನು ನಿಷೇಧಿಸಿ ಬೆಂಗಳೂರು ಜಲಮಂಡಳಿ ಆದೇಶ ಹೊರಡಿಸಿದೆ. ನಗರದಲ್ಲಿ ಅಂತರ್ಜಲದ ಕೊರತೆಯಿದ್ದು, ಸರಬರಾಜು ಮಾಡುತ್ತಿರುವ ಕಾವೇರಿ ನೀರನ್ನು ಕುಡಿಯುವ ಬದಲಾಗಿ ಈಜುಕೊಳಗಳಿಗೆ ಬಳಕೆ ಮಾಡುತ್ತಿರುವುದು ಕಂಡು ಬಂದಿದೆ. ಆದ್ದರಿಂದ ನೀರನ್ನು ಈಜುಕೊಳಗಳಿಗೆ ಬಳಕೆ ಮಾಡದಂತೆ ಜಲಮಂಡಳಿ ಆದೇಶಿಸಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ- 1964ರ ಕಲಂ 33 ಮತ್ತು 34 ರ ಅನುಸಾರ ಈ ಆದೇಶವನ್ನು ಹೊರಡಿಸಲಾಗಿದೆ. ಉಲ್ಲಂಘನೆ ಮಾಡಿದಲ್ಲಿ ದಂಡ ವಿಧಿಸುವುದರ ಜೊತೆಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಈ ಆದೇಶವನ್ನು ಯಾರಾದರೂ ಉಲ್ಲಂಘನೆ ಮಾಡುವುದು ಕಂಡು ಬಂದಲ್ಲಿ ಕೂಡಲೇ ಮಂಡಳಿಯ ಕಾಲ್ ಸೆಂಟರ್ ಸಂಖ್ಯೆೆ 1916ಗೆ ತಿಳಿಸಬೇಕು. ತಪ್ಪಿತಸ್ಥರಿಗೆ 1964ರ ಕಾಯ್ದೆ ಕಲಂ 109 ರಂತೆ 5000 ರುಪಾಯಿ ದಂಡ ವಿಧಿಸಲಾಗುತ್ತದೆ. ಆದೇಶ ಉಲ್ಲಂಘನೆ ಮರುಕಳಿಸಿದಲ್ಲಿ ದಂಡದ ಮೊತ್ತ ಐದು ಸಾವಿರದ ಜತೆಗೆ ಹೆಚ್ಚುವರಿಯಾಗಿ 500 ರುಪಾಯಿ (ಪ್ರತಿ ದಿನಕ್ಕೆೆ) ಪಾವತಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದೆ.
ಕುಡಿಯುವ ನೀರನ್ನು ಬೇರೆ ಉದ್ದೇಶಗಳಿಗೆ ಬಳಸುವಂತಿಲ್ಲ: ನಗರದಲ್ಲಿ ವಾಸ ಇರುವ ಎಲ್ಲರಿಗೂ ಕುಡಿಯುವ ನೀರನ್ನು ಪೂರೈಕೆ ಮಾಡುವುದು ಅವಶ್ಯವಾಗಿದ್ದು, ನಿತ್ಯ ಉಷ್ಣಾಂಶ ಏರುತ್ತಿರುವುದರಿಂದ ನಗರದಲ್ಲಿ ನೀರನ್ನು ಪೋಲು ಮಾಡುವುದನ್ನು ತಡೆಗಟ್ಟುವ ಅವಶ್ಯಕತೆಯಿದೆ ಎನ್ನುವುದನ್ನು ಮನಗಂಡು ಕುಡಿಯುವ ನೀರನ್ನು ಸಾರ್ವಜನಿಕರು ಮಿತವಾಗಿ ಬಳಸಬೇಕಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಕುಡಿಯುವ ನೀರನ್ನು ಮನೆ ಮುಂದಿನ ಕೈದೋಟಗಳು, ಕಾರು ಮತ್ತು ಇತರ ವಾಹನಗಳನ್ನು ಸ್ವಚ್ಛಗೊಳಿಸಲು, ಕಟ್ಟಡ ನಿರ್ಮಾಣ ಸೇರಿ ಇತರ ಕಾರ್ಯಗಳಿಗೆ ಬಳಕೆ ಮಾಡದಂತೆ ಈ ಹಿಂದೆ ಆದೇಶ ಹೊರಡಿಸಲಾಗಿತ್ತು.
ಪ್ರಸ್ತುತ ರಾಜ್ಯ ರಾಜಧಾನಿಯಲ್ಲಿ ಜಲಕ್ಷಾಮ ಎದುರಾಗಿದೆ. ಒಂದೆಡೆ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ, ಮತ್ತೊಂದೆಡೆ ಅಂತರ್ಜಲ ಮಟ್ಟ ಕುಸಿದು ಬೋರ್ವೆಲ್ಗಳು ಬತ್ತಿ ಹೋಗುತ್ತಿವೆ. ಈ ಹಿನ್ನೆಲೆ ಜಲ ಮಂಡಳಿ ಕೆಲ ಆದೇಶಗಳನ್ನು ಹೊರಡಿಸಿದೆ. ಕಳೆದ ಸೋಮಾವಾರ ನಗರ ವ್ಯಾಪ್ತಿಯಲ್ಲಿ ಅನುಮತಿ ಪಡೆದಿರುವ ಜಾಗದಲ್ಲಿ ಮಾತ್ರ ಕೊಳವೆ ಬಾವಿಗಳನ್ನು ಕೊರೆಯಬೇಕು ಎಂಬ ಆದೇಶ ಜಾರಿ ಮಾಡಿತ್ತು. ಅನುಮತಿ ಪಡೆಯದೇ ಇರುವ ಸ್ಥಳಗಳಲ್ಲಿ ಕೊಳವೆ ಬಾವಿಗಳನ್ನು ಕೊರೆದರೆ, ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದೆ. ಅಂತರ್ಜಲವನ್ನು ಸಮರ್ಪಕವಾಗಿ ಸದ್ಬಳಕೆ ಮಾಡುವ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡು ಆದೇಶ ಹೊರಡಿಸಿತ್ತು.
ಇದನ್ನೂ ಓದಿ: ತಮಿಳುನಾಡು ಕೇಳಿದರೂ, ಕೇಂದ್ರ ಸರ್ಕಾರ ಹೇಳಿದ್ರೂ ಕಾವೇರಿ ನೀರು ಬಿಡಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ