ದಾವಣಗೆರೆ : ಕೇಸ್ಗಳನ್ನು ವಾಪಸ್ ಪಡೆಯಬೇಕಾದ್ರೆ ಡೆಪ್ತ್ ಏನಿದೆ ಅಂತಾ ನೋಡಬೇಕು. ಇದ್ರಿಂದ ಗಲಭೆಕೋರರು ಬಚಾವ್ ಆಗಬಹುದು ಎಂದು ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಹುಬ್ಬಳ್ಳಿ ಪ್ರಕರಣದ ಕೇಸ್ಗಳನ್ನು ಹಿಂಪಡೆಯುವ ಸರ್ಕಾರದ ನಿರ್ಧಾರದ ವಿಚಾರವಾಗಿ ಪ್ರತಿಕ್ರಿಯಿಸಿದರು. ಹುಬ್ಬಳ್ಳಿಯಲ್ಲಿ ನಡೆದ ಹಿಂದಿನ ಹಲವು ಪ್ರಕರಣಗಳಲ್ಲಿನ ಕೇಸ್ಗಳನ್ನು ಹಿಂಪಡೆಯುವ ಕುರಿತು ಚರ್ಚೆ ನಡೆಯುತ್ತಿದೆ. ಗಲಭೆಕೋರರಿಗೆ ಸರ್ಕಾರದ ಕಡೆಯಿಂದಲೇ ರಕ್ಷಣೆ ನೀಡಲಾಗುತ್ತಿದೆ. ಸಮಾಜ ಉತ್ತಮ ರೀತಿಯಲ್ಲಿ ನಡೆದುಕೊಂಡು ಹೋಗುವುದು ಕಾಂಗ್ರೆಸ್ಗೆ ಇಷ್ಟ ಇಲ್ಲ ಎಂದರು.
ಸರ್ಕಾರ ಜಾಹೀರಾತು ನೀಡಿದ ವಿಚಾರವಾಗಿ ಮಾತನಾಡಿ, ಸರ್ಕಾರ ಜಾಹೀರಾತಿಗಾಗಿ 17 ಕೋಟಿ ಹಣ ವ್ಯಯ ಮಾಡಿದೆ. ಅದರಲ್ಲಿ ಒಂದು ಪಂಚಾಯತಿಯನ್ನು ಮಾಡೆಲ್ ಮಾಡಬಹುದಿತ್ತು. ಜಾಹೀರಾತು ಹೆಸರಲ್ಲಿ ರಾಜ್ಯದ ತೆರಿಗೆ ಹಣ ಲೂಟಿ ಹೊಡೆಯಲಾಗುತ್ತಿದೆ ಎಂದು ಆರೋಪಿಸಿದರು.
ತಮ್ಮ ವಿರುದ್ಧದ ಪ್ರಕರಣ ಕುರಿತ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ನ್ಯಾಯಾಲಯದಲ್ಲಿ ಫೈಟ್ ಮಾಡೋಣ, ಚರ್ಚೆ ಬೇಡ ಎಂದರು. ದೂರು ಕೊಟ್ಟಿದ್ದಾರೆ. ಆದ್ರೆ ಹಿಂದೆ ಯಾರಿದ್ದಾರೆ ಗೊತ್ತಿದೆ. ನನ್ನ ಕೇಸ್ 2012 ರಿಂದ ಎಸ್ಐಟಿಯಲ್ಲಿ ನಡೆಯುತ್ತಿದೆ. 10 ವರ್ಷ ಆದ್ರೂ ಅದನ್ನ ಏಕೆ ಇನ್ನೂ ಜೀವಂತವಾಗಿ ಇಟ್ಟುಕೊಂಡಿದ್ದೀರಿ?. ತನಿಖೆ ನಡೆಯುತ್ತಿದೆ, ಕೋರ್ಟ್ನಲ್ಲಿ ಉತ್ತರ ನೀಡೋಣ. ನಾನು ಸಂವಿಧಾನಬದ್ಧ ರಾಜ್ಯಪಾಲರ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದೆ. ನನ್ನ ಮೇಲೆ ಕೇಸ್ ಹಾಕಿದ್ದಾರೆ. ಕೋರ್ಟ್ನಲ್ಲಿ ಉತ್ತರ ಕೊಡುವೆ ಎಂದು ಹೇಳಿದರು.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ತೆರಿಗೆ ಅನ್ಯಾಯ ಅಭಿಯಾನ : ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ತೆರಿಗೆ ಅನ್ಯಾಯ ಅಭಿಯಾನ ಕುರಿತು ಮಾತನಾಡಿದ ಅವರು, ದೇಶದಲ್ಲಿ ಸ್ವಾತಂತ್ರ್ಯ ಬಂದ ನಂತರ ಫೈನಾನ್ಸ್ ಕಮಿಷನ್ ರಚನೆಯಾಗಿದೆ. ಫೈನಾನ್ಸ್ ಕಮಿಷನ್ ಪ್ರತಿ 5 ವರ್ಷಕ್ಕೊಮ್ಮೆ ಯಾವ್ಯಾವ ರಾಜ್ಯಕ್ಕೆ ಏನೇನು ಕೊಡಬೇಕೆಂಬುದನ್ನು ತೀರ್ಮಾನ ಮಾಡುತ್ತೆ. 16ನೇ ಫೈನಾನ್ಸ್ ಕಮಿಷನ್ ಮೊನ್ನೆ ರಾಜ್ಯಕ್ಕೆ ಬಂದು ಹೋಗಿದೆ ಎಂದರು.
ಪ್ರತಿ ರಾಜ್ಯಕ್ಕೂ ಭೇಟಿ ಕೊಟ್ಟು ಅವರ ಕಡೆಯಿಂದ ಮಾಹಿತಿಯನ್ನು ತೆಗೆದುಕೊಂಡು ಆ ಗೈಡ್ಲೈನ್ಸ್ಗಳ ಪ್ರಕಾರ ಹಣ ನೀಡುತ್ತೆ. 1952 -1953ರಲ್ಲಿ ಗೈಡ್ಲೈನ್ ಆಗಿದೆ. ಸರ್ಕಾರಗಳು ಬಂದ ಮೇಲೆ ರಾಜ್ಯದ ಅಭಿವೃದ್ಧಿಗಳ ಮೇಲೆ ಕೆಲ ಗೈಡ್ ಲೈನ್ಗಳು ಬದಲಾವಣೆ ಆಗಿದೆ ಎಂದು ಹೆಚ್ಡಿಕೆ ಹೇಳಿದರು.
ಇದು ಕೇಂದ್ರದಲ್ಲಿರುವ ಸರ್ಕಾರ ತೀರ್ಮಾನ ತೆಗೆದುಕೊಳ್ಳುವುದಲ್ಲ. ರಾಷ್ಟ್ರಪತಿಗಳಿಂದ ಫೈನಾನ್ಸ್ ಕಮಿಷನ್ ರಚನೆಯಾಗಿರುತ್ತೆ. ಈ ಸರ್ಕಾರ ಏನ್ ಹೇಳುತ್ತಿದೆ, ಆರ್ಥಿಕ ತಜ್ಞರು ಏನ್ ಹೇಳ್ತಾರೆ, ಅದರ ಮೇಲೆ ಚರ್ಚೆ ಮಾಡೋಣ.
ಫೈನಾನ್ಸ್ ಕಮಿಷನ್ ಆಧಾರದ ಮೇಲೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ಐದು ವರ್ಷ ರಾಜ್ಯದಲ್ಲಿ ಯಾರು ಸಿಎಂ ಆಗಿರುತ್ತಾರೆ, ದೇಶದಲ್ಲಿ ಏನ್ ಬದಲಾವಣೆ ಆಗುತ್ತೆ ನೋಡೋಣ ಎಂದು ತಿಳಿಸಿದರು.
ಶಾಸಕ ಬಾಲಕೃಷ್ಣ ಹೇಳುವ ವಿಚಾರಕ್ಕೆ ನಾನು ಉತ್ತರ ಕೊಡಬೇಕಾ: ಶಾಸಕ ಬಾಲಕೃಷ್ಣ ಹೇಳುವ ವಿಚಾರಕ್ಕೆ ನಾನು ಉತ್ತರ ಕೊಡಬೇಕಾ?. ನಾನು ಸಿಎಂ ಆಗಿದ್ದಾಗ ವೆಸ್ಟೆಂಡ್ ಹೋಟೆಲ್ನಲ್ಲಿ ಇದ್ದಿದ್ದು ನಿಜ. ಇದೇ ಬಾಲಕೃಷ್ಣ ಬಗ್ಗೆ 600 ಕೋಟಿ ಹಣ ಕಾಮಗಾರಿ ಮಾಡದೇ ಬಿಲ್ ಮಾಡಿಕೊಂಡಿದ್ದಾರೆ ಅಂತಾ ಸಿದ್ದರಾಮಯ್ಯ ಹಾಗೂ ಮಹದೇವಪ್ಪ ವಿಧಾನ ಸಭೆಯಲ್ಲಿ ಆರೋಪ ಮಾಡಿದ್ದರು. ಸಿದ್ದರಾಮಯ್ಯ, ಮಹದೇವಪ್ಪ ಚರ್ಚೆ ಮಾಡಿ ಸದನ ಸಮಿತಿ ರಚಿಸಿದ್ದರು. ಅಂತವರನ್ನೇ ಸಿಎಂ ಜೊತೆಗಿಟ್ಟುಕೊಂಡಿದ್ದಾರೆ ಎಂದರು.
ಚನ್ನಪಟ್ಟಣದಲ್ಲಿ ನಾನೇ ಅಭ್ಯರ್ಥಿ : ನಾನು ಪಡೆದ ಬಗ್ಗೆ ಸಾಕ್ಷಿಗಳಿದ್ದರೆ ಕೇಸ್ ಮಾಡಲಿ. ಅವರು ನಾನು ಸಿಎಂ ಆಗಿದ್ದಾಗ ನನ್ನ ಜೊತೆಗೆ ಇದ್ದರು. ನನಗೆ ಚೂರಿ ಹಾಕಿ ಬಿಟ್ಟು ಹೋಗಿದ್ದರು. ತೆವಲು ತೀರಿಸಿಕೊಳ್ಳಲು ಹೇಳಿಕೆ ಕೊಟ್ಟರೆ ನಾನು ಉತ್ತರ ಕೊಡಬೇಕಾ?. ಇಂತವರ ಬಗ್ಗೆ ನಾನು ಉತ್ತರ ಕೊಡಬೇಕಾ ಎಂದ ಕುಮಾರಸ್ವಾಮಿ, ಚನ್ನಪಟ್ಟಣದಲ್ಲಿ ನಾನೇ ಅಭ್ಯರ್ಥಿ. ಏನೇ ಆಗಲಿ ಎನ್ಡಿಎ ಅಭ್ಯರ್ಥಿ ಕುಮಾರಸ್ವಾಮಿನೇ ಎಂದು ಹೇಳಿದರು.
ಇದನ್ನೂ ಓದಿ : ಹುಬ್ಬಳ್ಳಿ ಗಲಭೆ ಕೇಸ್ ಹಿಂಪಡೆದ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ; ಅರವಿಂದ ಬೆಲ್ಲದ್, ಅಮೃತ ದೇಸಾಯಿ ಪೊಲೀಸರ ವಶಕ್ಕೆ