ಬೆಳಗಾವಿ ಅಧಿವೇಶನಕ್ಕೆ ತೆರೆ: 64 ತಾಸುಗಳ ಕಾಲ ಕಾರ್ಯಕಲಾಪ; 16 ಮಸೂದೆ ಅಂಗೀಕಾರ - U T KHADER
ಬೆಳಗಾವಿಯ ಅಧಿವೇಶನಕ್ಕೆ ಇಂದು ತೆರೆ ಬಿತ್ತು. ಸುಮಾರು 64 ಗಂಟೆ ಕಲಾಪ ನಡೆಸಲಾಯಿತು ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು.
Published : Dec 19, 2024, 10:36 PM IST
ಬೆಳಗಾವಿ: ಎಂಟು ದಿನಗಳ ಕಾಲ ನಡೆದ ಬೆಳಗಾವಿ ಅಧಿವೇಶನದಲ್ಲಿ ಸುಮಾರು 64 ಗಂಟೆಗಳ ಕಾಲ ಕಾರ್ಯಕಲಾಪ ನಡೆಸಲಾಯಿತು ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.
ಅಧಿವೇಶನದಲ್ಲಿ ಧನವಿನಿಯೋಗ ವಿಧೇಯಕವೂ ಸೇರಿದಂತೆ ಒಟ್ಟು 16 ವಿಧೇಯಕಗಳನ್ನು ಮಂಡಿಸಿ, ಪರ್ಯಾಲೋಚಿಸಿ ಅಂಗೀಕರಿಸಲಾಗಿದೆ. 2024ನೇ ಸಾಲಿನ ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣೆ) (ತಿದ್ದುಪಡಿ) ವಿಧೇಯಕ ಮತ್ತು 2024ನೇ ಸಾಲಿನ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ವಿಧೇಯಕಗಳನ್ನು ಹಿಂಪಡೆಯಲಾಗಿದೆ ಎಂದರು.
ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು ನೀಡಿರುವ 8 ವರದಿಗಳು ಮತ್ತು ಕರ್ನಾಟಕ ವಿಧಾನಮಂಡಲ ವಿಧಾನಸಭೆಯ ವಿವಿಧ ಸ್ಥಾಯಿ ಸಮಿತಿಗಳ 7 ವರದಿಗಳನ್ನು ಸದನದಲ್ಲಿ ಮಂಡಿಸಲಾಗಿದೆ. ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ನಡೆದ ಚರ್ಚೆಯಲ್ಲಿ 49 ಸದಸ್ಯರು ಭಾಗವಹಿಸಿದ್ದು, ಸುಮಾರು 13 ಗಂಟೆ 11 ನಿಮಿಷಗಳ ಕಾಲ ಚರ್ಚೆ ನಡೆಸಲಾಗಿದೆ. ನಿಯಮ 60 ರಡಿಯಲ್ಲಿ ನೀಡಿದ್ದ 2 ನಿಲುವಳಿ ಸೂಚನೆಗಳನ್ನು ನಿಯಮ 69ಕ್ಕೆ ಪರಿವರ್ತಿಸಿರುವುದು ಸೇರಿದಂತೆ ಒಟ್ಟು 4 ಸೂಚನೆಗಳನ್ನು ನಿಯಮ 69ರಡಿಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಒಟ್ಟು 3004 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಸದನದಲ್ಲಿ ಉತ್ತರಿಸಬೇಕಾಗಿದ್ದ 150 ಪ್ರಶ್ನೆಗಳ ಪೈಕಿ 137 ಪ್ರಶ್ನೆಗಳಿಗೆ ಹಾಗೂ ಲಿಖಿತ ಮೂಲಕ ಉತ್ತರಿಸುವ 2,237 ಪ್ರಶ್ನೆಗಳ ಪೈಕಿ 1,794 ಪ್ರಶ್ನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ. ಗಮನ ಸೆಳೆಯುವ 444 ಸೂಚನೆಗಳ ಪೈಕಿ 294 ಸೂಚನೆಗಳಿಗೆ ಉತ್ತರವನ್ನು ಸ್ವೀಕರಿಸಲಾಗಿದೆ. ನಿಯಮ 351 ರಡಿಯಲ್ಲಿ 160 ಸೂಚನೆಗಳನ್ನು ಅಂಗೀಕರಿಸಿದ್ದು, 80 ಸೂಚನೆಗಳ ಉತ್ತರಗಳನ್ನು ಸ್ವೀಕರಿಸಲಾಗಿದೆ. ಶೂನ್ಯ ವೇಳೆಯಲ್ಲಿ ಒಟ್ಟು 5 ಸೂಚನೆಗಳನ್ನು ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇತ್ತೀಚೆಗೆ ನಿಧನ ಹೊಂದಿದ ಗಣ್ಯರುಗಳಿಗೆ ಸಂತಾಪ ಸೂಚನಾ ನಿರ್ಣಯ ಮಂಡಿಸಿ ಅಂಗೀಕರಿಸಲಾಗಿದೆ. ರಾಷ್ಟ್ರಪತಿಗಳು, ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಬಗ್ಗೆ ಕಾರ್ಯದರ್ಶಿಯವರ ವರದಿಯನ್ನೂ ಸಹ ಮಂಡಿಸಲಾಗಿದೆ. ರಾಜ್ಯದಲ್ಲಿ ಸುರಿದ ಅಧಿಕ ಮಳೆಯಿಂದ ಉಂಟಾದ ನಷ್ಟ ಕುರಿತಂತೆ ಕಂದಾಯ ಸಚಿವರು ನೀಡಿದ ಹೇಳಿಕೆಯ ಮೇಲೆ ಚರ್ಚಿಸಲಾಗಿದ್ದು, ಕಂದಾಯ ಸಚಿವರು ಹಾಗೂ ಮುಖ್ಯಮಂತ್ರಿಯವರು ಸ್ಪಷ್ಟೀಕರಣ ನೀಡಿದ್ದಾರೆ. 2024-25ನೇ ಸಾಲಿನ ಪೂರಕ ಅಂದಾಜುಗಳ ಎರಡನೇ ಕಂತು ಹಾಗೂ ರಾಜ್ಯ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನಾ ವರದಿಯನ್ನು ಮಂಡಿಸಿ ಡಿ.17 ರಂದು ಮತಕ್ಕೆ ಹಾಕಿ ಅಂಗೀಕರಿಸಲಾಯಿತು ಎಂದು ಖಾದರ್ ತಿಳಿಸಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸೆನೆಟ್‌ಗೆ ಮೂರು ಸದಸ್ಯರುಗಳನ್ನು ನಾಮನಿರ್ದೇಶನ ಮಾಡಲು ಸದನ ಸಭಾಧ್ಯಕ್ಷರಿಗೆ ಡಿ.18ರಂದು ಅಧಿಕಾರ ನೀಡಿದೆ. ಸದನದಲ್ಲಿ ಟಿ.ಬಿ.ಜಯಚಂದ್ರ ಅವರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಅಂತಾರಾಷ್ಟ್ರೀಯ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪಟ್ಟ ಮುಡಿಗೇರಿಸಿಕೊಂಡ ಭಾರತದ ಗುಖೇಶ್ ದೊಮ್ಮರಾಜು ಅವರಿಗೆ ಅಭಿನಂದನೆ ಸಲ್ಲಿಸಲಾಗಿದೆ. ರಾಷ್ಟ್ರಗೀತೆಯೊಂದಿಗೆ ಸದನವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಯಿತು.
ಇದನ್ನೂ ಓದಿ: ಮಧ್ಯರಾತ್ರಿವರೆಗೆ ವಿಧಾನಸಭೆ; ಬ್ರೇಕ್ ಇಲ್ಲದೇ 15 ತಾಸು ಕಲಾಪ ನಡೆಸಿದ ಸ್ಪೀಕರ್ ಖಾದರ್ - SPEAKER U T KHADER