ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಜಮೀನಿನ ಕೊಳವೆ ಬಾವಿಗೆ ಬಿದ್ದಿದ್ದ ಎರಡು ವರ್ಷದ ಬಾಲಕನನ್ನು ಸತತ ಕಾರ್ಯಾಚರಣೆ ಮೂಲಕ ರಕ್ಷಣೆ ಮಾಡಲಾಗಿದೆ. ಎನ್ಡಿಆರ್ಎಫ್, ಎಸ್ಡಿಆರ್ಎಫ್, ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿಯ 20 ಗಂಟೆಗಳ ಸತತ ಕಾರ್ಯಾಚರಣೆಯಿಂದ ಬಾಲಕ ಸಾತ್ವಿಕ್ ಸಾವು ಗೆದ್ದು ಬಂದಿದ್ದಾನೆ. ರಕ್ಷಣೆ ಬಳಿಕ ಬಾಲಕನನ್ನು ಇಂಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಬಾಲಕನ ಆರೋಗ್ಯ ಸ್ಥಿರವಾಗಿದೆ.
ಸತೀಶ ಮುಜಗೊಂಡ ಹಾಗೂ ಪೂಜಾ ಮುಜಗೊಂಡ ಎಂಬುವರ ಪುತ್ರ ಎರಡು ವರ್ಷ ವಯಸ್ಸಿನ ಸಾತ್ವಿಕ್ ಬುಧವಾರ ಸಂಜೆ ವೇಳೆಗೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಹೊಲದಲ್ಲಿನ ಕೊಳೆವೆ ಬಾಯಿಯಲ್ಲಿ ಬಿದ್ದಿದ್ದ.
ಸತತ 20 ಗಂಟೆಗಳಿಗೂ ಅಧಿಕ ಕಾಲ ಬಾಲಕನ ರಕ್ಷಣೆಗೆ ಕಾರ್ಯಾಚರಣೆ ನಡೆದಿತ್ತು. ನಿನ್ನೆ ಸಂಜೆ 6 ಗಂಟೆಯಿಂದಲೇ ಕಾರ್ಯಾಚರಣೆ ಆರಂಭಿಸಲಾಗಿತ್ತು. ಮುಜಗೊಂಡ ದಂಪತಿಯು ನಾಲ್ಕು ಎಕರೆ ಜಮೀನಿನಲ್ಲಿ ಕಬ್ಬು, ಲಿಂಬೆ ಬೆಳೆಯಲು ಕೊಳವೆಬಾವಿ ಕೊರೆಸಿದ್ದರು. ಈ ಕೊಳವೆ ಬಾವಿಗೆ ಬಾಲಕ ಆಕಸ್ಮಿಕವಾಗಿ ಬಿದ್ದಿದ್ದ. ಬಾಲಕನ ಉಸಿರಾಟಕ್ಕಾಗಿ ಆಕ್ಸಿಜನ್ ಪೂರೈಕೆ ವ್ಯವಸ್ಥೆ ಮಾಡಲಾಗಿತ್ತು. ಆತ ಸುಮಾರು 20 ಅಡಿ ಆಳದಲ್ಲಿ ಸಿಲುಕಿದ್ದ. ಹೈದರಾಬಾದ್ನಿಂದ ರಕ್ಷಣಾ ಕಾರ್ಯಾಚರಣೆ ಆಗಮಿಸಿತ್ತು. 20 ಗಂಟೆಗಳ ಎನ್ಡಿಆರ್ಎಫ್, ಎಸ್ಡಿಆರ್ಎಫ್, ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿಯ 20 ಗಂಟೆಗಳ ಕಾರ್ಯಾಚರಣೆ ಬಳಿಕ ಬಾಲಕನನ್ನ ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ. ಇನ್ನು ಕಾರ್ಯಾಚರಣೆಗೆ ಸಾರ್ವಜನಿಕರು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾತ್ವಿಕ್ ಬದುಕಿ ಬರಲೆಂದು ಪೂಜೆ, ಪುನಸ್ಕಾರ ನಡೆಸಿದ್ದರು. ಲಚ್ಯಾಣ ಗ್ರಾಮದ ಸಿದ್ದಪ್ಪ ಮಹಾರಾಜರ ಗದ್ದುಗೆಯಲ್ಲಿಯೂ ಗ್ರಾಮದ ಯುವಕರು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದ್ದರು.
ಇದನ್ನೂ ಓದಿ: ಬೋರ್ವೆಲ್ನಿಂದ ಬಾಲಕನ ರಕ್ಷಣೆಗೆ ಮುಂದುವರೆದ ಕಸರತ್ತು: ಕಾರ್ಯಾಚರಣೆಗೆ ಬಂಡೆಗಳು ಅಡ್ಡಿ
ಬಾಲಕ ಪೋಷಕರ ಮಡಿಲು ಸೇರಿದ್ದು ಕಂಡು ಖುಷಿಯಾಯಿತು: ಸಿಎಂ
ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಆಕಸ್ಮಿಕವಾಗಿ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಬಾಲಕ ಸಾತ್ವಿಕ್‌ನ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ. ಮಗುವಿನ ರಕ್ಷಣೆಗಾಗಿ ಹಗಲಿರುಳೆನ್ನದೆ ಶ್ರಮಿಸಿದ ಸಿಬ್ಬಂದಿ ಮತ್ತು ಸಾರ್ವಜನಿಕರ ಕಾರ್ಯದಕ್ಷತೆ ಪ್ರಶಂಸನೀಯ. ಮಗುವಿನ ಕುಟುಂಬದವರ, ನಾಡಿನ ಕೋಟ್ಯಂತರ ಜನರ ಹರಕೆ - ಹಾರೈಕೆಗಳು ಫಲಿಸಿದೆ. ಸಾವನ್ನೇ ಗೆದ್ದು ಬಂದ ಪುಟ್ಟ ಕಂದಮ್ಮ ಮತ್ತೆ ಪೋಷಕರ ಮಡಿಲು ಸೇರಿದ್ದು ಕಂಡು ಖುಷಿಯಾಯಿತು ಎಂದು ಸಾಮಾಜಿಕ ಜಾಲತಾಣದಲ್ಲಿ ಸಿಎಂ ಸಿದ್ದರಾಮಯ್ಯ ಹಂಚಿಕೊಂಡಿದ್ದಾರೆ.
ನೀರು ಬಾರದ ಅಥವಾ ಬತ್ತಿದ ಕೊಳವೆ ಬಾವಿಗಳನ್ನು ಮುಚ್ಚದಿದ್ದರೆ ಯಾರದೋ ಅಮಾಯಕ ಜೀವ ಬಲಿಯಾಗುತ್ತದೆ, ಇಂತಹ ಘಟನೆಗಳು ಕಾಲಕಾಲಕ್ಕೆ ಪುನರಾವರ್ತನೆಯಾಗುತ್ತಿದ್ದರೂ ಜನ ಜಾಗೃತರಾಗದೆ ನಿರ್ಲಕ್ಷ್ಯ ತೋರುವುದು ಬೇಸರದ ಸಂಗತಿ. ಸಮಾಜ ಈ ಬಗ್ಗೆ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಸಿಎಂ ಸಲಹೆ ನೀಡಿದ್ದಾರೆ.