ಬೆಂಗಳೂರು: ನಗರದ ಹೊರವಲಯದ ನೈಸ್ ರಸ್ತೆಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಅಪಘಾತಗಳಿಗೆ ವೇಗದ ಚಾಲನೆ ಕಾರಣ ಎಂಬುದನ್ನು ಕಂಡುಕೊಂಡಿರುವ ನಗರ ಸಂಚಾರ ಪೊಲೀಸ್ ಇಲಾಖೆ ಇಂದು ರಾತ್ರಿಯಿಂದಲೇ ದ್ವಿಚಕ್ರ ವಾಹನ ಸಂಚಾರವನ್ನು ನಿಷೇಧಿಸಿದೆ. ಅಲ್ಲದೇ ಇನ್ನಿತರ ವಾಹನಗಳಿಗೆ ವೇಗದ ಮಿತಿ ನಿಗದಿಗೊಳಿಸಿದೆ. ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಈ ಕುರಿತು ಆದೇಶ ಹೊರಡಿಸಿದ್ದಾರೆ.
ಪ್ರತಿದಿನ ರಾತ್ರಿ 10ರಿಂದ ಬೆಳಗ್ಗೆ 5 ಗಂಟೆಯವರೆಗೆ ದ್ವಿಚಕ್ರವಾಹನ ಸಂಚಾರ ನಿಷೇಧಿಸಲಾಗಿದೆ. ನೈಸ್ ರಸ್ತೆಯಲ್ಲಿ ಗರಿಷ್ಠ ವೇಗದ ಮಿತಿ ಪ್ರತಿ ಗಂಟೆಗೆ 120 ಕಿ.ಮೀ.ವರೆಗೆ ನಿಗದಿಪಡಿಸಲಾಗಿದೆ. ಚಾಲಕ ಸೇರಿದಂತೆ 8ಕ್ಕಿಂತ ಹೆಚ್ಚು ಮಂದಿ ಕರೆದೊಯ್ಯುವ ವಾಹನಗಳಿಗೆ ವೇಗದ ಮಿತಿ 120 ಕಿ.ಮೀ ಮತ್ತು 9ಕ್ಕಿಂತ ಹೆಚ್ಚು ಮಂದಿರುವ ವಾಹನಗಳಿಗೆ 100 ಕಿ.ಮೀ ಹಾಗೂ ಗೂಡ್ಸ್ ಹಾಗೂ ದ್ವಿಚಕ್ರ ವಾಹನಗಳಿಗೆ ಪ್ರತಿ ಗಂಟೆಗೆ 80 ಕೀ.ಮಿ ನಿಗದಿಪಡಿಸಲಾಗಿದೆ.
ನಗರದ ಪಶ್ಚಿಮ ಹಾಗೂ ದಕ್ಷಿಣ ವಿಭಾಗದ ವ್ಯಾಪ್ತಿಯಲ್ಲಿರುವ ಕೆಂಗೇರಿ, ಕಾಮಾಕ್ಷಿಪಾಳ್ಯ, ಜ್ಣಾನಭಾರತಿ, ಬ್ಯಾಟರಾಯಪುರ, ತಲಘಟ್ಟಪುರ, ಕೆ.ಎಸ್.ಲೇಔಟ್, ಹುಳಿಮಾವು ಹಾಗೂ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ವ್ಯಾಪ್ತಿಯಲ್ಲಿನ 44 ಕಿ.ಮೀ.ಗಳು ನೈಸ್ ರಸ್ತೆ ಸಂಪರ್ಕಕ್ಕೆ ಬರಲಿದೆ. ಈ ರಸ್ತೆಯಲ್ಲಿ ವೇಗ ಹಾಗೂ ಅಜಾಗರೂಕತೆ ವಾಹನ ಸಂಚಾರದಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ.
ಅಪಘಾತ ತಡೆಯಲು ಹಾಗೂ ಸವಾರರಿಗೆ ಮಾಹಿತಿ ನೀಡಲು ವೇಗದ ಮಿತಿ ಎಚ್ಚರಿಕೆ ನಾಮಫಲಕಗಳು, ಎಲ್ಇಡಿ ಪರದೆ ಅಳವಡಿಸಿದ್ದರೂ ಪ್ರಯೋಜನವಾಗದ ಕಾರಣ ಅಪಘಾತಗಳಲ್ಲಿ ಸಂಖ್ಯೆ ಪ್ರತಿವರ್ಷ ಹೆಚ್ಚಾಗುತ್ತಿದೆ. ಅಲ್ಲದೆ ನೈಸ್ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನಗಳು ಸಂಚಾರದಿಂದಾಗಿ ಮಾರಣಾಂತಿಕ ಅಪಘಾತಗಳ ಪ್ರಮಾಣ ಅಧಿಕವಾಗಿವೆ. ತಹಬದಿಗೆ ತರಲು ರಾತ್ರಿ ಸಂಚಾರ ನಿಷೇಧಿಸಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ನೈಸ್ ರಸ್ತೆಯಲ್ಲಿ ಸಂಭವಿಸಿದ ಅಪಘಾತ ವಿವರ:
ವರ್ಷ | ಮಾರಣಾಂತಿಕ ಅಪಘಾತಗಳ ಸಂಖ್ಯೆ | ಮಾರಣಾಂತಿಕವಲ್ಲದ ಅಪಘಾತಗಳ ಸಂಖ್ಯೆ |
2022 | 42 | 69 |
2023 | 37 | 83 |
2024 (ಜೂನ್ 30 ಅಂತ್ಯಕ್ಕೆ) | 13 | 52 |
ಒಟ್ಟು | 92 | 204 |
ವಾಹನವಾರು ನಿಗದಿಗೊಳಿಸಿರುವ ವೇಗದ ಮಿತಿ ವಿವರ:
ವಾಹನ ವಿಧ | ವೇಗದ ಮಿತಿ (ಪ್ರತಿ ಗಂಟೆಗೆ) |
ವಾಹನ ಚಾಲಕನೂ ಸೇರಿದಂತೆ ಹೆಚ್ಚು ಪ್ರಯಾಣಿಕರನ್ನ ಕರೆದೊಯ್ಯುವ ವಾಹನ | 120 |
9ಕ್ಕಿಂತ ಹೆಚ್ಚುಪ್ರಯಾಣಿಕರುವ ವಾಹನ | 100 |
ಗೂಡ್ಸ್ ವಾಹನಗಳು | 80 |
ದ್ವಿಚಕ್ರ ವಾಹನಗಳು | 80 |
ಇದನ್ನೂ ಓದಿ: ಇಂದಿನಿಂದ ಹೊಸ ನಿಯಮ ಜಾರಿ: ಮೊದಲ ದಿನವೇ 33 ಚಾಲಕರ ವಿರುದ್ಧ ಎಫ್‌ಐಆರ್ - Speed Limit Violation Case