ಬೆಂಗಳೂರು: ರಾಮೇಶ್ವರಂ ಕೆಫೆಗೆ ಬಾಂಬ್ ಸ್ಟೋಟ ಪ್ರಕರಣದ ಶಂಕಿತ ಆರೋಪಿ ತನ್ನ ಗುರುತು ಸಿಗದಂತೆ ಮಾರ್ಗಮಧ್ಯೆ ಬಟ್ಟೆ ಬದಲಿಸಿದ ರೀತಿಯಲ್ಲೇ ಸರಗಳ್ಳರಿಬ್ಬರು ಕಳ್ಳತನ ಮಾಡಿ, ಮಾರ್ಗಮಧ್ಯೆ ಬಟ್ಟೆ ಬದಲಾಯಿಸಿ ತಲೆಮರೆಸಿಕೊಂಡಿದ್ದು, ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇಬ್ಬರು ಖತರ್ನಾಕ್ ಸರಗಳ್ಳರನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಗೌರಮ್ಮ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಸನ್ನ ಕುಮಾರ್ ಹಾಗೂ ದಯಾನಂದ ಎಂಬುವರನ್ನು ಬಂಧಿಸಿ, 44 ಗ್ರಾಂ ತೂಕದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ಸ್ಕೂಟರ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಕೊತ್ತನೂರು ದಿಣ್ಣೆಯಲ್ಲಿ ವಾಸವಾಗಿದ್ದ ದಯಾನಂದ ಬುಕ್ ಸ್ಟೋರ್ ನಡೆಸುತ್ತಿದ್ದ. ಸಾಲಭಾದೆಯಿಂದ ತತ್ತರಿಸುತ್ತಿದ್ದ ಈತ ಕಡಿಮೆ ಸಮಯದಲ್ಲಿ ಹೆಚ್ಚು ಹಣ ಸಂಪಾದನೆ ಮಾಡುವ ದೃಷ್ಟಿಯಿಂದ ಸರಗಳ್ಳತನ ಮಾಡಲು ಯೋಜನೆ ರೂಪಿಸಿದ್ದ. ಇದಕ್ಕೆ ತುಮಕೂರು ಮೂಲದ ಸ್ನೇಹಿತ ಪ್ರಸನ್ನ ಎಂಬಾತನ ನೆರವು ಪಡೆದುಕೊಂಡಿದ್ದ.
ಇಬ್ಬರೂ ಜೊತೆಗೂಡಿ ವ್ಯವಸ್ಥಿತ ಸಂಚು ರೂಪಿಸಿ ಮಾರ್ಚ್ 12 ರಂದು ತಲಘಟ್ಟಪುರ ನಾರಾಯಣನಗರದಲ್ಲಿ ನಡೆದುಕೊಂಡು ಹೋಗುತ್ತಿದ್ದ ಗೌರಮ್ಮಳಿಂದ ಚಿನ್ನದ ಸರ ಕಸಿದುಕೊಂಡು ಎಸ್ಕೇಪ್ ಆಗಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸರಗಳ್ಳರ ಪತ್ತೆಗಾಗಿ ಸುಮಾರು 20 ಕಿ.ಮೀ.ವ್ಯಾಪ್ತಿಯಲ್ಲಿ 85 ಸಿಸಿಟಿವಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿದ್ದರು. ಇದರ ಆಧಾರದ ಮೇರೆಗೆ ಸರಗಳ್ಳರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೆಫೆ ಬಾಂಬ್ ಸ್ಫೋಟದ ಶಂಕಿತ ನಂತನ ಮಾದರಿಯಲ್ಲೇ ಕಳ್ಳರಿಬ್ಬರೂ ತಮ್ಮ ಗುರುತು ಪತ್ತೆಯಾಗದಂತೆ ತಂತ್ರ ಅನುಸರಿಸಿದ್ದರು. ಸರಗಳ್ಳತನದ ಬಳಿಕ ಮಾರ್ಗ ಮಧ್ಯೆ ಧರಿಸಿದ್ದ ಟೋಪಿ ಹಾಗೂ ಬಟ್ಟೆ ಬದಲಾಯಿಸಿಕೊಂಡು ಪರಾರಿಯಾಗಿದ್ದರು. ಗಿರವಿ ಅಂಗಡಿಯೊಂದರಲ್ಲಿ ಚಿನ್ನದ ಸರವನ್ನು ಅಡವಿಟ್ಟು, ಹಣ ಪಡೆದುಕೊಂಡು ಏನು ಮಾಡಿಲ್ಲ ಎಂಬಂತೆ ಮನೆಯಲ್ಲಿ ಉಳಿದುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಉಂಡ ಮನೆಗೆ ಕನ್ನ ಬಗೆದ ಇಬ್ಬರು ಆರೋಪಿಗಳ ಬಂಧನ: ಜ್ಯೂವೆಲ್ಲರಿ ಶಾಪ್ನಲ್ಲಿ ಕಳ್ಳತನ ಮಾಡುತ್ತಿದ್ದ ಚೋರರು ಅಂದರ್
ಪ್ರತ್ಯೇಕ ಪ್ರಕರಣ- ಇಬ್ಬರು ಕಳ್ಳರ ಬಂಧನ: ಕಬ್ಬಿನಹಾಲಿನ ಗಾಡಿಯನ್ನೂ ಕೂಡ ಚೋರರು ಬಿಡುತ್ತಿಲ್ಲ. ಬೀದಿ ಬದಿ ನಿಲ್ಲಿಸಲಾಗಿದ್ದ ಮೋಟಾರ್ ಇದ್ದ ಕಬ್ಬಿನ ಹಾಲಿನ ಗಾಡಿ ಕಳವು ಮಾಡಿದ್ದ ವಿಜಯ್ ಕುಮಾರ್ ಹಾಗೂ ಮಾನ್ಸೂರ್ ಪಾಷಾ ಎಂಬ ಆರೋಪಿಗಳನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದೂರುದಾರ ಸೈಯ್ಯದ್ ನಫೀಜ್ ಎಂಬುವರು ಅಂಜನಾಪುರ ಕೆರೆ ಬಳಿ ಕಬ್ಬಿನಹಾಲಿನ ಗಾಡಿ ಇಟ್ಟುಕೊಂಡಿದ್ದರು. ಮಾ.1ರ ರಾತ್ರಿ ಆರೋಪಿತರು ಮೋಟಾರ್ ಇದ್ದ ಕಬ್ಬಿನಹಾಲಿನ ಗಾಡಿಯನ್ನು ಕಳ್ಳತನ ಮಾಡಿದ್ದರು. ಬಳಿಕ 1 ಲಕ್ಷ ರೂ. ಬೆಲೆಯ ಗಾಡಿಯನ್ನು 30 ಸಾವಿರ ರೂ.ಗೆ ಗುಜರಿಗೆ ಹಾಕಿದ್ದರು. ಆರೋಪಿ ವಿಜಯ್ ಕುಮಾರ್ ಈ ಹಿಂದೆ ಬೈಕ್ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ. ಸದ್ಯ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.