ಹಾವೇರಿ: ಇಬ್ಬರು ಸರ್ಕಾರಿ ಅಧಿಕಾರಿಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಎರಡು ಪ್ರತ್ಯೇಕ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗಿದೆ. ಹಾನಗಲ್ ತಾಲೂಕಿನ ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಚಂದ್ರಶೇಖರ್ (53) ಮತ್ತು ರಟ್ಟಿಹಳ್ಳಿ-ಹಿರೇಕೆರೂರು ತಾಲೂಕಿನ ದೈಹಿಕ ಶಿಕ್ಷಣಾಧಿಕಾರಿ ರೇವಣಸಿದ್ದಪ್ಪ ಮಾಳಿಗೇರ (58) ಮೃತರು.
ಎಸ್.ಚಂದ್ರಶೇಖರ್ ಮೂಲತಃ ತುಮಕೂರು ಜಿಲ್ಲೆಯವರು ಎನ್ನಲಾಗಿದ್ದು, ಹಾನಗಲ್ ಕಚೇರಿಯಲ್ಲಿ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು. ಹಾನಗಲ್‌ನಲ್ಲಿ ಒಂಟಿಯಾಗಿ ವಾಸವಿದ್ದು, ಕುಟುಂಬದ ಸದಸ್ಯರು ತುಮಕೂರಿನಲ್ಲಿದ್ದಾರೆ. ಕಚೇರಿಗೂ ಬಾರದ ಹಿನ್ನೆಲೆಯಲ್ಲಿ ಮತ್ತು ದೂರವಾಣಿ ಕರೆಯನ್ನೂ ಸ್ವೀಕರಿಸದ ಕಾರಣ ಕಚೇರಿ ಸಿಬ್ಬಂದಿ ಮನೆಗೆ ಹೋಗಿ ಪರಿಶೀಲಿಸಿದ್ದು, ಶವವಾಗಿ ಪತ್ತೆಯಾಗಿರುವುದು ಗೊತ್ತಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದ್ದು, ಮೇಲ್ನೋಟಕ್ಕೆ ಚಂದ್ರಶೇಖರ್ ಅವರಿಗೆ ಹೃದಯಘಾತವಾಗಿದೆ ಎಂದು ದೂರಿನಲ್ಲಿ ದಾಖಲಾಗಿದೆ.
ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿಯಾಗಿದ್ದ ರೇವಣಸಿದ್ದಪ್ಪ ಮಾಳಿಗೇರ ಕುಮುದ್ವತಿ ನದಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಇವರು ಹಿರೇಕೆರೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಜುಲೈ 22ರಂದು ಕರ್ತವ್ಯಕ್ಕೆ ತೆರಳಿ, ಬಳಿಕ ಕಾಣೆಯಾಗಿದ್ದರು. ಕೆಲಸ ಮುಗಿಸಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಪತ್ನಿ ಸಾಕಷ್ಟು ಹುಡುಕಾಡಿದ್ದರು. ಆದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಬಳಿಕ ಇವರ ಮೃತದೇಹ ಗುರುವಾರ ಸಂಜೆ ಆರೂವರೆ ಗಂಟೆಗೆ ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಕುಮುದ್ವತಿ ನದಿಯಲ್ಲಿ ಪತ್ತೆಯಾಗಿದೆ. ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ. ಹಿರೇಕೆರೂರು ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.