ಬೆಂಗಳೂರು: ಉತ್ತರಾಖಂಡದ ಸಹಸ್ತ್ರತಾಲ್ ಪರ್ವತಾರೋಹಣಕ್ಕೆ ತೆರಳಿ ಹವಾಮಾನ ವೈಪರೀತ್ಯದಿಂದಾಗಿ ಮೃತಪಟ್ಟಿರುವವರ ಮೃತದೇಹಗಳನ್ನು ಕುಟುಂಬದವರಿಗೆ ತಲುಪಿಸುವ ಮತ್ತು ರಕ್ಷಿಸಲ್ಪಟ್ಟಿರುವ ಉಳಿದ ಚಾರಣಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡೆಹ್ರಾಡೋನ್ನಲ್ಲಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ರಕ್ಷಿಸಲ್ಪಟ್ಟ ಚಾರಣಿಗರ ಜೊತೆ ದೂರವಾಣಿ ಮೂಲಕ ಮಾತನಾಡಿದರು.
ಮೃತರ ಸಂಖ್ಯೆ 9ಕ್ಕೆ ಏರಿದ ಸಂಗತಿ ತಿಳಿದು ಬಹಳ ನೋವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ರಕ್ಷಿಸಲ್ಪಟ್ಟಿರುವ ಎಲ್ಲರನ್ನೂ ಯಾವುದೇ ಅಡಚಣೆ ಆಗದಂತೆ ಸುರಕ್ಷಿತವಾಗಿ ಮನೆಗಳಿಗೆ ಸೇರಿಸಬೇಕು. ಮೃತ ದೇಹಗಳನ್ನು ಕುಟುಂಬದವರಿಗೆ ತಲುಪಿಸುವ ನಿಟ್ಟಿನಲ್ಲೂ ಅಗತ್ಯವಾದ ಎಲ್ಲಾ ಪ್ರಕ್ರಿಯೆಗಳನ್ನು ತುರ್ತಾಗಿ ನಿರ್ವಹಿಸಬೇಕು ಎನ್ನುವ ಸೂಚನೆಗಳನ್ನು ಸಚಿವ ಕೃಷ್ಣಬೈರೇಗೌಡರಿಗೆ ನೀಡಿದ್ದಾರೆ.
ರಕ್ಷಿಸಲ್ಪಟ್ಟು ಸುರಕ್ಷಿತ ನೆಲೆಗೆ ಕರೆತರಲಾಗಿರುವ ಚಾರಣಿಗರ ಜೊತೆಗೂ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಾಕಿ ಉಳಿದಿರುವ ಪ್ರತಿಯೊಬ್ಬರನ್ನೂ ಸುರಕ್ಷಿತವಾಗಿ ಕಾಪಾಡಿ ಕರೆತರುವ ಬಗ್ಗೆ ಸರ್ಕಾರಗಳ ಮಟ್ಟದಲ್ಲಿ ಸಕಲ ಪ್ರಯತ್ನಗಳೂ ನಡೆಯುತ್ತಿವೆ ಎಂದು ಭರವಸೆ ನೀಡಿದ್ದಾರೆ.
ಈಗಾಗಲೇ ರಕ್ಷಣಾ ಕಾರ್ಯಾಚರಣೆ ಮೂಲಕ ರಕ್ಷಿಸಲ್ಪಟ್ಟವರನ್ನು ಸುರಕ್ಷಿತ ಪ್ರದೇಶಕ್ಕೆ ವಾಪಸ್ ಕರೆತರಲಾಗಿದ್ದು, ಇನ್ನೂ ಕೆಲವು ಚಾರಣಿಗರ ರಕ್ಷಣೆ ಆಗಬೇಕಿದೆ. ಪ್ರತಿಕೂಲ ಹವಾಮಾನವು ರಕ್ಷಣಾ ಕಾರ್ಯಕ್ಕೆ ತೀವ್ರ ಅಡಚಣೆ ಉಂಟುಮಾಡುತ್ತಿದ್ದು, ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲು ನಮ್ಮ ಸರ್ಕಾರವು ಶಕ್ತಿಮೀರಿ ಪ್ರಯತ್ನಿಸುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಉತ್ತರಾಖಂಡ್ ಟ್ರೆಕ್ಕಿಂಗ್ ದುರಂತ: ಬೆಂಗಳೂರಿನ 9 ಚಾರಣಿಗರು ಸಾವು, 11 ಜನರ ರಕ್ಷಣೆ - TREKKING TRAGEDY
ಉತ್ತರಕಾಶಿಯ ಉತ್ತರಕಾಶಿ-ತೆಹ್ರಿ ಜಿಲ್ಲೆಯ ಗಡಿಯಲ್ಲಿರುವ ಸಹಸ್ತ್ರತಾಲ್ ಪರ್ವತಾರೋಹಣಕ್ಕೆ ತೆರಳಿ ಸಾವನ್ನಪ್ಪಿದ್ದವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಇದರಲ್ಲಿ ಐವರ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. ಇವರೆಲ್ಲರೂ ಕರ್ನಾಟಕದವರೆಂದು ತಿಳಿದು ಬಂದಿದೆ. ನಾಪತ್ತೆಯಾದ ಇನ್ನೂ ನಾಲ್ವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಹಿಮದಲ್ಲಿ ಸಿಲುಕಿದ್ದ 11 ಜನರನ್ನು ರಕ್ಷಣೆ ಮಾಡಲಾಗಿದೆ. ಕರ್ನಾಟಕದ 18, ಮಹಾರಾಷ್ಟ್ರ ಒಬ್ಬ ಮತ್ತು ಮೂವರು ಸ್ಥಳೀಯ ಮಾರ್ಗದರ್ಶಕರು ಸೇರಿ ಒಟ್ಟು 22 ಜನರ ತಂಡ ಪರ್ವತಾರೋಹಣಕ್ಕೆ ತೆರಳಿತ್ತು. ಈ ವೇಳೆ ಹವಾಮಾನ ವೈಪರೀತ್ಯ ಉಂಟಾಗಿದೆ. ಇದರಿಂದ ಹಿಮದಲ್ಲಿ ಸಿಲುಕಿ 9 ಮಂದಿ ಅಸುನೀಗಿದ್ದಾಗಿ ವರದಿಯಾಗಿದೆ.
22 ಸದಸ್ಯರ ಟ್ರೆಕ್ಕಿಂಗ್ ತಂಡವು ಮೇ 29ರಂದು ಮನೇರಿಯ ಹಿಮಾಲಯನ್ ವ್ಯೂ ಟ್ರೆಕ್ಕಿಂಗ್ ಏಜೆನ್ಸಿ ಮುಖಾಂತರವಾಗಿ ಮಲ್ಲ-ಸಿಲ್ಲಾ-ಕುಷ್ಕಲ್ಯಾಣ-ಸಹಸ್ತ್ರತಾಲ್ಗೆ ಟ್ರೆಕ್ಕಿಂಗ್ಗೆ ತೆರಳಿತ್ತು. ಈ ತಂಡವು ಜೂನ್ 7ರೊಳಗೆ ಹಿಂತಿರುಗಬೇಕಿತ್ತು. ಟ್ರೆಕ್ಕಿಂಗ್ ತಂಡ ಮಂಗಳವಾರ ಸಹಸ್ತ್ರತಾಲ್ಗೆ ಹಿಂತಿರುಗಿದ್ದ ವೇಳೆ ಹಠಾತ್ ಹವಾಮಾನ ಬದಲಾಗಿಯಾಗಿದೆ. ದಟ್ಟವಾದ ಮಂಜು ಮತ್ತು ಹಿಮಪಾತದ ನಡುವೆ ಸಿಲುಕಿಕೊಂಡಿದ್ದಾರೆ. ಅಲ್ಲಿ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಚಾರಣಿಗರು ಇಡೀ ರಾತ್ರಿ ಚಳಿಯಲ್ಲಿ ಸಿಲುಕಿಕೊಂಡಿದ್ದರು.