ಬೆಳಗಾವಿ: ಇಂದು ವಡಾಪಾವ್ ದಿನ. ಕುಂದಾನಗರಿ ಬೆಳಗಾವಿ ಸೇರಿದಂತೆ ರಾಜ್ಯದ ಹಲವೆಡೆ ಸಾಯಂಕಾಲವಾದರೆ ಸಾಕು ವಡಾಪಾವ್ ಅಂಗಡಿಗಳಿಗೆ ಜನ ಮುಗಿಬೀಳುತ್ತಾರೆ. ವಡಾಪಾವ್ ಸವಿದು ಎಂಜಾಯ್ ಮಾಡುತ್ತಾರೆ.
ಮಹಾರಾಷ್ಟ್ರದ ಮುಂಬೈ ಮಹಾನಗರದ ದಾದರ್ ರೈಲ್ವೆ ನಿಲ್ದಾಣದಲ್ಲಿ ಆಗಸ್ಟ್ 23, 1966ರಂದು ಅಶೋಕ ವೈದ್ಯ ಎಂಬವರು 'ವಡಾಪಾವ್' ಎಂಬ ವಿನೂತನ ತಿನಿಸನ್ನು ಅಲ್ಲಿನ ಜನರಿಗೆ ಪರಿಚಯಿಸುತ್ತಾರೆ. ಆ ಬಳಿಕ ವಡಾಪಾವ್ ಮಹಾರಾಷ್ಟ್ರ ಅಲ್ಲದೇ ದೇಶ, ವಿದೇಶದಲ್ಲೂ ಜನಪ್ರಿಯತೆ ಗಳಿಸುತ್ತದೆ. ಅದರಲ್ಲೂ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಬೆಳಗಾವಿಯಲ್ಲೂ ವಡಾಪಾವ್ ಹವಾ ಜೋರಾಗಿದೆ. ಇಲ್ಲಿನ ಗಲ್ಲಿ ಗಲ್ಲಿಗಳಲ್ಲೂ ವಡಾಪಾವ್ ಅಂಗಡಿಗಳಿದ್ದು, ಸಾಯಂಕಾಲವಾದರೆ ಸಾಕು ವಡಾಪಾವ್ ಸವಿಯಲು ಜನ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಾರೆ. ವಡಾಪಾವ್ ಜನಪ್ರಿಯತೆ ಗುರುತಿಸಿ ಪ್ರತಿ ವರ್ಷ ಆಗಸ್ಟ್ 23ರಂದು 'ವಿಶ್ವ ವಡಾಪಾವ್' ದಿನಾಚರಿಸಲಾಗುತ್ತದೆ.
ಕಡಲೆ ಹಿಟ್ಟು, ಆಲೂಗಡ್ಡೆ, ಬೆಳ್ಳುಳ್ಳಿ , ಮೆಣಸಿನಕಾಯಿ, ಕೊತ್ತಂಬರಿಯನ್ನು ಹದವಾಗಿ ಬೆರೆಸಿ ಎಣ್ಣೆಯಲ್ಲಿ ಕರೆದು ವಡೆ ತಯಾರಿಸಲಾಗುತ್ತದೆ. ಹೀಗೆ ತಯಾರಿಸಿದ ವಡೆಯನ್ನು ಪಾವ್(ಬನ್) ಒಳಗೆ ಹಾಕಿ, ಚಟ್ನಿ, ಸಾಸ್ ಹಾಕಿ ಕೊಡುತ್ತಾರೆ. ಬಿಸಿ ಬಿಸಿ ವಡಾವನ್ನು ಪಾವ್‌ನೊಂದಿಗೆ ಕರಿದ ಮೆಣಸಿನಕಾಯಿ ಕಚ್ಚಿಕೊಂಡು ತಿಂದರೆ ಸ್ವರ್ಗಕ್ಕೆ ಮೂರೇ ಗೇಣು. 1 ನಾರ್ಮಲ್ ವಡಾಪಾವ್ 15 ರೂ., ಚೀಜ್ ವಡಾಪಾವ್ 30 ರೂ., ಬಟರ್ ವಡಾಪಾವ್ 25 ರೂ., ಮಸಾಲಾ ವಡಾಪಾವ್ 25 ರೂ. ದರವಿದೆ.
ಬೆಳಗಾವಿಯ ಕಂಗ್ರಾಳಗಲ್ಲಿಯ ಶ್ರೀರೇಣುಕಾ ವಡಾಪಾವ್ ಸೆಂಟರ್ ಮಾಲೀಕ ರಾಜು 'ಈಟಿವಿ ಭಾರತ್' ಜೊತೆಗೆ ಮಾತನಾಡಿ, "18ರಿಂದ 20 ವರ್ಷಗಳಿಂದ ವಡಾಪಾವ್ ಮಾಡುತ್ತಿದ್ದೇನೆ. ಜನ ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಮೊದಲು ಸಣ್ಣ ಅಂಗಡಿ ಶುರು ಮಾಡಿದೆ. ಈಗ ಸ್ವಲ್ಪ ದೊಡ್ಡದು ಮಾಡಿದೆ. ಸಾಯಂಕಾಲ 4ರಿಂದ ರಾತ್ರಿ 10 ಗಂಟೆಯವರೆಗೆ ಜನ ಬರುತ್ತಾರೆ. ದಿನಕ್ಕೆ 300 ವಡಾಪಾವ್ ಮಾರಾಟ ಆಗುತ್ತದೆ" ಎಂದು ಹೇಳಿದರು.
ವಡಾಪಾವ್ ಪ್ರಿಯರಾದ ಸುಷ್ಮಾ ಪಾಟೀಲ ಮಾತನಾಡಿ, "ಕಳೆದ ಮೂರು ವರ್ಷಗಳಿಂದ ವಡಾಪಾವ್ ತಿನ್ನುತ್ತಿದ್ದು, ತುಂಬಾ ರುಚಿಯಾಗಿದೆ. ಎಲ್ಲದಕ್ಕೂ ಒಂದೊಂದು ದಿನ ಮಾಡಿದ್ದಾರೆ. ಇಂದು ವಡಾಪಾವ್ ದಿನ ಇರೋದು ಕೇಳಿ ತುಂಬಾ ಖುಷಿ ಆಗುತ್ತಿದೆ" ಎಂದರು.
ಮತ್ತೊಬ್ಬ ವಡಾಪಾವ್ ಪ್ರಿಯರಾದ ಶಿಲ್ಪಾ ಮಾತನಾಡಿ, "ನನಗೆ ವಡಾಪಾವ್ ಅಂದರೆ ತುಂಬಾ ಇಷ್ಟ. ಎರಡು ದಿನಕ್ಕೆ ಒಮ್ಮೆಯಾದರೂ ತಿನ್ನುತ್ತೇನೆ. ವಡಾಪಾವ್ ತಿನ್ನೋ ಫೀಲ್ ಬೇರೆನೇ ಇರುತ್ತದೆ. ಹಾಗಾಗಿ, ಎಲ್ಲರೂ ವಡಾಪಾವ್ ತಿಂದು ಎಂಜಾಯ್ ಮಾಡಿ" ಎಂದು ಹೇಳಿದರು.
ಇದನ್ನೂ ಓದಿ: ಹೆಸರು ರಾಶಿ ಜೋರು, ದರ ನೋಡಿದ್ರೆ ಚೂರು: ಖರೀದಿ ಕೇಂದ್ರ ತೆರೆಯದ ವಿರುದ್ಧ ಅನ್ನದಾತನ ಆಕ್ರೋಶ - Green Gram