ಗುವಾಹಟಿ: ನಾಪತ್ತೆಯಾಗಿದ್ದ ಆರು ಜನರ ಶವ ನದಿಯಲ್ಲಿ ಪತ್ತೆಯಾದ ಬೆನ್ನಲ್ಲೇ ಮಣಿಪುರದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಮೃತರ ಸಮುದಾಯದವರು ನ್ಯಾಯಕ್ಕಾಗಿ ಆಗ್ರಹಿಸಿ ನಡೆಸುತ್ತಿದ್ದ ಪ್ರತಿಭಟನೆ ಶನಿವಾರ ಹಿಂಸಾರೂಪ ಪಡೆಯಿತು. ಇದರ ಪರಿಣಾಮ, ಸಚಿವರು ಹಾಗೂ ಆರು ಶಾಸಕರ ನಿವಾಸಕ್ಕೆ ನುಗ್ಗಿ ಬೆಂಕಿ ಹಚ್ಚಿದ್ದಲ್ಲದೇ ಸಿಎಂ ಎನ್.ಬಿರೇನ್ ಸಿಂಗ್ ಮನೆ ಮೇಲೂ ದಾಳಿ ಯತ್ನ ನಡೆದಿದೆ. ಇದರಿಂದಾಗಿ ಅನಿರ್ದಿಷ್ಠಾವಧಿಗೆ ಐದು ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ.
ಪ್ರತಿಭಟನೆ ತೀವ್ರವಾದ ಬೆನ್ನಲ್ಲೇ ಪೂರ್ವ ಇಂಫಾಲ್, ಪಶ್ಚಿಮ ಇಂಫಾಲ್, ಬಿಸ್ನುಪರ, ಥೋಬಲ್, ಕಕ್ಚಿಂಗ್, ಕಂಗ್ಪೋಕ್ಪಿ ಮತ್ತು ಚುರಚಂದಪುರ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜೊತೆಗೆ ಇಂಟರ್ನೆಟ್, ಬ್ರಾಡ್‌ಬ್ಯಾಂಡ್ ಮತ್ತು ವಿಎಸ್ಎಟಿ ಸೇವೆಯನ್ನೂ ಸರ್ಕಾರ ತಾತ್ಕಾಲಿಕವಾಗಿ ರದ್ದುಗೊಳಿಸಿದೆ.
ಸಿಎಂ ನಿವಾಸಕ್ಕೆ ನುಗ್ಗಲು ಯತ್ನ: ಇಂಫಾಲದಲ್ಲಿ ಸಿಎಂ ಬಿರೇನ್ ಸಿಂಗ್ ಖಾಸಗಿ ನಿವಾಸಕ್ಕೆ ಪ್ರತಿಭಟನಾಕಾರರು ನುಗ್ಗಲು ಯತ್ನಿಸಿದರು. ಆದ್ರೆ ಭದ್ರತಾ ಪಡೆಗಳ ಸೂಕ್ತ ಬಂದೋಬಸ್ತ್ನಿಂದಾಗಿ ಮನೆ ಮೇಲೆ ದಾಳಿ ಸಾಧ್ಯವಾಗಿಲ್ಲ. ಹಾಗೆಯೇ ಸಿಎಂ ಅಳಿಯ ಸೇರಿದಂತೆ ಶಾಸಕರ ಮತ್ತು ಸಚಿವರ ಮನೆಗೆ ನುಗ್ಗಿ ಬೆಂಕಿ ಹಚ್ಚಿದ್ದಾರೆ. ಕೆಲ ಬಿಜೆಪಿ ನಾಯಕರ ಮನೆಗಳಿಗೂ ನುಗ್ಗಿ, ಪೀಠೋಪಕರಣ ಧ್ವಂಸಗೊಳಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸಪಂ ರಂಜನ್, ಪೌರಾಡಳಿತ ವಸತಿ ಅಭಿವೃದ್ಧಿ ಸಚಿವ ವೈ.ಖೇಮ್‌ಚಂದ್, ಸಿಎಂ ಅಳಿಯ ಮತ್ತು ಬಿಜೆಪಿ ಶಾಸಕ ಆರ್.ಕೆ.ಇಮೋ, ಬಿಜೆಪಿ ಶಾಸಕ ಸಪಂ ಕುಂಜಕೆಸೋರೆ, ಶಾಸಕ ಜೋಯ್‌ಕಿಶನ್ ಸಿಂಗ್, ಜೆಡಿಯು ಶಾಸಕ ಟಿ.ಅರುಣ್ ಮತ್ತು ಶಾಸಕ ಕರಮ್ ಶ್ಯಾಮ್ ಅವರ ನಿವಾಸದ ಮೇಲೆ ಪ್ರತಿಭಟನಾಕಾರರು ದಾಳಿ ಮಾಡಿದ್ದಾರೆ. ಹಾಗೆಯೇ ಸ್ವತಂತ್ರ ಶಾಸಕ ಸಪಂ ನಿಶಿಕಾಂತ ಸಿಂಗ್ ಅವರ ಕಚೇರಿಗೆ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಕೆಲ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂವರು ಮಕ್ಕಳು, ಮೂವರು ಮಹಿಳೆಯರು ಸೇರಿದಂತೆ ಆರು ಜನರು ಸೋಮವಾರ ನಾಪತ್ತೆಯಾಗಿದ್ದರು. ಇವರ ಪತ್ತೆಗಾಗಿ ಸಮುದಾಯದ ಜನರು ಆಗ್ರಹಿಸಿದ್ದರು. ಈ ಬೆನ್ನಲ್ಲೇ ಎಲ್ಲರ ಶವಗಳು ಜಿರಿಬಾಮ್ ಬಳಿ ನದಿಯಲ್ಲಿ ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ನ್ಯಾಯಕ್ಕಾಗಿ ಜನರು ಬೀದಿಗಿಳಿದು ಪ್ರತಿಭಟನೆಗಿಳಿದಿದ್ದಾರೆ.
ಪರಿಸ್ಥಿತಿ ನಿಯಂತ್ರಣಕ್ಕೆ ಎಲ್ಲ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಿಂಸಾ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಗೃಹ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಮಣಿಪುರಕ್ಕೆ ಭೇಟಿ ನೀಡಿ, ಶಾಂತಿ ಮರುಸ್ಥಾಪಿಸಲು ಶ್ರಮಿಸಲಿ: ರಾಹುಲ್ ಗಾಂಧಿ