ಬಳ್ಳಾರಿ: ನೀರಿನ ದೊಡ್ಡ ಹೊಂಡಕ್ಕೆ ಬಿದ್ದು ಮೂವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಬಳ್ಳಾರಿಯ ಜಿಂದಾಲ್ ಕಾರ್ಖಾನೆಯಲ್ಲಿ ನಡೆದಿದೆ. ಸ್ಟೀಲ್ ಮೆಟೀರಿಯಲ್ ತಂಪಾಗಿಸುವ ನೀರಿನ ಹೊಂಡಕ್ಕೆ ನೀರು ಬಿಡಲಾಗುತ್ತಿತ್ತು.
ಈ ವೇಳೆ ಪೈಪಲೈನ್ ಚೆಕ್ ಮಾಡುತ್ತಿದ್ದ ಮೂವರು ಆಯತಪ್ಪಿ ನೀರಿನ ರಭಸಕ್ಕೆ ಸಿಲುಕಿಕೊಂಡು ಹೊಂಡಕ್ಕೆ ಬಿದ್ದಿದ್ದಾರೆ. ಆಳವಾದ ಹೊಂಡದಲ್ಲಿ ಬಿದ್ದ ಪರಿಣಾಮ ಮೂವರು ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಜಿಂದಾಲ್ ಸಂಜೀವಿನಿ ಆಸ್ಪತ್ರೆಗೆ ಸೇರಿಸಿದ್ದರೂ ಸಹ ಚಿಕಿತ್ಸೆ ಫಲಕಾರಿಯಾಗದೇ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಮೃತರನ್ನು ಭುವನಹಳ್ಳಿ ಮೂಲದ ಜೆಡೆಪ್ಪ, ಬೆಂಗಳೂರಿನ ಸುಶಾಂತ್, ಚೆನ್ನೈ ಮೂಲದ ಮಹಾದೇವನ್ ಎಂದು ಗುರುತಿಸಲಾಗಿದೆ. ಘಟನೆ ನಡೆದ ಸ್ಥಳಕ್ಕೆ ತೋರಣಗಲ್ಲು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ನಿಖರವಾದ ಕಾರಣ ಏನು ಎಂಬುದರ ಬಗ್ಗೆ ಪೊಲೀಸರಿಂದ ತನಿಖೆ ನಡೆಯುತ್ತಿದೆ.
ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸ್ಥಳದಲ್ಲೇ ಸಾವು: ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸ್ಥಳದಲ್ಲೇ ಸಾವಿಗೀಡಾದ ಘಟನೆ ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಚಿಕ್ಕೆನಕೊಪ್ಪ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ. ಚಿಕ್ಕೆನಕೊಪ್ಪ ಗ್ರಾಮದ ಈರಪ್ಪ ಕುರಿ(55) ಮೃತ ವ್ಯಕ್ತಿಯಾಗಿದ್ದು, ವಿಂಡ್ ಪವರ್ ಕಂಪನಿ ನಿರ್ಲಕ್ಷ್ಯದಿಂದಲೇ ವ್ಯಕ್ತಿ ಸಾವು ಆಂತ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ
ರಪ್ಪ ಕುರಿ ಮೇಕೆಗಳನ್ನು ಮೇಯಿಸಲು ಹೋದಾಗ ಮೇಕೆಗಳಿಗೆ ಸೊಪ್ಪು ಹಾಕಲು ಮರದ ಟೊಂಗೆ ಕತ್ತರಿಸಲು ಮುಂದಾಗಿದ್ದ. ಈ ವೇಳೆ ಮರದ ಮೇಲೆ ಬಿದ್ದಿದ್ದ ಹೈಟೆನ್ಷನ್ ವೈಯರ್ ಈರಪ್ಪಗೆ ತಗುಲಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೇಕೆ ಮೆಯಿಸಲು ಹೋಗಿದ್ದ ಈರಪ್ಪ ರಾತ್ರಿಯಾದರೂ ಮನೆಗೆ ಬಾರದೇ ಇದ್ದಾಗ ಆತಂಕಗೊಂಡ ಕುಟುಂಬಸ್ಥರು ಈರಪ್ಪನಿಗಾಗಿ ಹುಡುಕಾಟ ನಡೆಸಿದಾಗ ಮರದ ಬಳಿ ಈರಪ್ಪನ ಶವ ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪೊಲೀಸರೊಂದಿಗೆ ಗ್ರಾಮಸ್ಥರು ವಾಗ್ವಾದ ನಡೆಸಿದ್ದು, ವಿಂಡ್ ಪವರ್ ಕಂಪನಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೈಟೆನ್ಷನ್ ವೈಯರ್ ಇದ್ದರು ಯಾವುದೇ ಸೂಚನೆ ನೀಡಿಲ್ಲ. ಮರಕ್ಕೆ ತಾಗದಂತೆ ನೋಡಿಕೊಂಡಿಲ್ಲ. ಆದ ಕಾರಣ ಮೃತ ವ್ಯಕ್ತಿಯ ಕುಟುಂಬಕ್ಕೆ ವಿಂಡ್ ಪವರ್ ಕಂಪನಿ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಹಾಸನ: ಮನೆಯಲ್ಲೇ ಅತಿಥಿ ಉಪನ್ಯಾಸಕಿ ಆತ್ಮಹತ್ಯೆ - lecturer suicide