ಹುಬ್ಬಳ್ಳಿ: "ವಕ್ಫ್ ರಾಷ್ಟ್ರೀಕರಣ ಮಾಡುವ ಪ್ರಶ್ನೆಯೇ ಇಲ್ಲ. ವಕ್ಫ್ ಅಪರಿಮಿತ ಅಧಿಕಾರವನ್ನು ರದ್ದುಗೊಳಿಸಲು ಕಾಂಗ್ರೆಸ್ ಸರ್ಕಾರ ಸಹಕರಿಸಬೇಕು" ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮನವಿ ಮಾಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ವಕ್ಫ್ ವತಿಯಿಂದ ರೈತರಿಗೆ ಸಿಗುವ ಸಾಲ ಎಲ್ಲ ಬಂದ್ ಆಗಿಬಿಡುತ್ತದೆ. ಇದು ಬಹಳ ಡೇಂಜರಸ್. ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದರೆ ಇದನ್ನೆಲ್ಲ ಸರಿಪಡಿಸಬೇಕು. ವಿಶೇಷವಾಗಿ ಹಾವೇರಿಯಲ್ಲಿ ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು" ಎಂದು ಆಗ್ರಹಿಸಿದರು.
"ವಕ್ಫ್ ಆಸ್ತಿ ಹೆಸರಲ್ಲಿ ಕಬಳಿಕೆ ಹುನ್ನಾರ ನಡೆದಿದೆ. ಇದರ ವಿರುದ್ಧ ಸೋಮವಾರ ಬಿಜೆಪಿಯಿಂದ ಹೋರಾಟ ಮಾಡುತ್ತೇವೆ. ವಕ್ಫ್ ಆಸ್ತಿ ನಮೂದು ಮಾಡಿರೋ ಜಾಗದಲ್ಲಿ ಮನೆಗಳಿವೆ. ಅವುಗಳನ್ನು ವಿಭಾಗ ಮಾಡಿಕೊಳ್ಳುವುದು ಕಷ್ಟ. ವಕ್ಫ್ ಅಂತ ನಮೂದಾದ ಆಸ್ತಿ ಮೇಲೆ ಸಾಲ ಪಡೆಯೋದು ಕಷ್ಟ. ಅದನ್ನು ಮಾರಾಟ ಮಾಡೋಕು ಆಗಲ್ಲ. ಇಷ್ಟೆಲ್ಲ ಗೊಂದಲಗಳಿದ್ದರೂ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ನೋಟಿಸ್ ಮತ್ತು ಕಲಂ 11ರಲ್ಲಿ ನಮೂದು ಆಗಿರೋದು ಗಂಭೀರ ವಿಷಯ. ಜನ ತಮ್ಮ ಪಹಣಿ ಪರಿಶೀಲಿಸಿಕೊಳ್ಳಲಿ. ವಕ್ಫ್ ಕಾನೂನು ಹೆಸರಲ್ಲಿ ದುರ್ಬಳಕೆ ನಡೆದಿದೆ" ಎಂದು ದೂರಿದರು.
ದೇಶದ ಪ್ರಧಾನಿ ಮೋದಿ ಅವರು ಒಬ್ಬ ರಾಜಕೀಯ ಪುಡಾರಿಯ ರೀತಿಯಲ್ಲಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂಬ ಸಿಎಂ ಸಿದ್ದರಾಮಯ್ಯನವರ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿ, "ಸಿದ್ದರಾಮಯ್ಯನವರೆ ನಿಮ್ಮ ನಾಲಿಗೆಯನ್ನು ಹದ್ದುಬಸ್ತಿನಲ್ಲಿಡಿ. ಪ್ರಧಾನಿ ಅವರಿಗೆ ಪುಡಾರಿ ಅಂತ ಕರೆದಿರುವುದು ನಿಮ್ಮ ಸಂಸ್ಕೃತಿಯನ್ನು ತೋರಿಸುತ್ತದೆ. ಇದ್ದ ಸಂಗತಿಯನ್ನು ಪ್ರಧಾನಿಯವರು ವಿಶ್ಲೇಷಣೆ ಮಾಡಿದ್ದಾರೆ. ಇದಕ್ಕೆ ಸೂಕ್ತ ರೀತಿ ಸಮರ್ಥನೆ ಕೊಡಿ. ಅದನ್ನು ಬಿಟ್ಟು ಪುಡಾರಿ ಅಂತ ಮಾತನಾಡೋದು ಸರಿಯಲ್ಲ" ಎಂದರು.
ಮತ್ತೊಂದೆಡೆ, ಇದೇ ವಿಚಾರವಾಗಿ ಸಂಸದ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯಲ್ಲಿ ಮಾತನಾಡಿ, "ದೇಶದ ಪ್ರಧಾನಿ ಅವರನ್ನು ಹೇಗೆ ಸಂಬೋಧಿಸಬೇಕೆಂಬುದು ಸಿಎಂಗೆ ಗೊತ್ತಿಲ್ಲ ಎಂದರೆ ದುರ್ದೈವ. ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಧಾನಮಂತ್ರಿ ಅವರಿಗೆ ಯಾವ ರೀತಿ ಸಂಬೋಧಿಸಬೇಕು ಅನ್ನೋದು ಗೊತ್ತಿಲ್ಲವೆ?. ನಾವು ಮುಖ್ಯಮಂತ್ರಿಗಳಿಗೆ ಯಾವ ರೀತಿ ಗೌರವ ಕೊಡುತ್ತೇವೆ. ಅದೇ ರೀತಿ ಅವರು ಪ್ರಧಾನಮಂತ್ರಿಗೆ ಗೌರವ ಕೊಡಬೇಕು. ಇಷ್ಟು ಕೂಡ ಸೌಜನ್ಯ ಇಲ್ಲದೆ ಹೋದರೆ ಹೇಗೆ?. ಸಿಎಂ ನಡೆ ಪ್ರಜಾಪ್ರಭುತ್ವಕ್ಕೆ ಹಾಗೂ ಒಕ್ಕೂಟ ವ್ಯವಸ್ಥೆಗೆ ಶೋಭೆ ತರಲ್ಲ" ಎಂದು ಹೇಳಿದರು.
ಇದನ್ನೂ ಓದಿ: ರೈತರಿಗೆ ನೀಡಿದ ನೋಟಿಸ್ ತಕ್ಷಣ ವಾಪಸ್ ಪಡೆಯಿರಿ, ಪಹಣಿ ತಿದ್ದುಪಡಿ ರದ್ದು ಮಾಡಿ: ಸಿಎಂ ಖಡಕ್ ಸೂಚನೆ