ಕಾರವಾರ: ನಾನು ಮಾಡಿದಷ್ಟು ಅಭಿವೃದ್ಧಿ ಕಾರ್ಯಗಳನ್ನು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಮ್ಮ ಕನಸಿನಲ್ಲೂ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಟೀಕಿಸಿದರು.
ಮುಂಡಗೋಡದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 70 ವರ್ಷದ ಆಡಳಿತದಲ್ಲಿ ವಿವಿಧ ಇಲಾಖೆಗಳ ಸಚಿವರಾಗಿದ್ದ ದೇಶಪಾಂಡೆ ಏನು ಮಾಡಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಿಶ್ವೇಶ್ವರ ಹೆಗಡೆ ಕಾಗೇರಿ ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ಮೊದಲು ಹೇಳಲಿ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅವರು ಶಿರಸಿ ಕ್ಷೇತ್ರಕ್ಕೆ ಸೀಮಿತರಾಗಿದ್ದರು. ಹಳಿಯಾಳ, ಕಾರವಾರ ಸೇರಿದಂತೆ ಇತರೆ ತಾಲೂಕಿಗೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ನಾನು ಜಿಲ್ಲಾ ಉಸ್ತುವಾರಿ ಸಚಿವನಾದ ಬಳಿಕ ಪ್ರವಾಸೋದ್ಯಮ ಸೇರಿದಂತೆ ಏನೆಲ್ಲಾ ಕೆಲಸಗಳನ್ನು ಮಾಡಿದ್ದೇನೆ ಎಂಬ ಬಗ್ಗೆ ಪಟ್ಟಿ ಕೊಡುತ್ತೇನೆ. ಕಾಗೇರಿ ಏನು ಮಾಡಿದ್ದಾರೆ ಎಂದು ತಿಳಿಸಲಿ. ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ ಎಂಬ ಕಾರಣಕ್ಕೆ ಬಾಯಿಗೆ ಬಂದಂತೆ ಅವರು ಮಾತನಾಡಬಾರದು. ನಮ್ಮ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಅವರ ಪತಿಯ ಬಗ್ಗೆ ಕಾಗೇರಿ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಕೀಳುಮಟ್ಟದ ಪ್ರಚಾರಕ್ಕಿಳಿದಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಕುಟುಂಬದ ಮೇಲೆ ಆರೋಪಗಳನ್ನು ಮಾಡುವುದು ಒಳ್ಳೆಯದಲ್ಲ ಎಂದರು.
ಕಾಗೇರಿ ಮೀನು ತಿಂದರೆ ಮೀನುಗಾರರು ಮತ ಹಾಕಬಹುದು: ಇನ್ನು, ಕಾಗೇರಿ ಮತಕ್ಕಾಗಿ ಮೀನು ಹಿಡಿದಿದ್ದಾರೆ. ಮೀನನ್ನು ಕೈಯಲ್ಲಿ ಹಿಡಿದರೆ ಪ್ರಯೋಜನವಿಲ್ಲ. ಮೀನು ಹಿಡಿಯುವ ಬದಲು ಮೀನು ತಿಂದರೆ ಮೀನುಗಾರರು ಮತ ಹಾಕಬಹುದು ಎಂದು ಇದೇ ವೇಳೆ ವ್ಯಂಗ್ಯವಾಡಿದರು.
ಕಾಂಗ್ರೆಸ್ ನಾಯಕರ ಮೇಲೆ ಜಿಲ್ಲೆಯಲ್ಲಿ ಐಟಿ ದಾಳಿಯಾಗಿದೆ. ಈ ಬಗ್ಗೆ ತಿಳಿದು ಪ್ರತಿಕ್ರಿಯೆ ನೀಡುತ್ತೇನೆ ಎಂದರು.
ಇದನ್ನೂ ಓದಿ: ಮಹಾನ್ ಕ್ರಾಂತಿಕಾರಿ ಆವಿಷ್ಕಾರ: ಬ್ಲೂಟೂತ್ನಿಂದ 600 ಕಿಮೀ ದೂರದ ಉಪಗ್ರಹದೊಂದಿಗೆ ಸಂಪರ್ಕ - BLUETOOTH CONNECTION