ಬೆಂಗಳೂರು: ಚಿತ್ರದುರ್ಗ ಮುರುಘಾ ಮಠ ಮತ್ತು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ನಿರ್ವಹಣೆಗಾಗಿ ಮುಂದಿನ ಮೂರು ದಿನಗಳಲ್ಲಿ ಸಮಿತಿ ರಚನೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯಿದೆಯಡಿ ಮುರುಘಾ ಶರಣರ ಅಧಿಕಾರ ಚಲಾವಣೆಗೆ ವಿಧಿಸಿದ್ದ ಚಿತ್ರದುರ್ಗದ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದ್ದ ಹೈಕೋರ್ಟ್ ಕ್ರಮ ಪ್ರಶ್ನಿಸಿ ಮಾಜಿ ಸಚಿವ ಹೆಚ್.ಏಕಾಂತಯ್ಯ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ನಡುವೆ ಮುರುಘಾ ಶರಣರಿಗೆ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ರಾಜಪ್ಪ ಡಿ ಎಂಬವರು ವಿಶೇಷ ಮೇಲ್ಮನವಿ ಸಲ್ಲಿಸಿದ್ದರು.
ಈ ಎರಡೂ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ.ವಿಕ್ರಂ ನಾಥ್ ಹಾಗು ನ್ಯಾ.ಪ್ರಶಾಂತ್ ಕುಮಾರ್ ಮಿಶ್ರ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಅರ್ಜಿಗಳು ಇತ್ಯರ್ಥವಾಗುವವರೆಗೂ ಮಧ್ಯಂತರ ಅದೇಶ ಮುಂದುವರೆಯಲಿದೆ ಎಂದು ತಿಳಿಸಿದೆ. ಮಠ ಮತ್ತು ಎಸ್‌ಜೆಎಂ ಶಿಕ್ಷಣ ಸಂಸ್ಥೆಗಳ ನಿರ್ವಹಣೆಯಲ್ಲಿ ಮುರುಘಾ ಶರಣರು ಯಾವುದೇ ರೀತಿಯಲ್ಲಿಯೂ ಮಧ್ಯಪ್ರವೇಶ ಮಾಡುವಂತಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ: ಪೋಕ್ಸೋ ಮತ್ತು ಜಾತಿ ನಿಂದನೆ ಆರೋಪದಲ್ಲಿ ಜೈಲು ಸೇರಿದ್ದ ಶಿವಮೂರ್ತಿ ಮುರುಘಾ ಶರಣರು, ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆಯಡಿ ಮಠದ ಆಡಳಿತ ನಿರ್ವಹಣೆ ಮಾಡುವುದಕ್ಕೆ ನಿರ್ಬಂಧ ವಿಧಿಸಿ ಚಿತ್ರದುರ್ಗ ಸೆಷನ್ಸ್ ಕೋರ್ಟ್ ಆದೇಶಿಸಿತ್ತು. ಈ ನಡುವೆ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿದ್ದನ್ನು ಪ್ರಶ್ನಿಸಿ ಎಸ್‌ಜೆಎಂ ವಿದ್ಯಾಪೀಠದ ಅಧ್ಯಕ್ಷ, ಮಠದ ತಾತ್ಕಾಲಿಕ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಮತ್ತು ಭಕ್ತರು ಹೈಕೋರ್ಟ್‌ಗೆ ಅರ್ಜಿಗಳನ್ನು ಸಲ್ಲಿಸಿದ್ದರು.
ಈ ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ನ್ಯಾ.ಕೃಷ್ಣ ದೀಕ್ಷಿತ್ ಅವರಿದ್ದ ನ್ಯಾಯಪೀಠ, ಮಠ ಮಾನ್ಯಗಳಲ್ಲಿ ಸರ್ಕಾರದ ಹಸ್ತಕ್ಷೇಪ ಸಲ್ಲದು ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು. ಅಲ್ಲದೆ, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಕಾಯ್ದೆ 1997ಕ್ಕೆ ರಾಜ್ಯ ಸರ್ಕಾರ 2011ರಲ್ಲೇ ತಿದ್ದುಪಡಿ ತಂದಿದೆ. ಈ ತಿದ್ದುಪಡಿಯನುಸಾರ ಯಾವುದೇ ಮಠ, ಮಠಕ್ಕೆ ಹೊಂದಿಕೊಂಡ ದೇಗುಲಗಳನ್ನು ಶಾಸನದಿಂದ ಹೊರಗಿಡಲಾಗಿದೆ. ಈ ಕುರಿತ ತಿದ್ದುಪಡಿಯನ್ನು ಸುಪ್ರೀಂ ಕೋರ್ಟಿಗೂ ಸಲ್ಲಿಸಲಾಗಿದೆ ಎಂಬ ಅಂಶವನ್ನು ತೀರ್ಪಿನಲ್ಲಿ ಉಲ್ಲೇಖಿಸಿದ್ದ ನ್ಯಾಯಪೀಠ, ಸರ್ಕಾರವು ಮಠದ ವಿಷಯಗಳಲ್ಲಿ ಮಧ್ಯಪ್ರವೇಶಿಸಲು ಬರುವುದಿಲ್ಲ. ಶಾಸನಯುಕ್ತ ಅಧಿಕಾರ ಇದ್ದರೆ ಮಾತ್ರವೇ ಮಧ್ಯಪ್ರವೇಶ ಮಾಡಬಹುದು. ಹೀಗಾಗಿ, ಈ ಪ್ರಕರಣದಲ್ಲಿ ಆಡಳಿತಾಧಿಕಾರಿ ನೇಮಕಾತಿಯನ್ನು ಅಸಿಂಧುಗೊಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಕನ್ನಡದಲ್ಲೂ ಸುಪ್ರೀಂ ಕೋರ್ಟ್‌ನ ಸಾವಿರಾರು ತೀರ್ಪುಗಳು ಲಭ್ಯ: ಆಸಕ್ತರು ಹೀಗೆ ಓದಿ