ದಾವಣಗೆರೆ : ದಾವಣಗೆರೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗ್ತಿದೆ. ಮಕ್ಕಳು, ವೃದ್ಧರು ಎನ್ನದೇ ಸಿಕ್ಕ ಸಿಕ್ಕವರ ಮೇಲೆ ಬೀದಿ ನಾಯಿಗಳು ದಾಳಿ ಮಾಡ್ತಿವೆ. ಬೀದಿ ನಾಯಿಗಳ ದಾಳಿಗೆ ದಾವಣಗೆರೆ ಜನ ಮನೆಯಿಂದ ಹೊರಬರಲು ಭಯ ಪಡುವಂತಾಗಿದೆ.
ಅಚ್ಚರಿ ಸಂಗತಿ ಎಂದರೆ ಎರಡೇ ಎರಡು ತಿಂಗಳಲ್ಲಿ ಬೀದಿ ನಾಯಿಗಳು ಬರೋಬ್ಬರಿ '281' ಜನರ ಮೇಲೆ ದಾಳಿ ನಡೆಸಿದ್ದು, ದಾಳಿಗೆ ಒಳಗಾದವರು ದಾವಣಗೆರೆ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
2023 ಹಾಗೂ 2024 ರ ಅಂಕಿ - ಅಂಶಗಳನ್ನು ನೋಡಿದರೆ ಹುಬ್ಬೇರಿಸುವಂತಿದೆ. ಬೀದಿ ನಾಯಿಗಳ ಹಾವಳಿಗೆ ದಾವಣಗೆರೆ ನಗರದ ಜನತೆ ಹಾಗೂ ಜಿಲ್ಲೆಯ ವಿವಿಧ ಭಾಗಗಳಲ್ಲೂ ಜನ ತತ್ತರಿಸಿ ಹೋಗಿದ್ದಾರೆ. ಅಲ್ಲದೇ ಬೀದಿ ನಾಯಿಗಳ ಉಪಟಳಕ್ಕೆ ಬ್ರೇಕ್ ಹಾಕುವಂತೆ ಪಾಲಿಕೆಗೆ ಒತ್ತಾಯಿಸಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ ನಾಯಿ ಕಡಿತಕ್ಕೊಳಗಾದವರ ಸಂಖ್ಯೆ ಕಳೆದ ವರ್ಷಕ್ಕಿಂತ ಈ ವರ್ಷ ಕೊಂಚ ಹೆಚ್ಚಿದೆ. ನಾಯಿ ಕಡಿತದ ಪ್ರಕರಣಗಳು ದಿನಕ್ಕೆ 2-3 ಪ್ರಕರಣಗಳು ಜಿಲ್ಲಾಸ್ಪತ್ರೆಯಲ್ಲಿ ಕಾಣ ಸಿಗುತ್ತಿವೆ. ಪ್ರಸ್ತುತ ವರ್ಷ 2024ರಲ್ಲಿ ಜನವರಿ - ಅಕ್ಟೋಬರ್ ತಿಂಗಳ ಕೊನೆಯತನಕ ಒಟ್ಟು 735 ಜನರು ನಾಯಿಯಿಂದ ಕಚ್ಚಿಸಿಕೊಂಡು ಚಿಗಟೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಅಲ್ಲದೇ ಕಳೆದ ವರ್ಷ 2023ರಲ್ಲಿ ಜನವರಿ - ಡಿಸೆಂಬರ್ ತಿಂಗಳವರೆಗೆ ಒಟ್ಟು 434 ಜನರು ನಾಯಿ ಕಡಿತಕ್ಕೊಳಗಾಗಿ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಚಿಗಟೇರಿ ಆಸ್ಪತ್ರೆ ಸಿಬ್ಬಂದಿ ನೀಡಿರುವ ಅಂಕಿ - ಅಂಶಗಳ ಲೆಕ್ಕಾಚಾರ ಹೇಳಿವೆ.
ಜಿಲ್ಲಾಸ್ಪತ್ರೆ ನೀಡಿರುವ ಮಾಹಿತಿ ಹೀಗಿದೆ: 2024 ನೇ ಸಾಲಿನಲ್ಲಿ ನಾಯಿ ಕಡಿತವನ್ನು ನೋಡುವುದಾದರೆ ಜನವರಿ- 52, ಫೆಬ್ರವರಿ-45, ಮಾರ್ಚ್-39, ಏಪ್ರಿಲ್-68, ಮೇ-48, ಜೂನ್- 66, ಜುಲೈ-59, ಆಗಸ್ಟ್-77, ಸೆಪ್ಟೆಂಬರ್-166, ಅಕ್ಟೋಬರ್ - 115, (ತಿಂಗಳ ಕೊನೆಯವರೆಗೂ) ತಿಂಗಳ ಪೈಕಿ ಒಟ್ಟು 735 ಜನ ಚಿಗಟೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇನ್ನು 2023ರ ವರ್ಷದ ಅಂಕಿ-ಅಂಶಗಳನ್ನು ತಿಂಗಳ ಪೈಕಿ ನೋಡುವುದಾದರೆ, ಜನವರಿ- 29, ಫೆಬ್ರವರಿ-26, ಮಾರ್ಚ್-45, ಏಪ್ರಿಲ್-37, ಮೇ-43, ಜೂನ್-27, ಜುಲೈ-20, ಆಗಸ್ಟ್-18, ಸೆಪ್ಟೆಂಬರ್-38, ಅಕ್ಟೋಬರ್ - 44, ನವೆಂಬರ್-59, ಡಿಸೆಂಬರ್-48 ಒಟ್ಟು 434 ಜನ ನಾಯಿ ದಾಳಿಗೆ ಒಳಗಾಗಿ ಚಿಕಿತ್ಸೆ ಪಡೆದಿದ್ದಾರೆ ಎಂದು ಚಿಗಟೇರಿ ಜಿಲ್ಲಾಸ್ಪತ್ರೆ ಅಧೀಕ್ಷಕ ಡಿ. ಎಸ್ ಡಾ. ನಾಗೇಂದ್ರಪ್ಪ ಮಾಹಿತಿ ನೀಡಿದ್ದಾರೆ.
ಕಳೆದ ಮೂರು ತಿಂಗಳಲ್ಲೇ ಹೆಚ್ಚು ಪ್ರಕರಣಗಳು : 2023ನೇ ವರ್ಷಕ್ಕೆ ಹೋಲಿಸಿದರೆ 2024ರ ಆಗಸ್ಟ್ನಲ್ಲಿ ಹೆಚ್ಚು ಪ್ರಕರಣ ಇವೆ. ಆಗಸ್ಟ್ ತಿಂಗಳಲ್ಲಿ- 77, ಸೆಪ್ಟೆಂಬರ್ ತಿಂಗಳಲ್ಲಿ ಅತಿ ಹೆಚ್ಚು ಅಂದರೆ ಒಟ್ಟು 166 ಹಾಗೂ ಅಕ್ಟೋಬರ್ ತಿಂಗಳಲ್ಲಿ 115 ಜನರಿಗೆ ನಾಯಿಗಳು ಕಚ್ಚಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಅಂಕಿ - ಅಂಶಗಳ ಪ್ರಕಾರ, ಕಳೆದ ಕೆಲವು ತಿಂಗಳಿನಿಂದ ನಾಯಿ ಕಡಿತದ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ ಎಂಬುದನ್ನ ಜಿಲ್ಲಾಡಳಿತ ಗಮನಿಸಬೇಕಾಗಿದೆ. ಅಲ್ಲದೆ 2023 ಮಾರ್ಚ್ 14ರಂದು ಜಗಳೂರು ತಾಲೂಕಿನ ಹನುಮಾಪುರದ ಹಳ್ಳಪ್ಪ ರಂಗಪ್ಪ (33) ಎಂಬ ಯುವಕ ನಾಯಿ ಕಚ್ಚಿ ರೇಬಿಸ್‌ನಿಂದ ಮೃತಪಟ್ಟಿದ್ದ. ಅಲ್ಲದೇ ಕಳೆದ ಅಕ್ಟೋಬರ್‌ನಲ್ಲಿ ನಾಯಿ ಕಚ್ಚಿ ದಾವಣಗೆರೆ ಆಜಾದ್ ನಗರದಲ್ಲೂ ಒಂದು ಮಗು ಸಾವನ್ನಪ್ಪಿದೆ. ಆದರೆ ಅದು ರೇಬಿಸ್‌ನಿಂದ ಎಂಬುದು ಇನ್ನೂ ದೃಢಪಟ್ಟಿಲ್ಲ ಎನ್ನುತ್ತಾರೆ ಆರೋಗ್ಯ ಇಲಾಖೆ ಸಿಬ್ಬಂದಿ.
ನಾಯಿ ಕಡಿತಕ್ಕಿದೆ ಪರಿಹಾರ, ಪ್ರಚಾರದ ಕೊರತೆ : ನಾಯಿ ಕಡಿತ ಆಗಿದ್ರೆ ಪಾಲಿಕೆಯಿಂದ ಪರಿಹಾರ ಇದೆ. ಅದಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ. ನಾಯಿ ದಾಳಿಯಿಂದ ಗಾಯಗಳಾಗಿದ್ದರೆ ಅಂತಹವರಿಗೆ 5 ಸಾವಿರ, ಅದೇ ನಾಯಿ ದಾಳಿಯಿಂದ ಅಸುನೀಗಿದವರಿಗೆ 5 ಲಕ್ಷ ರೂ. ಪರಿಹಾರ ನೀಡುವಂತೆ ಸರ್ಕಾರ ಆದೇಶಿಸಿದೆ. ಇಲ್ಲಿ ತನಕ ಪಾಲಿಕೆ ವ್ಯಾಪ್ತಿಯಲ್ಲಿ ಈ ವರ್ಷದಲ್ಲಿ 735 ಜನರ ಪೈಕಿ ಕೇವಲ 05 ಜನ ಪರಿಹಾರ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಾಯಿ ಕಡಿತಕ್ಕೆ ಪರಿಹಾರ ಸಿಗುತ್ತೆ ಎಂಬ ಮಾಹಿತಿ ಜನಸಾಮಾನ್ಯರಿಗಿಲ್ಲ, ಪಾಲಿಕೆಯ ಸಿಬ್ಬಂದಿ ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡ್ಬೇಕಾಗಿದೆ ಎಂದಿದ್ದಾರೆ.
ಚಿಗಟೇರಿ ಜಿಲ್ಲಾಸ್ಪತ್ರೆಯ ಅಧೀಕ್ಷಕ ಡಿ. ಎಸ್, ಡಾ ನಾಗೇಂದ್ರಪ್ಪ ಹೇಳಿದ್ದೇನು?: "ಎರಡು ತಿಂಗಳಲ್ಲಿ ಒಟ್ಟು 281 ಜನ ನಾಯಿ ಕಡಿತದಿಂದ ಚಿಕಿತ್ಸೆ ಪಡೆದಿದ್ದಾರೆ. ಅಲ್ಲದೆ 2023ರಲ್ಲಿ 434, 2024ರಲ್ಲಿ 735 ಜನ ನಮ್ಮ ಚಿಗಟೇರಿ ಆಸ್ಪತ್ರೆಯ ಔಟ್ ಪೆಷೆಂಟ್ ವಿಭಾಗದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಚಿಕಿತ್ಸೆ ಪಡೆದು ಮನೆಗೆ ಸುರಕ್ಷಿತವಾಗಿ ತೆರಳಿದ್ದಾರೆ. ಅಲ್ಲದೇ ಜಿಲ್ಲೆಯಲ್ಲಿ ಇಬ್ಬರು ನಾಯಿ ಕಡಿತಕ್ಕೆ ಬಲಿಯಾಗಿದ್ದಾರೆ'' ಎಂದು ಜಿಲ್ಲಾಸ್ಪತ್ರೆಯ ಅಧೀಕ್ಷಕ ಡಿ. ಎಸ್, ಡಾ ನಾಗೇಂದ್ರಪ್ಪ ಮಾಹಿತಿ ನೀಡಿದರು.
ಪಾಲಿಕೆ ಆಯುಕ್ತೆ ರೇಣುಕಾ ಹೇಳಿದ್ದೇನು? : "2016 ರಲ್ಲಿ ಸರ್ವೇ ಮಾಡಿದಾಗ 16 ಸಾವಿರ ನಾಯಿಗಳಿವೆ ಎಂದು ಕಂಡುಬಂದಿದೆ. 2016 ರ ಬಳಿಕ ಮತ್ತೇ ಸರ್ವೇ ಮಾಡಿ ಎಂದು ಪಶುಪಾಲನೆ ಇಲಾಖೆಗೆ ಪತ್ರ ಬರೆದಿದ್ದೆವು. ಅವರು ಸರ್ವೇ ಮಾಡ್ತೇವೆ ಎಂದಿದ್ದಾರೆ. ನಗರದಲ್ಲಿ ಬೀದಿ ನಾಯಿಗಳು ಹೆಚ್ಚಾಗುತ್ತಿರುವುದರಿಂದ 7,500 ನಾಯಿಗಳಿಗೆ ಎಬಿಸಿ ಮಾಡಿಸಿದರೂ ಉತ್ಪತ್ತಿ ಕಡಿಮೆ ಆಗ್ತಿಲ್ಲ, ಅದಕ್ಕೆ ಕೌನ್ಸಿಲ್ ಅಲ್ಲಿ ಚರ್ಚೆ ಮಾಡಿ ಮತ್ತೆ ಅದರಲ್ಲಿ ಆರು ಸಾವಿರ ನಾಯಿಗಳಿಗೆ ಎಬಿಸಿ ಮಾಡಲು ತೀರ್ಮಾನ ಮಾಡಿದ್ದೇವೆ. ಟೆಂಡರ್ ಮಾಡಿದ್ದು, ವರ್ಕ್ ಆರ್ಡರ್ ಜಾರಿ ಮಾಡಿದ್ದೇವೆ. ಕೆಲಸ ಆರಂಭ ಆಗಬೇಕಾಗಿದೆ. ರೋಗ ಬಂದು ಕಚ್ಚುತ್ತಿದ್ದ ನಾಯಿಗಳನ್ನು ನಾಶಪಡಿಸಲು ನಮಗೆ ಅವಕಾಶ ಇದೆ, ಕ್ರಮ ತೆಗೆದುಕೊಳ್ಳುತ್ತೇವೆ'' ಎಂದು ಹೇಳಿದರು.
ಇದನ್ನೂ ಓದಿ : ರಾಜಧಾನಿಯಲ್ಲಿ ಮಿತಿ ಮೀರಿದ ಬೀದಿ ನಾಯಿಗಳ ಹಾವಳಿ: 8 ತಿಂಗಳಲ್ಲಿ 11 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲು - Street dog bite cases