ಹುಬ್ಬಳ್ಳಿ: ಬ್ಯಾಂಕ್ ಸಿಬ್ಬಂದಿ ಸೋಗಿನಲ್ಲಿ ಅಪರಿಚಿತನೊಬ್ಬ ವಾಟ್ಸ್ಆ್ಯಪ್‌ಗೆ ಅನಧಿಕೃತ ಎಪಿಕೆ ಫೈಲ್ ಕಳುಹಿಸಿ, ವ್ಯಕ್ತಿಯೊಬ್ಬರಿಂದ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಮಾಹಿತಿ ಖಾತೆಗೆ ಪಡೆದು ಸುಮಾರು 25.74 ಲಕ್ಷ ರೂಪಾಯಿ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ದೂರಿನ ವಿವರ: ಹುಬ್ಬಳ್ಳಿಯ ಕೇಶ್ವಾಪುರದ ನಿವಾಸಿಯೊಬ್ಬರಿಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ, ತಾನು ಬ್ಯಾಂಕ್ ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದಾನೆ. ನಂತರ ಎಪಿಕೆ ಫೈಲ್ ಇನ್‌ಸ್ಟಾಲ್ ಮಾಡಿಸಿ, ಜನ್ಮ ದಿನಾಂಕ, ಮೊಬೈಲ್ ನಂಬರ್ ಹಾಗೂ ಎಟಿಎಂ ಪಿನ್ ನಂಬರ್ ಹಾಕಿ ಅಪಡೇಟ್ ಮಾಡಲು ತಿಳಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆದರೆ, ವಂಚನೆಗೊಳಗಾದ ದೂರುದಾರ ಮಾಹಿತಿ ತುಂಬಲು ನಿರಾಕರಿಸಿದ್ದಾರೆ. ಈ ವೇಳೆ ಅವರಿಗೆ ತಿಳಿಯದಂತೆ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿಕೊಂಡು ವಂಚಿಸಲಾಗಿದೆ. ಹಣ ಕಳೆದುಕೊಂಡವರು ನೀಡಿದ ದೂರಿನ ಅನ್ವಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತ್ಯೇಕ ಪ್ರಕರಣ, ಮಹಿಳೆಗೆ 2 ಲಕ್ಷ ರೂ. ವಂಚನೆ: ಮತ್ತೊಂದೆಡೆ, ಬ್ಯಾಂಕ್ ಸಿಬ್ಬಂದಿ ಸೋಗಿನಲ್ಲಿ ಕರೆ ಮಾಡಿದ ಸೈಬರ್ ಖದೀಮರು, ನಿಮ್ಮ ವಹಿವಾಟು ಖಚಿತಪಡಿಸಿ ಎಂದು ಹೇಳಿ ಮಹಿಳೆಯೊಬ್ಬರ ಖಾತೆಯಿಂದ ಕ್ಷಣ ಮಾತ್ರದಲ್ಲೇ 2 ಲಕ್ಷ ರೂ. ವರ್ಗಾಯಿಸಿಕೊಂಡ ಪ್ರಕರಣ ಬೆಂಗಳೂರಿನಲ್ಲಿ ವರದಿಯಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ವೊಂದರ ಪ್ರತಿನಿಧಿಗಳು ಎಂದು ಕರೆ ಮಾಡಿದ್ದ ವಂಚಕರು, 58 ವರ್ಷದ ಮಹಿಳೆಗೆ ವಂಚಿಸಿದ್ದಾರೆ. ಈ ಬಗ್ಗೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪಿಗ್ ಬುಚರಿಂಗ್ ಹಗರಣ: ಇದು ಸೈಬರ್ ವಂಚಕರ ಹೊಸ ಟ್ರಿಕ್; ನಿರುದ್ಯೋಗಿಗಳು, ಗೃಹಿಣಿಯರು, ವಿದ್ಯಾರ್ಥಿಗಳೇ ಟಾರ್ಗೆಟ್
ಮಹಿಳೆಗೆ ಜನವರಿ 20ರಂದು ಬ್ಯಾಂಕ್ ಪ್ರತಿನಿಧಿಯ ಸೋಗಿನಲ್ಲಿ ಕರೆ ಮಾಡಿರುವ ವಂಚಕ, ''ನಿಮ್ಮ ಖಾತೆಯಿಂದ ಬೇರೆ ಖಾತೆಗೆ 2 ಲಕ್ಷ ರೂ. ಹಣ ವರ್ಗಾವಣೆಯಾಗುತ್ತಿದೆ. ಈ ಹಣವನ್ನು ನೀವೇ ವರ್ಗಾಯಿಸಿದ್ದರೆ ಮೂರನ್ನು ಒತ್ತಿ, ಇಲ್ಲವಾಗಿದ್ದಲ್ಲಿ ಒಂದನ್ನು ಒತ್ತಿ" ಎಂದಿದ್ದಾನೆ. ಗಾಬರಿಗೊಂಡ ಮಹಿಳೆ ಒಂದನ್ನು ಒತ್ತಿದ್ದಾರೆ. ಬಳಿಕ ''ನಿಮ್ಮ ಬ್ಯಾಂಕ್ ಮ್ಯಾನೇಜರ್‌ನ ಸಂಪರ್ಕಿಸಿ'' ಎಂದು ಕರೆ ಕಟ್ ಮಾಡಿದ್ದಾರೆ. ತದನಂತರ, ಅನುಮಾನದ ಮೇಲೆ ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ ಖಾತೆಯಲ್ಲಿನ 2 ಲಕ್ಷ ರೂ.ಗಳನ್ನು ವಂಚಕರು ವರ್ಗಾವಣೆ ಮಾಡಿಕೊಂಡಿರುವುದು ಗೊತ್ತಾಗಿದೆ ಎಂದು ಮಹಿಳೆಯು ದೂರಿನಲ್ಲಿ ವಿವರಿಸಿದ್ದಾರೆ.
ಇದನ್ನೂ ಓದಿ: ಮಹಿಳೆಗೆ ಕರೆ ಮಾಡಿ 'ಒಂದನ್ನು ಒತ್ತಿ' ಎಂದ ಸೈಬರ್ ಖದೀಮರು: ಕ್ಷಣಮಾತ್ರದಲ್ಲೇ ₹2 ಲಕ್ಷ ವಂಚನೆ