ಬೆಳಗಾವಿ: ಮತ್ತೊಂದು ಅವಧಿಗೆ ಟಿಕೆಟ್ ನೀಡುವಂತೆ ದೆಹಲಿಗೆ ತೆರಳಿದ್ದ ಸಂಸದೆ ಮಂಗಳಾ ಅಂಗಡಿ ಖಾಲಿ ಕೈಯಲ್ಲಿ ವಾಪಸ್ ಆಗಿದ್ದಾರೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಟಿಕೆಟ್ ಅಂತಿಮವಾಗಿದೆ ಎಂಬ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.
ಹೌದು, ಬೆಳಗಾವಿ ಬಿಜೆಪಿ ಟಿಕೆಟ್ ಬಹುತೇಕ ಜಗದೀಶ್ ಶೆಟ್ಟರ್ ಅವರಿಗೆ ಫಿಕ್ಸ್ ಆಗಿದ್ದು, ಅಧಿಕೃತ ಆದೇಶ ಮಾತ್ರ ಬಾಕಿಯಿದೆ. ಈ ಬಗ್ಗೆ ಬೆಳಗಾವಿ ಗೃಹ ಕಚೇರಿಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸಂಸದೆ ಮಂಗಳಾ ಅಂಗಡಿ, ಎರಡನೇ ಪಟ್ಟಿಯಲ್ಲಿ ನಮ್ಮ ಕುಟುಂಬದ ಹೆಸರು ಬರಲಿಲ್ಲ. ಹೀಗಾಗಿ ನಾವು ನಾಯಕರಿಗೆ ಭೇಟಿಯಾಗಲು ಹೋಗಿದ್ದೆವು. ಆದರೆ ಅಷ್ಟರೊಳಗೆ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಕೊಡುವ ಚರ್ಚೆ ನಡೆದಿತ್ತು. ಹಾಗಾಗಿ, ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಆಗಲಿಲ್ಲ. ಅಲ್ಲದೇ ಪಟ್ಟಿಯಲ್ಲಿ ಈಗಲೂ ನನ್ನ ಹಾಗೂ ನನ್ನ ಮಕ್ಕಳ ಹೆಸರಿದೆ ಎಂದರು.
ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಕೊಟ್ಟರೆ ನೀವು ಒಪ್ಪಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಿರಿಯ ನಾಯಕರು ಅವರಿಗೆ ಟಿಕೆಟ್ ಕೊಟ್ಟರೆ ಅಭ್ಯಂತರ ಇಲ್ಲ. ರಾಜ್ಯಾಧ್ಯಕ್ಷರು ಜಗದೀಶ್ ಶೆಟ್ಟರ್ ಅವರಿಗೆ ಸ್ಪರ್ಧಿಸುವಂತೆ ಹೇಳಿದ್ದಾರೆ. ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಕೊಟ್ಟರೆ ನಾನು ಅವರ ಜೊತೆಗೆ ಪ್ರಚಾರ ಮಾಡುತ್ತೇನೆ. ಮಕ್ಕಳಿಗೆ ಟಿಕೆಟ್ ಆಗಬೇಕು ಎನ್ನುವುದು ನನ್ನ ಆಸೆ ಇತ್ತು. ಆದರೆ ಹೈಕಮಾಂಡ್ ನಿರ್ಧಾರ ತೆಗೆದುಕೊಂಡಿದೆ ಎಂದು ಪ್ರತಿಕ್ರಿಯೆ ನೀಡಿದರು.
ಜಗದೀಶ್ ಶೆಟ್ಟರ್ ಅವರ ಬೆಳಗಾವಿ ಸ್ಪರ್ಧೆಯ ಬಗ್ಗೆ ಗೋ ಬ್ಯಾಕ್ ಶೆಟ್ಟರ್ ಅಭಿಯಾನ ವಿಚಾರಕ್ಕೆ ಪ್ರತಿಕ್ರಿಯಿಸಿ, 'ಬೇರೆ ಬೇರೆ ಜಿಲ್ಲೆಯ ನಾಯಕರು ಈಗಾಗಲೇ ಬೇರೆ ಬೇರೆ ಕಡೆ ಸ್ಪರ್ಧೆ ಮಾಡಿದ್ದಾರೆ. ಜಗದೀಶ್ ಶೆಟ್ಟರ್ ಅವರು ಮಾಜಿ ಸಿಎಂ ಮತ್ತು ಹಿರಿಯರಾಗಿದ್ದಾರೆ. ಸ್ಪರ್ಧೆ ಮಾಡಬಹುದು ಎಂದು ಮಂಗಳಾ ಅಂಗಡಿ ಹೇಳಿದರು.
ಬೇರೆ ಏನಾದರು ಹೈಕಮಾಂಡ್ ಆಶ್ವಾಸನೆ ಕೊಟ್ಟಿದ್ದಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಟಿಕೆಟ್ ಕ್ಯಾನ್ಸಲ್ ಅಂತಾನೂ ಹೇಳಿಲ್ಲ ಎಂದರು. ಖುಷಿಯಿಂದ ಸೀಟ್ ಬಿಟ್ಟು ಕೊಡ್ತಿರಾ ಎಂಬ ವಿಚಾರಕ್ಕೆ ನಸು ನಕ್ಕು ಪ್ರಸಂಗ ಹಾಗೇ ಬಂದಿದೆ. ಏನೂ ಮಾಡೋದಿಕ್ಕೆ ಆಗೋದಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಮಹಿಳೆಯರಿಗೆ ಉಡಿತುಂಬಿ ಮತಯಾಚನೆ, ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪತ್ನಿಯಿಂದ ಪ್ರಚಾರ
ಶೆಟ್ಟರ್ ಮನವೊಲಿಸಿದ್ದೇವೆ ಎಂದ ಬಿಎಸ್ವೈ: ಇಂದು ಬೆಳಗ್ಗೆ ಡಾಲರ್ಸ್ ಕಾಲೋನಿಯಲ್ಲಿ ತಮ್ಮ ಮನೆಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿಯಿಂದ ಸ್ಪರ್ಧೆ ಮಾಡಲು ಇಷ್ಟವಿರಲಿಲ್ಲ. ಕೊನೆಗೆ ನಾನು ಮನವೋಲಿಸಿ ಬೆಳಗಾವಿಯಲ್ಲಿ ಸ್ಪರ್ಧಿಸುವಂತೆ ಮನವೊಲಿಸಿದ್ದೇನೆ. ಅವರು ಸಂತೋಷದಿಂದ ಒಪ್ಪಿಕೊಂಡು ಹೋಗಿದ್ದಾರೆ. ಬಹಳ ದೊಡ್ಡ ಅಂತರದಲ್ಲಿ ಬೆಳಗಾವಿಯಿಂದ ಗೆಲ್ಲಲು ಸಾಧ್ಯವಿ ಎಂದಿದ್ದರು.