ಮೈಸೂರು: ನಾಡ ಹಬ್ಬ ಮೈಸೂರು ದಸರಾ ಹಲವು ವೈವಿಧ್ಯಮಯ ಕಾರ್ಯಕ್ರಮಗಳಿಂದ ಗಮನ ಸೆಳೆಯುತ್ತಿದೆ. ಮಹೋತ್ಸವದ 5ನೇ ದಿನವಾದ ಇಂದು ರೈತ ದಸರಾದಲ್ಲಿ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಏಳು ಹಸುಗಳಿದ್ದವು. ಸ್ಪರ್ಧಿಗಳಿಗೆ ಒಟ್ಟು 20 ನಿಮಿಷ ಕಾಲಾವಕಾಶ ನೀಡಲಾಗಿತ್ತು. ಬೆಳಿಗ್ಗೆ ಮತ್ತು ಸಾಯಂಕಾಲ ಅಂತಿಮ ಹಂತದ ಹಾಲು ಕರೆಯುವ ಸ್ಪರ್ಧೆ ನಡೆಯಿತು. ಈ ಪೈಕಿ ಹೆಚ್ಚು ಹಾಲು ನೀಡಿದ ಹಸುವಿಗೆ ಮೊದಲ ಪ್ರಶಸ್ತಿ ನೀಡಲಾಯಿತು.
ಪ್ರಥಮ ಸ್ಥಾನ- 1 ಲಕ್ಷ ರೂ: ಆನೇಕಲ್ ತಾಲೂಕಿನ ಕಗ್ಗಲೀಪುರದ ತನಿಷ್ ಫಾರಂ ಡೈರಿಯ ರಾಮಚಂದ್ರ ರೆಡ್ಡಿ ಅವರು ತಮ್ಮ ಹಸುವಿನಿಂದ ಬೆಳಗ್ಗೆ ಮತ್ತು ಸಂಜೆ ಎರಡು ಹೊತ್ತು ಸೇರಿ - 42.840 ಲೀ ಹಾಲು ಕರೆಯುವ ಮೂಲಕ ಪ್ರಥಮ ಸ್ಥಾನ ಪಡೆದು 1 ಲಕ್ಷ ರೂ. ಗೆದ್ದರು.
ದ್ವಿತೀಯ ಸ್ಥಾನ- 80 ಸಾವಿರ ರೂ.: ಚನ್ನರಾಯಪಟ್ಟಣ ತಾಲೂಕಿನ ತೋಟ ಗ್ರಾಮದ ಬಾಬು ಬಿನ್ ರೇವಣ್ಣ ಎಂಬವರು ತಮ್ಮ ಹಸುವಿನಿಂದ ಬೆಳಗ್ಗೆ ಮತ್ತು ಸಂಜೆ ಎರಡು ಹೊತ್ತು ಸೇರಿ - 42.300 ಲೀ ಹಾಲು ಕರೆಯುವ ಮೂಲಕ ದ್ವಿತೀಯ ಸ್ಥಾನ ಗಳಿಸಿ, 80 ಸಾವಿರ ರೂ. ಬಹುಮಾನ ಪಡೆದರು.
ತೃತೀಯ ಸ್ಥಾನ- 60 ಸಾವಿರ ರೂ.: ಆನೇಕಲ್ ತಾಲೂಕಿನ ವೆಟ್ ಫಾರಂ, ನಕುಂದಿ, ದೊಮ್ಮಸಂದ್ರ, ಅಜಯ್ ಪಿ.ರೆಡ್ಡಿ ಅಜಯ್ ಅವರು ತಮ್ಮ ಹಸುವಿನಿಂದ ಬೆಳಗ್ಗೆ ಮತ್ತು ಸಂಜೆ ಎರಡು ಹೊತ್ತು ಸೇರಿ - 41.300 ಲೀ ಕರೆಯುವ ಮೂಲಕ ತೃತೀಯ ಸ್ಥಾನ ಗಳಿಸಿ, 60 ಸಾವಿರ ರೂ.ಬಹುಮಾನ ಸ್ವೀಕರಿಸಿದರು.
ಹೆಚ್.ಡಿ.ಕೋಟೆ ತಾಲೂಕಿನ ಕಣಿಯನಹುಂಡಿ ಗ್ರಾಮದ AGM ಡೈರಿ ಫಾರಂ ದೇವರಾಜ್ ಅವರು ತಮ್ಮ ಹಸುವಿನಿಂದ ಬೆಳಗ್ಗೆ ಮತ್ತು ಸಂಜೆ ಎರಡು ಹೊತ್ತು ಸೇರಿ- 40.580 ಲೀ ಹಾಲು ಕರೆಯುವ ಮೂಲಕ ನಾಲ್ಕನೇ ಸ್ಥಾನ ಪಡೆದುಕೊಂಡು, 40 ಸಾವಿರ ರೂ ಗೆದ್ದರು.
ಪ್ರಥಮ, ದ್ವಿತೀಯ ಹಾಗೂ ತೃತೀಯ ಹಾಗೂ ನಾಲ್ಕನೇ ಸ್ಥಾನ ಪಡೆದುಕೊಂಡ ವಿಜೇತರಿಗೆ ನಗದು ಬಹುಮಾನದ ಜೊತೆಗೆ ಹಾಲಿನ ಕ್ಯಾನ್, ಟ್ರೋಫಿ, ಪ್ರಶಸ್ತಿ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಉಳಿದ ಎಲ್ಲ ಸ್ಪರ್ಧಿಗಳಿಗೂ ಹಾಲಿನ ಕ್ಯಾನ್ ನೀಡುವ ಮೂಲಕ ಗೌರವ ಸಮರ್ಪಣೆ ಮಾಡಲಾಯಿತು.
ಇದನ್ನೂ ಓದಿ: ರೈತ ದಸರಾದಲ್ಲಿ ಹಾಲು ಕರೆಯುವ ಸ್ಪರ್ಧೆ; ವಿಜೇತರಿಗೆ ಸಿಗಲಿದೆ ಭಾರಿ ಮೊತ್ತದ ಬಹುಮಾನ