ಹುಬ್ಬಳ್ಳಿ: "ಮಹಾದಾಯಿ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಉತ್ಸುಕವಾಗಿದೆ. ಆದರೆ ಕೇಂದ್ರ ಸರ್ಕಾರ ಸಹಕಾರ ಕೊಡುತ್ತಿಲ್ಲ" ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರೋಪಿಸಿದರು.
ನಗರದ ವಿಮಾನ ನಿಲ್ದಾಣದಲ್ಲಿಂದು ಮಾತನಾಡಿದ ಅವರು, "ಅಂದು ಮಹಾದಾಯಿ ಯೋಜನೆ ಕಾಮಗಾರಿಗೆ ಪರವಾನಗಿ ಸಿಕ್ಕಿದೆ ಎಂದು ಬಿಜೆಪಿಯವರು ಸಿಹಿ ಹಂಚಿ ವಿಜಯೋತ್ಸವ ಆಚರಿಸಿದ್ದರು. ಆದರೆ ಈಗ ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರು ಇದಕ್ಕೆ ಸಂಬಂಧಿಸಿದ ಅರ್ಜಿ ತಿರಸ್ಕರಿಸಿದ್ದಾರೆ" ಎಂದರು.
ಇದೇ ವೇಳೆ ರಾಜ್ಯ ಬಜೆಟ್ ಬಗ್ಗೆ ಮಾತನಾಡುತ್ತಾ, "ನಾಳೆ ಮಂಡಿಸಲಾಗುವ ಬಜೆಟ್ ಹೊಸ ದಿಕ್ಸೂಚಿ ಆಗಲಿದೆ. ಆಶಾದಾಯಕವಾಗಿರಲಿದೆ. ಗ್ಯಾರಂಟಿ ಯೋಜನೆಗಳಿಗೆ ಶಕ್ತಿ ತುಂಬಲಿದೆ" ಎಂದು ಹೇಳಿದರು.
ಲೋಕಸಭೆ ಚುನಾವಣೆ ಕುರಿತು ಪ್ರತಿಕ್ರಿಯಿಸಿ, "ಧಾರವಾಡ ಲೋಕಸಭಾ ಕ್ಷೇತ್ರ ಸೇರಿದಂತೆ ಬಹುತೇಕ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಅಭ್ಯರ್ಥಿಗಳ ಆಯ್ಕೆಗೆ ಸಮೀಕ್ಷೆ ನಡೆದಿದೆ. ಪಕ್ಷದ ವರಿಷ್ಠರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ" ಎಂದು ತಿಳಿಸಿದರು.
ನಿಗಮ, ಮಂಡಳಿ ನೇಮಕಾತಿ ವಿಚಾರಕ್ಕೆ, "ಬಜೆಟ್ ನಂತರವೇ ನಿಗಮ, ಮಂಡಳಿಗೆ ನೇಮಕ ಮಾಡಲಾಗುವುದು. ಈ ಬಗ್ಗೆ ಯಾರೂ ಅಸಮಾಧಾನಗೊಂಡಿಲ್ಲ" ಎಂದು ಹೇಳಿದರು.
ಇದನ್ನೂ ಓದಿ: ಒಪಿಎಸ್ ಮರುಜಾರಿ ಸೇರಿ ಹಲವು ಬೇಡಿಕೆ: ಸಿದ್ದರಾಮಯ್ಯ ಬಜೆಟ್ನಲ್ಲಿ ಈಡೇರುತ್ತಾ ಸರ್ಕಾರಿ ನೌಕರರ ನಿರೀಕ್ಷೆ?