ಬೆಂಗಳೂರು: ಕಾನೂನುಬಾಹಿರವಾಗಿ ಬಾಲಕಿಯನ್ನು ದತ್ತು ಪಡೆದ ಪ್ರಕರಣದ ಆರೋಪಿ ಸೋನು ಶ್ರೀನಿವಾಸ್ ಗೌಡ 11 ದಿನಗಳ ಬಳಿಕ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಜಾಮೀನು ಆದೇಶದೊಂದಿಗೆ ವಿಧಿಸಿದ್ದ ಷರತ್ತು ಪ್ರಕ್ರಿಯೆಗಳನ್ನು ಪೂರೈಸಿದ ಬಳಿಕ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿದೆ.
ಆರೋಪಿಗೆ ಮೂರು ದಿನಗಳ ಹಿಂದಷ್ಟೇ ಜಾಮೀನು ಮಂಜೂರಾಗಿತ್ತು. ಇಬ್ಬರ ಶ್ಯೂರಿಟಿ ಜೊತೆಗೆ 1 ಲಕ್ಷ ರೂ. ಬಾಂಡ್ ಒದಗಿಸುವಂತೆ ನ್ಯಾಯಾಲಯ ಷರತ್ತು ವಿಧಿಸಿತ್ತು. ಅದರನ್ವಯ ಜಾಮೀನು ಅರ್ಜಿಯ ಷರತ್ತುಗಳನ್ನು ಪೂರೈಸಿದ ಬಳಿಕ ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಬಿಡುಗಡೆ ಬಳಿಕ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಸೋನು ಗೌಡ ತೆರಳಿದ್ದಾರೆ.
ರಾಯಚೂರು ಮೂಲದ ಬಾಲಕಿಯೊಬ್ಬಳನ್ನು ದತ್ತು ಪಡೆದಿರುವುದಾಗಿ ತನ್ನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಮಾರ್ಚ್ 2ರಂದು ಸೋನು ಗೌಡ ತಿಳಿಸಿದ್ದರು. ದತ್ತು ಪ್ರಕ್ರಿಯೆ ಕಾನೂನುಬಾಹಿರ ಎಂಬ ಆರೋಪದಡಿ ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ, ಬಾಲ ನ್ಯಾಯ ಕಾಯ್ದೆ, ಹಿಂದೂ ದತ್ತು ಕಾಯ್ದೆ ಉಲ್ಲಂಘನೆಯಡಿ ಸೋನು ಗೌಡ ವಿರುದ್ಧ ಬ್ಯಾಡರಹಳ್ಳಿ ಠಾಣೆಗೆ ದೂರು ನೀಡಿದ್ದರು.
ಅದರನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಮಾರ್ಚ್ 22 ರಂದು ಬಂಧಿಸಿದ್ದರು. ಬಳಿಕ ಮಾರ್ಚ್ 25 ರಂದು ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯ ಆದೇಶಿಸಿತ್ತು.
ಇದನ್ನೂ ಓದಿ: ಮಗು ದತ್ತು ಪಡೆದ ಪ್ರಕರಣ: ಸೋನು ಶ್ರೀನಿವಾಸ್ ಗೌಡಗೆ ಷರತ್ತುಬದ್ಧ ಜಾಮೀನು - Sonu Srinivas Gowda