ಹುಬ್ಬಳ್ಳಿ: ''ಲೋಕಸಭಾ ಚುನಾವಣೆಯ ನಂತರ ಸಿದ್ದರಾಮಯ್ಯ ಸಿಎಂ ಹುದ್ದೆಗೆ ರಾಜೀನಾಮೆ ಕೊಡುತ್ತಾರೆ. ಆಪರೇಷನ್ ಅವಶ್ಯಕತೆ ಇಲ್ಲ. ಕಾಂಗ್ರೆಸ್‌ನಲ್ಲಿನ ಗುಂಪುಗಾರಿಕೆಯಿಂದ ಸರ್ಕಾರ ಪತನವಾಗುತ್ತದೆ. ಅದಕ್ಕೆ ಗುಬ್ಬಿ ಶಾಸಕರ ಬಹಿರಂಗ ಹೇಳಿಕೆಯೇ ಸಾಕ್ಷಿ'' ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿ ಇಂದು (ಭಾನುವಾರ) ಮಾತನಾಡಿದ ಅವರು, ''ಕಾಂಗ್ರೆಸ್‌ನಲ್ಲಿ ಗುಂಪುಗಳಿವೆ. ಈ ಗುಂಪುಗಳಿಂದ ಸರ್ಕಾರ ಬಿದ್ದು ಹೋಗಲಿದೆ. ಅಧಿಕಾರಕ್ಕಾಗಿ ಅವರಲ್ಲಿಯೇ ಕಿತ್ತಾಟ ನಡೆಯುತ್ತಿದೆ. ಕೆಲವು ದಿನಗಳ ಹಿಂದಷ್ಟೇ ದಲಿತ ಸಿಎಂ ಕೂಗು ಕೇಳಿ ಬಂದಿತ್ತು. ಆ ನಂತರ ನಾಲ್ಕು ಡಿಸಿಎಂ ಮಾಡಬೇಕೆಂಬುದು ಮುನ್ನಲೆಗೆ ಬಂದಿತ್ತು. ಈಗ ಸಿಎಂ ಬದಲಾವಣೆ ವಿಚಾರ ಜೋರಾಗಿ ಚರ್ಚೆ ಆಗುತ್ತಿದೆ'' ಎಂದರು.
''2014ರಲ್ಲಿಯೂ ಸಿದ್ದರಾಮಯ್ಯ ಸಿಎಂ ಇದ್ದಾಗ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲವು ಸಾಧಿಸಿತ್ತು. ಆಗ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿದ್ರಾ? ಇದೆಲ್ಲಾ ಬೆಳವಣಿಗೆ ನೋಡಿದಾಗ ಲೋಕಸಭಾ ಚುನಾವಣೆ ನಂತ್ರ ಸರ್ಕಾರ ಪತನವಾಗುವುದು ಖಚಿತ. ಆದ್ರೆ, ವಿನಾಕಾರಣ ಬಿಜೆಪಿಯ ಮೇಲೆ ಗೂಬೆ ಕೂರಿಸುವವುದು ಸರಿ ಅಲ್ಲ. ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂಪಾಯಿ ಆಮಿಷ ಹಸಿ ಸುಳ್ಳು. ಇದನ್ನು ಶಾಮನೂರು ಶಿವಶಂಕರ ಅವರೇ ಸ್ಪಷ್ಟಪಡಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಬೀಳಿಸಲು ಕಾಂಗ್ರೆಸ್‌ನಲ್ಲಿಯೇ ಒಳತಂತ್ರವನ್ನು ರೂಪಿಸಲಾಗುತ್ತದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಹಸಿ ಸುಳ್ಳುಗಳನ್ನು ಹೇಳುತ್ತಿದ್ದಾರೆ'' ಎಂದು ಕಿಡಿಕಾರಿದರು.
ರಾಜಕೀಯ ಸ್ಟಂಟ್: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದಕ್ಕೆ ಶೆಟ್ಟರ್ ವಾಗ್ದಾಳಿ ನಡೆಸಿದರು. ''ಚುನಾವಣೆ ಸಮಯದಲ್ಲಿ ಜನರ ಗಮನವನ್ನು ಬೇರೆ ಕಡೆ ಸೆಳೆಯಲು ತಂತ್ರ ಮಾಡಲಾಗಿದೆ. ಅನುದಾನ ಬಂದಿಲ್ಲ ಎಂದು ಕೋರ್ಟ್‌ಗೆ ಹೋಗಿದ್ದು ಇತಿಹಾಸದಲ್ಲಿಯೇ ಮೊದಲು. ಅನುದಾನದ ಕುರಿತು ಚರ್ಚಿಸಲು ಬೇರೆ ಬೇರೆ ವೇದಿಕೆಗಳಿವೆ. ಲೋಕಸಭಾ ಮತ್ತು ರಾಜ್ಯಸಭೆಯಲ್ಲಿ ಚರ್ಚಿಸಬಹುದು. ರಾಜ್ಯ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರೇ ವಿರೋಧ ಪಕ್ಷದ ನಾಯಕರಿದ್ದಾರೆ. ಆದ್ರೆ ಅಲ್ಲಿ ಚರ್ಚಸುತ್ತಿಲ್ಲ, ಚುನಾವಣೆ ಪೂರ್ವದಲ್ಲಿ ದೆಹಲಿಗೆ ಹೋಗಿ ಹೋರಾಟ ಮಾಡುಯ ಸ್ಟಂಟ್ ಮಾಡಿದ್ದರು'' ಎಂದು ಗರಂ ಆದರು.
ಬೆಳಗಾವಿ ಕ್ಷೇತ್ರ- ಟಿಕೆಟ್ ಹಂಚಿಕೆ ಸಮಸ್ಯೆ ಇಲ್ಲ: ''ಇಂದು ಅಥವಾ ನಾಳೆ ಬೆಳಗಾವಿ ಟಿಕೆಟ್ ಘೋಷಣೆಯಾಗಲಿದೆ. ನನಗೆ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸದಲ್ಲಿ ನಾನಿದ್ದೇನೆ. ಬೆಳಗಾವಿ ಕ್ಷೇತ್ರದ ಹಲವು ನಾಯಕರು ನನಗೆ ಈಗಾಗಲೇ ಆಹ್ವಾನ ನೀಡುತ್ತಿದ್ದಾರೆ. ನಾನು ಸಹ ಅವರ ಜೊತೆಗೆ ನಾನು ಸಂಪರ್ಕದಲ್ಲಿದ್ದೇನೆ'' ಎಂದು ಹೇಳಿದರು.
''ದಿಂಗಾಲೇಶ್ವರ ಶ್ರೀಗಳು ಸ್ಪರ್ಧೆ ಮಾಡುವುದು ನನಗೆ ಗೊತ್ತಿಲ್ಲ. ಮಾಧ್ಯಮಗಳ ಬಂದ ಸುದ್ದಿ ಬಂದಿದ್ದನ್ನು ನಾನು ಗಮನಿಸಿದ್ದೇನೆ. ಗ್ಯಾರಂಟಿಗಳನ್ನು ನೋಡಿ ಜನ ವೋಟ್ ಹಾಕಲ್ಲ. ಮೋದಿಯವರನ್ನು ನೋಡಿ ಲೋಕಸಭಾ ಚುನಾವಣೆಯಲ್ಲಿ ಜನ್ರು ಬೆಂಬಲ ನೀಡುತ್ತಾರೆ. ಕಾಂಗ್ರೆಸ್ ಮಹಿಳೆಯರಿಗೆ ಹೆಚ್ಚು ಟಿಕೆಟ್ ಕೊಟ್ಟಿದ್ದು, ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಮಹಿಳೆಯರಿಗೆ ನ್ಯಾಯ ಒದಗಿಸಿದ್ದು ನಮ್ಮ ಪಕ್ಷ. ಮಹಿಳಾ ಮೀಸಲಾತಿ ಜಾರಿಗೆ ತರುತ್ತಿರುವುದು ನರೇಂದ್ರ ಮೋದಿ'' ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದನ್ನೂ ಓದಿ: ದೇವರ ಅನುಗ್ರಹ, ಜನರ ಪ್ರಾರ್ಥನೆ ಫಲ ಕೊಟ್ಟಿದೆ: ಹೆಚ್ಡಿಕೆ - H D Kumaraswamy Heart Surgery