ಬೆಂಗಳೂರು: ಜ್ಯೂವೆಲ್ಲರಿ ಶಾಪ್ನಲ್ಲಿ ಪಿಸ್ತೂಲ್ನಿಂದ ಗುಂಡು ಹಾರಿಸಿ ದರೋಡೆಗೆ ಯತ್ನಿಸಿದ ಪ್ರಕರಣದ ತನಿಖೆ ಆರಂಭಿಸಿರುವ ಪೊಲೀಸರಿಗೆ ಕೃತ್ಯದ ಹಿಂದೆ ಅಂತಾರಾಜ್ಯ ದರೋಡೆಕೋರರ ಕೈವಾಡ ಇರುವ ಅನುಮಾನ ವ್ಯಕ್ತವಾಗಿದೆ. ಇತ್ತೀಚಿಗೆ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ದರೋಡೆಗೂ, ಕೊಡಿಗೆಹಳ್ಳಿಯಲ್ಲಿ ನಡೆದಿರುವ ಕೃತ್ಯಕ್ಕೂ ಸಾಮ್ಯತೆ ಇರುವ ಹಿನ್ನೆಲೆ ತನಿಖೆ ಚುರುಕುಗೊಳಿಸಿರುವ ಪೊಲೀಸರು ನೆರೆಯ ರಾಜ್ಯಗಳಲ್ಲಿ ಆರೋಪಿಗಳಿಗೆ ಹುಡುಕಾಟ ಆರಂಭಿಸಿದ್ದಾರೆ.
2023ರ ಅಕ್ಟೋಬರ್‌ನಲ್ಲಿ ಬ್ಯಾಡರಹಳ್ಳಿಯ ವಿನಾಯಕ ಚಿನ್ನದ ಮಳಿಗೆಗೆ ಬಂದಿದ್ದ ನಾಲ್ಕೈದು ಜನ ದುಷ್ಕರ್ಮಿಗಳು ಮಾಲೀಕನ ಮೇಲೆ ಗುಂಡಿನ ದಾಳಿ ನಡೆಸಿ, ಅರ್ಧ ಕೆಜಿಯಷ್ಟು ಚಿನ್ನ ದೋಚಿ ಪರಾರಿಯಾಗಿದ್ದರು. ಪ್ರಕರಣದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದ ಬ್ಯಾಡರಹಳ್ಳಿ ಠಾಣಾ ಪೊಲೀಸರು, ಹೈದರಾಬಾದಿಗೆ ವಿಮಾನವೇರುವ ಯತ್ನದಲ್ಲಿದ್ದ ಹುಸೇನ್ ಎಂಬ ಆರೋಪಿಯನ್ನ ಬಂಧಿಸಿದ್ದರು. ಸಿಕಂದರ್, ಶಿವ ಅಲಿಯಾಸ್ ಕಳ್ಳ ಶಿವ ಮತ್ತು ವಿಕಾಸ್ ಎಂಬ ಆರೋಪಿಗಳು ಪರಾರಿಯಾಗಿದ್ದರು.
ಕೊಡಿಗೆಹಳ್ಳಿಯ ದೇವಿನಗರದ ಲಕ್ಷ್ಮಿ ಬ್ಯಾಂಕರ್ಸ್ ಅಂಡ್ ಜ್ಯುವೆಲ್ಲರ್ಸ್ ಶಾಪ್ನಲ್ಲಿ ನಡೆದಿರುವ ಕೃತ್ಯದಲ್ಲಿಯೂ ಸಹ ನಾಲ್ವರು ಆರೋಪಿಗಳು ಎರಡು ದ್ವಿಚಕ್ರ ವಾಹನಗಳಲ್ಲಿ ಬಂದಿರುವುದು ಖಚಿತವಾಗಿದೆ. ಅಲ್ಲದೇ ಎರಡೂ ಘಟನೆಗಳು ಹಾಡಹಗಲೇ, ಸರಿಸುಮಾರು ಒಂದೇ ಸಮಯದಲ್ಲಿ ನಡೆದಿವೆ. ಪ್ರತ್ಯೇಕ ಪ್ರಕರಣಗಳಾದರೂ ಸಹ ಎರಡರ ನಡುವೆ ಸಾಕಷ್ಟು ಸಾಮ್ಯತೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನ ಪೊಲೀಸರು ಮತ್ತಷ್ಟು ಚುರುಕುಗೊಳಿಸಿದ್ದಾರೆ.
ನಾಲ್ವರು ದುಷ್ಕರ್ಮಿಗಳ ತಂಡವೊಂದು ಇಬ್ಬರ ಮೇಲೆ ಪಿಸ್ತೂಲ್ನಿಂದ ಗುಂಡು ಹಾರಿಸಿ ದರೋಡೆಗೆ ಯತ್ನಿಸಿದ ಘಟನೆ ಗುರುವಾರ ಬೆಳಗ್ಗೆ ಕೊಡಿಗೆಹಳ್ಳಿಯ ದೇವಿನಗರದಲ್ಲಿರುವ ಲಕ್ಷ್ಮೀ ಬ್ಯಾಂಕರ್ಸ್ ಆ್ಯಂಡ್ ಜ್ಯುವೆಲ್ಲರ್ಸ್ ಶಾಪ್ನಲ್ಲಿ ನಡೆದಿತ್ತು.
ಓದಿ: ಭಾರತದ ಯುವಜನತೆಯಲ್ಲಿ ಹೆಚ್ಚುತ್ತಿರುವ ಗ್ಲುಕೋಮಾ ಪ್ರಕರಣಗಳು: ವೈದ್ಯರ ಕಳವಳ