ಕಲಬುರಗಿ: ವಿದ್ಯಾರ್ಥಿನಿಯೊಬ್ಬರಿಗೆ ಗೋಲ್ಡ್‌ಮೆಡಲ್ ಬಂದಿದೆ ಘಟಿಕೋತ್ಸವ ಕಾರ್ಯಕ್ರಮಕ್ಕೆ ಬಂದು ಗೋಲ್ಡ್ ಮೆಡಲ್ ಸ್ವೀಕರಿಸಿ ಅಂತಾ ವಿಶ್ವವಿದ್ಯಾಲಯ ವತಿಯಿಂದ ಪತ್ರ ಕಳಿಸಲಾಗಿತ್ತು. ಅದರಂತೆ ಘಟಿಕೋತ್ಸವ ಕಾರ್ಯಕ್ರಮಕ್ಕೆ ಬಂದ ವಿದ್ಯಾರ್ಥಿನಿಗೆ ಶಾಕ್ ಕಾದಿತ್ತು. ಅಷ್ಟಕ್ಕೂ ವಿವಿ ಮಾಡಿದ ಎಡವಟ್ಟಿನಿಂದ ವಿದ್ಯಾರ್ಥಿನಿಯೊಬ್ಬರು ಕಣ್ಣೀರು ಹಾಕಿರುವ ಘಟನೆ ಸೋಮವಾರ ನಡೆದಿದೆ.
ವಿದ್ಯಾರ್ಥಿನಿ ಏಕಾಏಕಿ ವೇದಿಕೆಯತ್ತ ನುಗ್ಗಿ ರಾಜ್ಯಪಾಲರನ್ನು ಭೇಟಿಯಾಗಲು ಪ್ರಯತ್ನಿಸಿದರು. ವಿದ್ಯಾರ್ಥಿನಿಯನ್ನು ಈ ವೇಳೆ ತಡೆದಿದ್ದಕ್ಕೆ ಆಕೆಯ ಕುಟುಂಬಸ್ಥರು ಕಣ್ಣೀರು ಹಾಕಿದರು. ಕಲಬುರಗಿ ನಗರದ ಗುಲ್ಬರ್ಗಾ ವಿಶ್ವವಿದ್ಯಾಲಯದ 42ನೇ ವಾರ್ಷಿಕ ಘಟಿಕೋತ್ಸವದಲ್ಲಿ ವಿದ್ಯಾರ್ಥಿನಿ ರೋಶಿನಿ ಎಂಬುವರು ಕಣ್ಣೀರು ಹಾಕಿದರು. ಬೀದರ್ ಜಿಲ್ಲೆ ಭಾಲ್ಕಿ ಮೂಲದ ರೋಶಿನಿ ಶೇಕಡಾ 70ರಷ್ಟು ಅಂಕಗಳೊಂದಿಗೆ ಎಂಎ ಇಂಗ್ಲಿಷ್ ಪದವಿ ಮುಗಿಸಿದ್ದರು. ನೀವು ವಿಶ್ವವಿದ್ಯಾಲಯಕ್ಕೆ ಮೊದಲ ರ‍್ಯಾಂಕ್ ಬಂದಿದ್ದಿರಿ. ಆ.12 ರಂದು ನಡೆಯಲಿರುವ ಘಟಿಕೋತ್ಸವದಲ್ಲಿ ಚಿನ್ನದ ಪದಕ ಸ್ವೀಕರಿಸಿ ಎಂದು ವಿವಿಯಿಂದ ಪತ್ರ ಬಂದಿತ್ತು. ಅದರಂತೆ ಇಂದು ಘಟಿಕೋತ್ಸವಕ್ಕೆ ಗೋಲ್ಡ್ ಮೆಡಲ್ ಸ್ವೀಕರಿಸಲು ಬಂದಾಗ ಲಿಸ್ಟ್‌ನಲ್ಲಿ ಹೆಸರು ಇಲ್ಲದೇ ಇರುವುದನ್ನ ಕಂಡು ವೇದಿಕೆ ಮೇಲಿದ್ದ ರಾಜ್ಯಪಾಲರನ್ನು ಭೇಟಿ ಮಾಡಲು ಮುಂದಾಗಿದ್ದರು. ಈ ವೇಳೆ ಪೊಲೀಸರು ವಿದ್ಯಾರ್ಥಿನಿಯನ್ನು ತಡೆದರು.
ವಿಶ್ವವಿದ್ಯಾಲಯ ಎಡವಟ್ಟಿಗೆ ಮುಖ್ಯ ಕಾರಣ ಮೌಲ್ಯಮಾಪನದಲ್ಲಿ ನಿರ್ಲಕ್ಷ್ಯ. ಎಂಎ ಇಂಗ್ಲಿಷ್ ಪರೀಕ್ಷೆ ಮೌಲ್ಯಮಾಪನ ಸಂದರ್ಭದಲ್ಲಿ ಶೇಕಡಾ 71 ಅಂಕ ಗಳಿಸಿದ್ದ ವಿದ್ಯಾರ್ಥಿನಿಗೆ ವಿಶ್ವವಿದ್ಯಾಲಯ ಗೋಲ್ಡ್ ಮೆಡಲ್ ಬಂದಿದೆ ಎಂದು ಪತ್ರ ಕಳಿಸುವುದನ್ನು ಬಿಟ್ಟು ಶೇ.70 ರಷ್ಟು ಅಂಕ ಪಡೆದಿದ್ದ ರೋಶಿನಿ ಎಂಬ ವಿದ್ಯಾರ್ಥಿನಿಗೆ ಗೋಲ್ಡ್ ಮೆಡಲ್ ಪತ್ರ ಕಳಿಸಲಾಗಿತ್ತು. ಒಟ್ಟಾರೆಯಾಗಿ ವಿಶ್ವವಿದ್ಯಾಲಯ ಮಾಡಿದ ಎಡವಟ್ಟಿನಿಂದ ವಿದ್ಯಾರ್ಥಿನಿ ಕಣ್ಣೀರು ಹಾಕುವಂತಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ ಸುಧಾಕರ್, ವಿಶ್ವವಿದ್ಯಾಲಯ ಆಡಳಿತ ಮಂಡಳಿಯ ಎಡವಟ್ಟಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅದೆನೇ ಇರಲಿ, ಗುಲ್ಬರ್ಗಾ ವಿಶ್ವವಿದ್ಯಾಲಯದ ಎಡವಟ್ಟಿನಿಂದ ಗೋಲ್ಡ್ ಮೆಡಲ್ ಪಡೆಯಬೇಕಾಗಿದ್ದ ವಿದ್ಯಾರ್ಥಿನಿ ಇದೀಗ ಕಣ್ಣೀರು ಹಾಕುತ್ತಿದ್ದಾರೆ. ಇದಕ್ಕೆ ವಿಶ್ವವಿದ್ಯಾಲಯ ಯಾವ ರೀತಿ ಸ್ಪಷ್ಟೀಕರಣ ನೀಡುತ್ತೆ ಎಂಬುದನ್ನು ಕಾದು ನೋಡಬೇಕಿದೆ.
ರೈತನ ಮಗಳಿಗೆ 13, ಆರ್ಟಿಪಿಎಸ್ ನೌಕರನ ಮಗಳಿಗೆ 7 ಚಿನ್ನದ ಪದಕ: ಕೃಷಿ ಕುಟುಂಬದಿಂದ ಬಂದ ಆನಂದಮ್ಮ ಅವರು ಕನ್ನಡ ವಿಭಾಗದ ಸ್ನಾತಕೋತ್ತರ ಪದವಿಯಲ್ಲಿ 13 ಚಿನ್ನದ ಪದಕಗಳನ್ನು ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ. ಚಿತ್ತಾಪುರ ತಾಲೂಕಿನ ದಿಗ್ಗಾಂವ ಗ್ರಾಮದ ರೈತ ದೇವಿಂದ್ರಪ್ಪ ಅವರ ಪುತ್ರಿ ಆನಂದಮ್ಮ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಚಿನ್ನದ ಪದಕ ಪಡೆದು ಗಮನ ಸೆಳೆದರು.
ರಾಯಚೂರು ಆರ್.ಟಿ.ಪಿ.ಎಸ್ ನೌಕರರಾಗಿರುವ ಅಂಜನೇಯ ಅವರ ಪುತ್ರಿ ಪೂರ್ವಿಕಾ ಗದ್ವಾಲ್ ಅವರು ಪ್ರಾಣಿಶಾಸ್ತ್ರ ವಿಭಾಗದಲ್ಲಿ 7 ಚಿನ್ನದ ಪದಕ ಮತ್ತು ಎಂಬಿಎ ಅಧ್ಯಯನದಲ್ಲಿ ಅಭಿಷೇಕ, ಸಮಾಜಕಾರ್ಯ ವಿಭಾಗದಲ್ಲಿ ಅಂಬಿಕಾ, ರಾಜ್ಯಶಾಸ್ತ್ರ ವಿಭಾಗದಲ್ಲಿ ಪಲ್ಲವಿ ತಲಾ 6 ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಘಟಿಕೋತ್ಸವದಲ್ಲಿ ರಾಜ್ಯಪಾಲರಾದ ತಾವರ್‌ಚಂದ್ರ ಗೇಹ್ಲೋಟ್, ಉನ್ನತ ಶಿಕ್ಷಣ ಸಚಿವರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.