ಚಾಮರಾಜನಗರ: ಚಾಮರಾಜನಗರ ದಸರಾವನ್ನು ಈ ಬಾರಿ ವಿಜೃಂಭಣೆಯಿಂದ ಆಚರಿಸಲು ಯೋಜನೆ ರೂಪಿಸಲಾಗಿದೆ. ನಟ ಶಿವ ರಾಜ್‌ಕುಮಾರ್ ದಸರಾ ಉದ್ಘಾಟಿಸುವ ಸಾಧ್ಯತೆ ಇದೆ. ಅ.7, 8 ಹಾಗೂ 9 ರಂದು ದಸರಾ ನಡೆಯಲಿದೆ.
ದಸರಾ ಉದ್ಘಾಟನೆ ವಿಚಾರವಾಗಿ ಈಗಾಗಲೇ ಜಿಲ್ಲಾಡಳಿತ ಒಂದು ಬಾರಿ ಮಾತುಕತೆ ನಡೆಸಿದೆ. ಇನ್ನೆರಡು ದಿನಗಳಲ್ಲಿ ಖಚಿತಪಡಿಸುವುದಾಗಿ ಶಿವ ರಾಜ್‌ಕುಮಾರ್ ತಿಳಿಸಿದ್ದಾರೆ ಎಂದು ಡಿಸಿ ಶಿಲ್ಪಾನಾಗ್ ಮಾಹಿತಿ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಚಾಮರಾಜನಗರ ದಸರಾ ಆಚರಣಾ ಸಮಿತಿ ಸಭೆ ಸೋಮವಾರ ಮಧ್ಯಾಹ್ನ ನಡೆಯಿತು.
ಚಾಮರಾಜನಗರ ದಸರಾ ಈ ಬಾರಿ ಮತ್ತಷ್ಟು ಕಳೆಗಟ್ಟಲಿದ್ದು, ಎರಡು ಆನೆಗಳನ್ನು ಕರೆತಂದು ಮೆರವಣಿಗೆ ಮಾಡಲು ಕೂಡ ಚಿಂತನೆ ನಡೆಸಲಾಗಿದೆ. ಚಾಮರಾಜ ಒಡೆಯರ್ ಜನಿಸಿದ ಜನನ ಮಂಟಪದಲ್ಲಿ ಚಾಮರಾಜೇಶ್ವರ ದರ್ಬಾರ್ ಕೂಡ ನಡೆಸಲಿದ್ದು, ಹಳೆ ಸಂಪ್ರದಾಯಕ್ಕೆ ಜಿಲ್ಲಾಡಳಿತ ಮತ್ತೆ ನಾಂದಿ ಹಾಡಲಿದೆ. ಸರ್ಕಾರದಿಂದ ದಸರಾಗೆ 2 ಕೋಟಿ ರೂಪಾಯಿ ನಿಗದಿಯಾಗಿದ್ದು, ಇಡೀ ನಗರವನ್ನು ಜಗಮಗಗೊಳಿಸಲು ಆಕರ್ಷಕ ಲೈಟಿಂಗ್ ವ್ಯವಸ್ಥೆ, ಜನಪ್ರಿಯ ಗಾಯಕರಿಂದ ಸಂಗೀತ ಸುಧೆ, ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಬಿಂಬಿಸಲು ವಿಶೇಷ ಲೈಟಿಂಗ್ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ.
ಸಭೆಯಲ್ಲಿ ಸಚಿವ ಕೆ.ವೆಂಕಟೇಶ್ ಮಾತನಾಡಿ, ಚಾಮರಾಜನಗರ ದಸರಾ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
"ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ದೀಪಾಲಂಕಾರವನ್ನು ಹೆಚ್ಚು ಜನರನ್ನು ಸೆಳೆಯುವ ರೀತಿಯಲ್ಲಿ ಕೈಗೊಳ್ಳಬೇಕು. ಪ್ರಮುಖ ವೃತ್ತಗಳಲ್ಲಿ ವಿಶೇಷವಾಗಿ ದೀಪಾಲಂಕಾರ ವ್ಯವಸ್ಥೆಯಾಗಬೇಕಿದ್ದು, ಇದಕ್ಕಾಗಿ ಹೆಚ್ಚಿನ ಅನುದಾನ ನಿಗದಿಮಾಡಿಕೊಳ್ಳಬೇಕು. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ವಿಶೇಷ ಗಮನಹರಿಸಿ" ಎಂದು ಸಚಿವರು ತಿಳಿಸಿದರು.
ಎಂಎಸ್‍ಐಎಲ್ ಅಧ್ಯಕ್ಷ, ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ , "ವಿದ್ಯುತ್ ದೀಪಾಲಂಕಾರ ಎಲ್ಲ ಕಡೆಯಲ್ಲೂ ಇರಬೇಕು. ದೀಪಾಲಂಕಾರ ಹೆಚ್ಚು ಜನರ ಗಮನ ಸೆಳೆಯಲಿದೆ. ದಸರಾ ಹಬ್ಬದಲ್ಲಿ ವ್ಯಾಪಕವಾಗಿ ಎಲ್ಲ ಭಾಗಗಳಲ್ಲಿಯೂ ದೀಪಾಲಂಕಾರ ಇರುವಂತೆ ನೋಡಿಕೊಳ್ಳಬೇಕು" ಎಂದರು.