ಹಾವೇರಿ: ಶಿಗ್ಗಾಂವ್ ಉಪಚುನಾವಣಿಯ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿ ಅವರ ಶಿಗ್ಗಾಂವ್ ನಿವಾಸದ ಸಭಾಭವನದಲ್ಲಿ ಶುಕ್ರವಾರ ಸಂಘಟನಾತ್ಮಕ ಸಭೆ ನಡೆಯಿತು. ಸಭೆಗೂ ಮುನ್ನ ಬಿಜೆಪಿ ವೀಕ್ಷಕರು ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸಿದರು. ಆಗ ಸುಮಾರು 57 ಆಕಾಂಕ್ಷಿಗಳು ಟಿಕೆಟ್‌ಗೆ ಅರ್ಜಿ ಸಲ್ಲಿಸುವ ಮೂಲಕ ಆಚ್ಚರಿ ಮೂಡಿಸಿದ್ದಾರೆ. ಈ ಮೂಲಕ ಶಿಗ್ಗಾಂವ್ ಉಪಚುನಾವಣೆಯ ಟಿಕೆಟ್‌ಗಾಗಿ ಬಿಜೆಪಿಯಲ್ಲಿ ಭರ್ಜರಿ ಪೈಪೋಟಿ ಏರ್ಪಟ್ಟಿದೆ.
ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ, ಶ್ರೀಕಾಂತ ದುಂಡಿಗೌಡ್ರ, ಹಾವೇರಿ ಜಿಲ್ಲಾ ಬಿಜಿಪಿ ಮಹಿಳಾ ಸಂಘದ ಮಾಜಿ ಅಧ್ಯಕ್ಷ ಶೋಭಾ ನಿಸ್ಸೀಮಗೌಡ್ರ, ಉದ್ಯಮಿ ಶಶಿಧರ ಯಲಿಗಾರ್ ಸೇರಿದಂತೆ ಸುಮಾರು 57 ಆಕಾಂಕ್ಷಿಗಳು ಬಿಜೆಪಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ನಂತರ ನಡೆದ ಸಂಘಟನಾತ್ಮಕ ಸಭೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ರಾಧಾಮೋಹನದಾಸ್ ಅಗರವಾಲ್ ಚಾಲನೆ ನೀಡಿದರು.
ಸಭೆ ಉದ್ಘಾಟಿಸಿ ಮಾತನಾಡಿದ ಅಗರವಾರ್ ಶಿಗ್ಗಾಂವ್ ಉಪಚುನಾವಣಿಯ ಸಂಘಟನಾತ್ಮಕ ಸಭೆಯಲ್ಲಿ ಪಕ್ಷದ ಕಾರ್ಯಕರ್ತರು ಉತ್ಸುಕತೆಯಿಂದ ಭಾಗವಹಿಸಿದ್ದು ನೋಡಿದರೆ ಈ ಬಾರಿಯೂ ಸಹ ಬಿಜೆಪಿ ಉಪಚುನಾವಣೆಯಲ್ಲಿ ಜಯ ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಬಸವರಾಜ ಬೊಮ್ಮಾಯಿ ಸಂಸದರಾಗಿದ್ದರಿಂದ ಶಿಗ್ಗಾಂವ್ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು 57 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಸಾಕಷ್ಟು ಪೈಪೋಟಿ ಇದೆ. ಬಿಜೆಪಿ ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಕಾರ್ಯಕರ್ತರಿರುವ ಪಕ್ಷವಾಗಿದ್ದು, ಇಲ್ಲಿ ಕಾರ್ಯಕರ್ತರಿಗೂ ಪ್ರಧಾನಮಂತ್ರಿ ಹುದ್ದೆ ಸಿಗುತ್ತೆ ಎಂದು ತಿಳಿಸಿದರು.
ಕಳೆದ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಅಭ್ಯರ್ಥಿಗಿಂತ 30 ಸಾವಿರ ಮತಗಳ ಅಂತರದಿಂದ ಜಯಸಾಧಿಸಿದ್ದಾರೆ. ಈ ಉಪಚುನಾವಣೆಯಲ್ಲಿ ಸುಮಾರು 60 ಸಾವಿರ ಮತಗಳಿಂದ ಬಿಜೆಪಿ ಅಭ್ಯರ್ಥಿ ಗೆಲ್ಲಿಸಬೇಕಿದೆ. 57 ಆಕಾಂಕ್ಷಿಗಳು ಶಕ್ತಿಕೇಂದ್ರಗಳಿಗೆ ತೆರಳಿ ಪ್ರತಿಯೊಬ್ಬರು ಕನಿಷ್ಠ ನಾಲ್ಕು ಬೂತ್‌ಗಳಲ್ಲಿ ಬಿಜೆಪಿಗೆ ಹೊಸದಾಗಿ 400 ಸದಸ್ಯರನ್ನ ಸೇರ್ಪಡೆ ಮಾಡಬೇಕು. ಯಾವ ಆಕಾಂಕ್ಷಿ ಹೆಚ್ಚು ಸದಸ್ಯರನ್ನು ಸೇರಿಸುತ್ತಾರೆಯೋ ಅವರಿಗೆ ಟಿಕೆಟ್ ನೀಡುವ ಕುರಿತಂತೆ ಹೈಕಮಾಂಡ್ಗೆ ಶಿಫಾರಸ್ಸು ಮಾಡುತ್ತೇವೆ ಎಂದು ಆಕಾಂಕ್ಷಿಗಳಿಗೆ ಟಾಸ್ಕ್ ನೀಡಿದರು.
ಹೈಕಮಾಂಡ್ ಅಂತಿಮ ಅಭ್ಯರ್ಥಿ ಆಯ್ಕೆ ಪ್ರಕಟಿಸಿದ ನಂತರ ಎಲ್ಲ 57 ಅಕಾಂಕ್ಷಿಗಳು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಅಗರವಾಲ್ ಕರೆ ನೀಡಿದರು. ಇದೇ ವೇಳೆ ಕ್ಷೇತ್ರದಲ್ಲಿರುವ ಶಕ್ತಿಕೇಂದ್ರಗಳಿಗೆ ಉಸ್ತುವಾರಿಗಳನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನೇಮಕ ಮಾಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಅರವಿಂದ ಬೆಲ್ಲದ, ಮಹೇಶ್ ಟೆಂಗಿನಕಾಯಿ, ಬಿ.ಸಿ. ಪಾಟೀಲ್, ಶಂಕರಪಾಟೀಲ್ ಮುನೇನಕೊಪ್ಪ, ಶಿವರಾಜ್ ಸಜ್ಜನರ್, ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ್ ಪೂಜಾರ್ ಸೇರಿದಂತೆ ವಿವಿಧ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಇದನ್ನೂ ಓದಿ: ಬರದ ನಾಡಲ್ಲಿ ಡ್ರ್ಯಾಗನ್‌ಫ್ರೂಟ್ ಬೆಳೆದ ಫಾರ್ಮಾಸಿಸ್ಟ್; ಕೈತುಂಬಾ ಆದಾಯ ನೀಡುತ್ತಿರುವ ಹಣ್ಣಿನ ಬೆಳೆ - DRAGON FRUIT