ಮಂಗಳೂರು: ಶಿಬರೂರಿನ ಶ್ರೀ ಕೊಡಮಣಿತ್ತಾಯ ಕ್ಷೇತ್ರ ತಿಬಾರ್ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿದೆ. ಈ ಕ್ಷೇತ್ರಕ್ಕೆ ಬರುವ ಭಕ್ತರು ದೇವರಿಗೆ ಪ್ರಾರ್ಥನೆ ಸಲ್ಲಿಸುವುದರ ಜೊತೆಗೆ ಇಲ್ಲಿರುವ ತೀರ್ಥಬಾವಿಯ ನೀರನ್ನು ಕುಡಿಯುತ್ತಾರೆ. ಯಾವುದೇ ವಿಷ ಜಂತುಗಳು ಕಚ್ಚಿದರೆ ಈ ಬಾವಿಯ ನೀರನ್ನು ಸೇವಿಸಿ, ಇಲ್ಲಿನ ಮಣ್ಣನ್ನು ಪ್ರಸಾದವಾಗಿ ಹಣೆಗೆ ಹಚ್ಚಿದ್ದಲ್ಲಿ ವಿಷ ಇಳಿಯುತ್ತದೆ ಮತ್ತು ಪ್ರಾಣಾಪಾಯ ತಪ್ಪುತ್ತದೆ ಎಂಬುದು ಭಕ್ತರ ನಂಬಿಕೆ.
ಮಂಗಳೂರಿನ ಹೊರವಲಯದ ಶಿಬರೂರು ಶ್ರೀ ಕೊಡಮಣಿತ್ತಾಯ ದೇವಸ್ಥಾನದಲ್ಲಿ ಪವಿತ್ರ ಬಾವಿ ಇದ್ದು, ಈ ಬಾವಿಯಲ್ಲಿ ಸಿಗುವುದು ಮಾಮೂಲಿ ನೀರಲ್ಲ, ಅದು ಜೀವ ಉಳಿಸುವ ಸಂಜೀವಿನಿ. ಸ್ಥಳೀಯವಾಗಿ 'ತಿಬಾರ್' ಎಂದು ಕರೆಯಲ್ಪಡುವ ಇಲ್ಲಿ ವರ್ಷಕ್ಕೊಂದು ಬಾರಿ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವ ಬಹಳ ಪ್ರಸಿದ್ಧ. ಈ ಜಾತ್ರೆಗೆ ತುಳುನಾಡಿನ ಮೂಲೆಮೂಲೆಯಿಂದ ಜನ ಬರುತ್ತಾರೆ. 'ತಿಬಾರ್‌ದ ಆಯನ' ಅಂದರೆ ಊರು ಬಿಟ್ಟು ಪರವೂರಿನಲ್ಲಿದ್ದವರು ಬರುವಂತಹ ಜಾತ್ರೆ ಎಂದರ್ಥ. ಜಾತ್ರಾ ಮಹೋತ್ಸವದ ದಿನದಲ್ಲಿ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಬಂದು, ಪವಿತ್ರ ನೀರನ್ನು ತಮ್ಮ ಮನೆಗಳಿಗೆ ಕೊಂಡೊಯ್ಯತ್ತಾರೆ.
ಬಾವಿಯ ನೀರು ವಿಷಕ್ಕೆ ಪ್ರತಿವಿಷವಾಗಿ ಪರಿಣಾಮ ಬೀರಲು ಕಾರಣವಿದೆ. ಬಹಳ ಹಿಂದೆ ನಾಟಿ ವೈದ್ಯರಾಗಿದ್ದ ಈ ಪ್ರದೇಶದ ತ್ಯಾಂಪಣ್ಣ ಶೆಟ್ಟಿ ಎಂಬವರು ತನ್ನಲ್ಲಿದ್ದ ವಿಷ ಹೀರುವ ಕಲ್ಲೊಂದನ್ನು ಲೋಕದ ಜನತೆಯ ಒಳಿತಿಗಾಗಿ ಈ ಬಾವಿಗೆ ಹಾಕಿದ್ದರಂತೆ. ಆ ಬಳಿಕ ಬಾವಿಯ ನೀರು ಯಾವುದೇ ರೀತಿಯ ವಿಷವನ್ನು ಹೀರಿಕೊಳ್ಳುತ್ತದೆ ಅನ್ನುವ ನಂಬಿಕೆ ಹಿಂದಿನ ಕಾಲದಿಂದಲೂ ಇದೆ.
ಈ ನೀರಿನ ಸೇವನೆಯಿಂದ ವರ್ಷವಿಡೀ ದೇಹದಲ್ಲಿದ್ದ ವಿಷಕಾರಿ ಅಂಶಗಳು ಅಳಿದು ಹೋಗುತ್ತದೆ. ವಿಷ ಜಂತುಗಳು ಕಚ್ಚಿದ ಸಂದರ್ಭ ತಕ್ಷಣ ಈ ನೀರನ್ನು ಕುಡಿಸಿ ಬಳಿಕ ಕ್ಷೇತ್ರದ ಮಣ್ಣನ್ನು ನೀರಲ್ಲಿ ಬೆರಸಿ ಗಾಯಕ್ಕೆ ಹಚ್ಚಿದಲ್ಲಿ ವಿಷ ಕಾರುತ್ತದೆ ಅನ್ನುವ ನಂಬಿಕೆ ಇಂದಿಗೂ ಚಾಲ್ತಿಯಲ್ಲಿದೆ. ಉಬಾರ್ ಕ್ಷೇತ್ರದ ಮಣ್ಣು ಕೂಡ ಪ್ರಸಾದ ಎಂಬ ನಂಬುಗೆಯಿದೆ. ಇಲ್ಲಿಗೆ ಬರುವ ಭಕ್ತರು ತೀರ್ಥದೊಂದಿಗೆ ಇಲ್ಲಿನ ಮಣ್ಣನ್ನು ಕೊಂಡೊಯ್ಯುತ್ತಾರೆ. ಆ ಮೂಲಕ ಅದನ್ನು ಭಕ್ತಿಭಾವದಿಂದ ಪ್ರಸಾದವಾಗಿ ಹಣೆಗೆ ಹಚ್ಚಿಕೊಳ್ಳುತ್ತಾರೆ.
ಈ ಕುರಿತು ಪ್ರದ್ಯುಮ್ನ ರಾವ್ ಕೈಯೂರಗುತ್ತು ಮಾತನಾಡಿ, "ಹಿಂದಿನ ಕಾಲದಲ್ಲಿ ತ್ಯಾಂಪಣ್ಣ ಶೆಟ್ಟಿ ಎಂಬ ನಾಟಿವೈದ್ಯರು ತಮ್ಮಲ್ಲಿದ್ದ ಮೂರು ವಿಷ ಹೀರುವ ಕಲ್ಲನ್ನು ಉಬಾರ್ ಕ್ಷೇತ್ರದ ಬಾವಿಗೆ ಹಾಕಿದ್ದರು. ಆ ಬಳಿಕ ಈ ಬಾವಿಯ ನೀರು ವಿಷ ಹೀರುವ ನಂಬಿಕೆ ಪಡೆದುಕೊಂಡಿದೆ. ಯಾವುದೇ ವಿಷ ಜಂತುಗಳು ಕಚ್ಚಿದರೂ ಇಲ್ಲಿನ ತೀರ್ಥಬಾವಿಯ ನೀರನ್ನು ಸೇವಿಸಿದರೆ ವಿಷ ಹೋಗುತ್ತದೆ ಮತ್ತು ಇಲ್ಲಿನ ಮಣ್ಣಿನ ಪ್ರಸಾದವು ಒಳ್ಳೆಯದು ಮಾಡುತ್ತದೆ ಎಂಬ ನಂಬಿಕೆ ಇದೆ. ಈ ಕಾರಣಕ್ಕಾಗಿ ಈ ಕ್ಷೇತ್ರಕ್ಕೆ ಹೆಚ್ಚಿನ ಭಕ್ತರು ಬರುತ್ತಾರೆ" ಎಂದು ತಿಳಿಸಿದರು.
ಇದನ್ನೂ ಓದಿ: ಶ್ರೀ ಮಂಗಳಾದೇವಿ ಶಯನೋತ್ಸವ: ಮಲ್ಲಿಗೆಯಲ್ಲಿ ಮಂಗಳೆಗೆ ಸಿಂಗಾರ - Mangaladevi Shayanotsava