ಹುಬ್ಬಳ್ಳಿ: ಶನಿವಾರ ದಕ್ಷಿಣ ಉಪವಿಭಾಗದ ಒಟ್ಟು 14 ಪ್ರತ್ಯೇಕ ಸ್ಥಳಗಲ್ಲಿ ಚೆಕ್ ಪೋಸ್ಟ್ ಅಳವಡಿಸಿ, ಸೂಕ್ತ ದಾಖಲೆಗಳಿಲ್ಲದ 264 ವಾಹನಗಳನ್ನು ವಶಕ್ಕೆ ಪಡೆಯಾಗಿದೆ ಎಂದು ಹುಬ್ಬಳ್ಳಿ - ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿದ್ದಾರೆ.
ವಶ ಪಡಿಸಿಕೊಳ್ಳಲಾದ ವಾಹನಗಳನ್ನು ಪರಿಶೀಲಿಸಿ ಮಾತನಾಡಿದ ಅವರು, "ಹುಬ್ಬಳ್ಳಿ-ಧಾರವಾಡ ಮಹಾನಗರ ಕಮಿಷನರೇಟ್ ವ್ಯಾಪ್ತಿಯ ದಕ್ಷಿಣ ಉಪವಿಭಾಗದ 5 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮಾಡಲಾಗಿದೆ. ಹುಬ್ಬಳ್ಳಿ ಟೌನ್, ಘಂಟಿಕೇರಿ, ಕಸಬಾಪೇಟ್, ಹಳೇ ಹುಬ್ಬಳ್ಳಿ, ಬೆಂಡಿಗೇರಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಅತೀ ವೇಗ, ಸಂಚಾರಿ ನಿಯಮ ಉಲ್ಲಂಘನೆ, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವ ಬಗ್ಗೆ ಸಾರ್ವಜನಿಕರಿದಂದ ದೂರು ಬಂದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ" ಎಂದು ತಿಳಿಸಿದರು.
"ನಿನ್ನೆ ಮೊದಲ ಹಂತದ ಕಾರ್ಯಾಚರಣೆ ಮಾಡಲಾಗಿದೆ. ಸರಿಯಾದ ದಾಖಲಾತಿ ಇಟ್ಟುಕೊಳ್ಳಿ ಎಂದು ಸಾರ್ವಜನಿಕರಿಗೆ ಮನವಿ ಮಾಡುತ್ತೇನೆ. ಡಿಜಿ ಲಾಕರ್ನಿಂದಲೂ ನಮಗೆ ದಾಖಲೆಗಳನ್ನು ತೋರಿಸಲು ಅವಕಾಶ ಇದೆ. ಮಹಿಳೆಯರು ಮತ್ತು ವಿದ್ಯಾರ್ಥಿಗಳ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಕಾರ್ಯಾಚರಣೆ ಮಾಡಲಾಗಿದೆ. ಈಗಾಗಲೇ ನಾವು ಏರಿಯಾ ಡಾಮಿನೇಷನ್ ಕೂಡ ಮಾಡಿದ್ದೇವೆ. ಈ ಕಾರ್ಯಾಚರಣೆ ಸಬ್ ಡಿವಿಜನ್ ಹಂತದಲ್ಲಿರುತ್ತೆ. ಎಸಿಪಿ ಸೇರಿ ಎಲ್ಲಾ ಇನ್ಸ್ಪೆಕ್ಟರ್ ಚೆಕ್ಪೋಸ್ಟ್ ಹಾಕಿ ಕಾರ್ಯಾಚರಣೆ ನಡೆಸುತ್ತಿದ್ದಾರೆ" ಎಂದರು.
"ಈ ಕಾರ್ಯಾಚರಣೆ ಮುಂದುವೆರೆಯುತ್ತೆ. ಅಪ್ರಾಪ್ತ ಮಕ್ಕಳಿಗೆ ವಾಹನಗಳನ್ನು ಕೊಡಬೇಡಿ. ಮುಂಜಾಗ್ರತಾ ಕ್ರಮಗಳನ್ನು ಸಾರ್ವಜನಿಕರು ತೆಗೆದುಕೊಳ್ಳಬೇಕು. ಹಂತ ಹಂತವಾಗಿ ಕಾರ್ಯಾಚರಣೆ ಮಾಡುತ್ತಿದ್ದೇವೆ. ಈಗಾಗಲೇ ಮೂರು ಆಟೋಗಳನ್ನು ಸಹ ವಶಕ್ಕೆ ಪಡೆದಿದ್ದೇವೆ" ಎಂದು ಹೇಳಿದರು.
ಇದನ್ನೂ ಓದಿ: ಚಿಕ್ಕೋಡಿ: ಸಿನಿಮೀಯ ಶೈಲಿಯಲ್ಲಿ ನಸುಕಿನ ಜಾವ ಕಳ್ಳರನ್ನು ಹಿಡಿದ ಗ್ರಾಮಸ್ಥರು