ಬೆಂಗಳೂರು: ಸನಾತನ ಧರ್ಮಕ್ಕೆ ಅಪಮಾನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಸಚಿವರಾದ ಉದಯನಿಧಿ ಸ್ಟಾಲಿನ್ ಅವರಿಗೆ ಬೆಂಗಳೂರಿನ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಸಚಿವ ಉದಯನಿಧಿ ಸ್ಟಾಲಿನ್ ಸೇರಿ ನಾಲ್ವರ ವಿರುದ್ಧ ದಾಖಲಿಸಲಾಗಿರುವ ಕ್ರಿಮಿನಲ್ ಪ್ರಕರಣದ ವಿಚಾರಣೆ ಮಾಡಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ (ಮ್ಯಾಜಿಸ್ಟ್ರೇಟ್) ಕೋರ್ಟ್ ಈ ಆದೇಶ ನೀಡಿದೆ.
ತಮಿಳುನಾಡಿನ ಬರಹಗಾರ ಎರಡನೇ ಆರೋಪಿ ಎಸ್ ವೆಂಕಟೇಶ್, ತಮಿಳುನಾಡಿನ ಪ್ರಗತಿಪರ ಬರಹಗಾರರು ಮತ್ತು ಕಲಾವಿದರ ಸಂಘದ ರಾಜ್ಯಾಧ್ಯಕ್ಷ ಮೂರನೇ ಆರೋಪಿ ಮಧುಕರ್ ರಾಮಲಿಂಗಮ್, ಸಂಘದ ಕಾರ್ಯದರ್ಶಿ ಹಾಗೂ ನಾಲ್ಕನೇ ಆರೋಪಿ ಆದವನ್ ಡಿಚನ್ಯ ಅವರಿಗೆ ಖುದ್ದು ಹಾಜರಾಗಲು ಆದೇಶಿಸಿ ವಿಚಾರಣೆಯನ್ನು ಏಪ್ರಿಲ್ 26ಕ್ಕೆ ಮುಂದೂಡಿದೆ.
ಪ್ರಕರಣದ ಹಿನ್ನೆಲೆ: 2023ರ ಸೆಪ್ಟೆಂಬರ್ 4ರಂದು ಚೆನ್ನೈನ ತೇನಂ ಪೇಟೆಯಲ್ಲಿ ನಡೆದಿದ್ದ ಸನಾತನ ಧರ್ಮ ನಿರ್ಮೂಲನಾ ಸಮಾವೇಶದಲ್ಲಿ ಮಾತನಾಡಿದ್ದ ಸಚಿವ, ಸನಾತನ ಧರ್ಮವನ್ನು ಡೆಂಘೀ, ಮಲೇರಿಯಾ ಹಾಗೂ ಕೊರೋನಾಕ್ಕೆ ಹೋಲಿಕೆ ಮಾಡಿ ಸಂಪೂರ್ಣ ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು. ಈ ಸುದ್ದಿಯನ್ನು ವಿಜಯ ತರಂಗ ಕನ್ನಡ ಪತ್ರಿಕೆ ಪ್ರಕಟಿಸಿತ್ತು. ಇದನ್ನು ಆಧರಿಸಿ ಬೆಂಗಳೂರಿನ ಪರಮೇಶ ಅವರು ಖಾಸಗಿ ದೂರು ದಾಖಲಿಸಿದ್ದರು.
ಇದನ್ನೂ ಓದಿ:ಪಾಕಿಸ್ತಾನ್ ಪರ ಘೋಷಣೆ ಕೂಗಿದ ಆರೋಪ: ಮೂವರ ಬಂಧನ