ಚಿಕ್ಕಮಗಳೂರು: ಮನೆಯಲ್ಲಿದ್ದವರ ಕಣ್ಣಿಗೆ ಖಾರದ ಪುಡಿ ಎರಚಿ, ಕೈ ಗಾಯಗೊಳಿಸಿ ದರೋಡೆ ಮಾಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಳಿಗನಾಡು ಸಮೀಪದ ಹೆಬ್ಬಾರಟ್ಟಿ ಗ್ರಾಮದಲ್ಲಿ ನಡೆದಿದೆ. ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಅನಂತರಾಮ್ ಹೆಬ್ಬಾರ್ ಎಂಬವರ ಮನೆಗೆ ನುಗ್ಗಿದ ನಾಲ್ವರು ಯುವಕರು ಮಾರಕಾಸ್ತ್ರಗಳನ್ನು ತೋರಿಸಿ ಹಣ ನೀಡುವಂತೆ ಬೆದರಿಸಿದ್ದಾರೆ. ಬಳಿಕ ಮನೆಯಲ್ಲಿದ್ದ 5 ಲಕ್ಷ ರೂ. ಹಾಗೂ ಮಹಿಳೆಯ ಕೊರಳಲ್ಲಿದ್ದ 30 ಗ್ರಾಂ ತೂಕದ ಮಾಂಗಲ್ಯ ಸರ ದೋಚಿದ್ದಾರೆ. ಈ ವೇಳೆ ಮನೆ ಮಾಲೀಕರನ್ನು ಬಿಡಿಸಲು ಬಂದ ಕೆಲಸಗಾರ ಮಾಣಿಭಟ್ಟ ಎಂಬವರ ಕೈಯನ್ನು ದರೋಡೆಕೋರರು ಕಡಿದಿದ್ದಾರೆ.
ಇತ್ತ ಮನೆಯವರು ಕೂಗಾಡುತ್ತಿದ್ದಂತೆ ಅಕ್ಕಪಕ್ಕದ ತೋಟಗಳಲ್ಲಿದ್ದ ಕಾರ್ಮಿಕರು ಮನೆ ಬಳಿ ಆಗಮಿಸುವಷ್ಟರಲ್ಲಿ ಆರೋಪಿಗಳು ಕಾರಿನಲ್ಲಿ ಪರಾರಿಯಾಗಿದ್ದಾರೆ. ಆದರೆ ಬಂದಿದ್ದ ನಾಲ್ವರು ಆರೋಪಿಗಳಲ್ಲಿ ಮೂವರು ಓಡಿ ಹೋಗಿದ್ದು, ಓರ್ವ ಆರೋಪಿ ಅರಮನೆ ತಲಗೂರು ಎಂಬ ಗ್ರಾಮದ ಸಮೀಪ ಅರಣ್ಯ ಪ್ರದೇಶದಲ್ಲಿ ಅವಿತು ಕುಳಿತಿದ್ದನು. ಆತನನ್ನು ಹಿಂಬಾಲಿಸಿದ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಗಾಯಾಳು ಮಾಣಿಭಟ್ಟರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಗೊಳಗಾಗಿದ್ದ ಅನಂತರಾಮ್ ಹೆಬ್ಬಾರ್ ಅವರನ್ನು ಮೂಡಿಗೆರೆ ತಾಲೂಕು ಆಸ್ಪತ್ರೆಗೆ ಸೇರಿಸಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಬಾಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಓರ್ವ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಪ್ರತಿಷ್ಠಿತ ಗೋಲ್ಡ್ ಕಂಪನಿಗೆ ಕನ್ನ ಹಾಕಿದ ಖದೀಮರು; ಒಡೆದಿದ್ದ ಸಿಸಿಟಿವಿ ಡಿವಿಆರ್ನಲ್ಲಿ ಮುಖಚಹರೆ ಗೋಚರ