ಶಿವಮೊಗ್ಗ: ರಾಜ್ಯ ಬಿಜೆಪಿ ಪಕ್ಷದ ಅಧ್ಯಕ್ಷ ಸ್ಥಾನವನ್ನು ಒಬಿಸಿಗೆ ನೀಡುವುದಾದರೆ, ನಾನು ಪಕ್ಷದ ಜವಾಬ್ದಾರಿ ವಹಿಸಿಕೊಳ್ಳಲು ತಯಾರಿದ್ದೇನೆ ಎಂದು ಹೈಕಮಾಂಡ್ ನಾಯಕರಿಗೆ ಹೇಳಿದ್ದೇನೆ ಎಂದು ಮಾಜಿ ಸಚಿವ ಕುಮಾರ ಬಂಗಾರಪ್ಪ ತಿಳಿಸಿದರು.
ಹರಿಯಾಣ ಚುನಾವಣೆಯಲ್ಲಿ ಬಿಜೆಪಿಯು ಒಬಿಸಿ ಸಂಘಟನೆ ಮಾಡಿದ ರೀತಿ ಮತ್ತು ರಾಜ್ಯದಲ್ಲಿ ಅಹಿಂದ ಹೆಸರಲ್ಲಿ ಕಾಂಗ್ರೆಸ್ ಸಂಘಟನೆ ವಿರುದ್ಧವಾಗಿ ಹಿಂದುಳಿದ ವರ್ಗ ಮತ್ತು ಇತರೆ ಸಮುದಾಯಗಳ ಸಂಘಟನೆ ವಿಚಾರವಾಗಿ ಪಕ್ಷ ಒಂದು ನಿರ್ಧಾರ ತೆಗೆದುಕೊಂಡರೆ ಅದರ ಜವಾಬ್ದಾರಿ ಹೊರಲು ತಯಾರಿದ್ದೇನೆ ಎಂದು ಹೇಳಿರುವುದಾಗಿ ಶಿವಮೊಗ್ಗದಲ್ಲಿ ಮಾಧ್ಯಮಗಳಿಗೆ ಕುಮಾರ ಬಂಗಾರಪ್ಪ ಪ್ರತಿಕ್ರಿಯೆ ನೀಡಿದರು.
ವಕ್ಫ್ ಹೋರಾಟದ ಕುರಿತು: ಪಕ್ಷದ ಕೇಂದ್ರದ ವರಿಷ್ಠರು ಎಲ್ಲದರ ಬಗ್ಗೆಯೂ ಗಮನ ಹರಿಸಿದ್ದಾರೆ. ಇದರ ಕುರಿತು ನಮ್ಮ ವರಿಷ್ಠರು ಶೀಘ್ರ ಹಾಗೂ ತೀಕ್ಷ್ಣವಾದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಪಕ್ಷದ ಒಳಗಿರುವ ಆಂತರಿಕ ಪ್ರಜಾಪ್ರಭುತ್ವದ ಸಂಘಟನೆಯ ಚುನಾವಣೆಗಳು ಬೂತ್ ಮಟ್ಟದಿಂದ ರಾಷ್ಟ್ರದ ಅಧ್ಯಕ್ಷರ ತನಕ ಸಂಘಟನಾ ಪರ್ವ ನಡೆಯುತ್ತಿದೆ. ಅದಕ್ಕೆ ಪೂರಕವಾದ ಬೇಕಾದ ವಾತಾವರಣವನ್ನು ಸೃಷ್ಟಿ ಮಾಡಿ ಕೊಡುತ್ತಾರೆ ಎಂದರು.
ದಾವಣಗೆರೆಯಲ್ಲಿ ವಕ್ಫ್ ಸಮಾವೇಶ: ದಾವಣಗೆರೆಯಲ್ಲಿ ವಕ್ಫ್ ವಿಚಾರವಾಗಿ ಒಂದು ಸಮಾವೇಶ ಮಾಡಬೇಕೆಂದು ನಿರ್ಧಾರ ಮಾಡಿದ್ದೇವೆ. ಜೆಪಿಸಿ ಸಮಿತಿ ಮುಂದೆ 10 ಜಿಲ್ಲೆಗಳ ವರದಿಯನ್ನು ನೀಡಿದ್ದೇವೆ. ನಾಡಿದ್ದು ಬಳ್ಳಾರಿಗೆ ಹೋಗಲಿದ್ದೇವೆ. ಜೊತೆಗೆ ಉಳಿದಿರುವಂತಹ ಜಿಲ್ಲೆಗೂ ಭೇಟಿ ನೀಡಲಿದ್ದು, 65 ಸಾವಿರ ಆಸ್ತಿಗಳ ಸುಮಾರು 2.5 ಲಕ್ಷ ಎಕರೆ ಜಾಗವನ್ನು ಭದ್ರ ಮಾಡುವ ಜವಾಬ್ದಾರಿ ಇದೆ. ರೈತರ ಹಾಗೂ ಸಾರ್ವಜನಿಕರ ಆಸ್ತಿಯನ್ನು ಭದ್ರ ಮಾಡುವ ಉದ್ದೇಶವಿದೆ ಎಂದು ಕುಮಾರ್ ಬಂಗಾರಪ್ಪ ತಿಳಿಸಿದರು.
ರೇಣುಕಾಚಾರ್ಯ ಸಭೆ ಮಾಹಿತಿ ಇಲ್ಲ: ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ನೇತೃತ್ವದಲ್ಲಿ ಮಾಜಿ ಶಾಸಕರು, ಸಚಿವರು ದಾವಣಗೆರೆಯಲ್ಲಿ ಸಭೆ ನಡೆಸಿರುವ ಕುರಿತು ನನಗೆ ಮಾಹಿತಿ ಇಲ್ಲ. ಅದರ ಬಗ್ಗೆ ಕಮೆಂಟ್ ಮಾಡಲು ಇಷ್ಟವಿಲ್ಲ ಎಂದರು.
ವಕ್ಫ್ ಆಸ್ತಿ ವಿಚಾರವಾಗಿ ಅನ್ವರ್ ಮಾಣಪ್ಪಾಡಿ ಅವರಿಗೆ ವಿಜಯೇಂದ್ರ 150 ಕೋಟಿ ರೂ. ಆಮಿಷವೊಡ್ಡಿದ್ದರು ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಇದು ಸುಳ್ಳು ಎಂದು ಮಾಣಪ್ಪಾಡಿ ಅವರೇ ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಪ್ರಧಾನಿಗೆ ಪತ್ರ ಬರೆದಿದ್ದರೆ, ಅವರು ಆಗಿನ ಸಮಯಕ್ಕೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಆದ್ದರಿಂದ ಕಾಂಗ್ರೆಸ್ನವರು ಸುಳ್ಳು ಹೇಳಿಕೆ ನೀಡಿದ್ದಾರೆ ಎಂದರು.
ಇದನ್ನೂ ಓದಿ: '150 ಕೋಟಿ ರೂ ಆಫರ್ ಆರೋಪದಲ್ಲಿ ತರ್ಕವಿಲ್ಲ, ಕಾಂಗ್ರೆಸ್ ಪಕ್ಷವನ್ನು ನಾನೇಕೆ ಬಚಾವ್ ಮಾಡಲಿ?'