ಉಡುಪಿ: ಅಪರೂಪದ ಧೂಮಕೇತು ಅಟ್ಲಾಸ್ ಇದೀಗ ಸೆಪ್ಟೆಂಬರ್- ಅಕ್ಟೋಬರ್ ತಿಂಗಳಲ್ಲಿ ಮತ್ತೆ ಆಕಾಶದಲ್ಲಿ ಕಾಣಿಸಿಕೊಳ್ಳಲಿದೆ ಎಂದು ಉಡುಪಿಯ ಖಗೋಳ ಶಾಸ್ತ್ರಜ್ಞ, ವಿಜ್ಞಾನಿ ಡಾ. ಎ. ಪಿ. ಭಟ್ ತಿಳಿಸಿದರು.
2023ರ ಜನವರಿ ತಿಂಗಳಲ್ಲಿ ದೂರದರ್ಶಕದಲ್ಲಿ ಸುಮಾರು 100 ಕೋಟಿ ಕಿ.ಮೀ. ದೂರದಲ್ಲಿ ಇದನ್ನು ಮೊದಲು ನೋಡಿ ಶತಮಾನದ ಧೂಮಕೇತು ಎಂದು ಬಣ್ಣಿಸಲಾಗಿತ್ತು. ಆದರೆ ಈಗ ಅದನ್ನು ವರ್ಷದ ಧೂಮಕೇತು ಎಂದು ಅಂದಾಜಿಸಲಾಗಿದೆ. ಈ ಧೂಮಕೇತುವಿನ ಹೆಸರು ಸುಚಿನ್ಸನ್- ಅಟ್ಲಾಸ್ (ಕಾಮೆಟ್ ಸಿ/2023 ಎ3 ಸುಚಿನ್ಸನ್ ಅಟ್ಲಾಸ್). ಇದು ಸಪ್ಟೆಂಬರ್ ತಿಂಗಳ ಕೊನೆಯ ವಾರದಲ್ಲಿ ಸೂರ್ಯೋದಯಕ್ಕೆ ಮುನ್ನ ಬರಿಗಣ್ಣಿಗೆ ಕಾಣಲಿದೆ ಎಂದು ಅವರು ಹೇಳಿದರು.
ಸೌರವ್ಯೂಹದ ಹೊರವಲಯ ಊರ್ಸ್ ಕೌಡ್‌ನಿಂದ (ಸುಮಾರು 3 ಜ್ಯೋತಿರ್ವರ್ಷ=30 ಟ್ರಿಲಿಯನ್ ಕಿ.ಮೀ.) ಹೊರಟ ಈ ಧೂಮಕೇತು ಸೆಕೆಂಡಿಗೆ ಸುಮಾರು 80 ಕಿ.ಮೀ. ವೇಗದಲ್ಲಿ ಕ್ರಮಿಸುತ್ತಿದೆ. ಸಪ್ಟೆಂಬರ್ 27ರಂದು ಸೂರ್ಯನನ್ನು ಸಮೀಪಿಸಲಿದೆ ಎಂದು ವಿಜ್ಞಾನಿ ಮಾಹಿತಿ ನೀಡಿದರು.
ಸುಮಾರು 80 ಸಾವಿರ ವರ್ಷಕ್ಕೊಮ್ಮೆ ಸೂರ್ಯನನ್ನು ಸುತ್ತುವ ಈ ಧೂಮಕೇತು ಸೂರ್ಯನಿಂದ ಹಿಂದಿರುಗುವಾಗ ಅಕ್ಟೋಬರ್ನಲ್ಲಿ ಪಶ್ಚಿಮ ದಿಕ್ಕಿನ ಆಕಾಶದಲ್ಲಿ ಬರಿಗಣ್ಣಿಗೆ ಕಾಣಿಸಿಕೊಳ್ಳಲಿದೆ. ಇದು ಅಕ್ಟೋಬರ್ 12ರಂದು ಭೂಮಿಗೆ ಸಮೀಪಿಸಲಿದೆ. 2023ರ ಜನವರಿಯಲ್ಲಿ ಪ್ರಥಮ ಬಾರಿಗೆ ದೂರದರ್ಶಕದಲ್ಲಿ ನೋಡಿ 2024ರ ಸೆಪ್ಟೆಂಬರ್- ಅಕ್ಟೋಬರ್‌ಗೆ ಇದೊಂದು ಶತಮಾನದ ಧೂಮಕೇತುವಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಈ ವರ್ಷದ ಫೆಬ್ರವರಿ ಸುಮಾರಿಗೆ ಇದು ಕಾಣೆಯಾದಾಗ ಧೂಮಕೇತು ಸಿಡಿದು ಹೋಯಿತು ಎನ್ನಲಾಯ್ತು. ಈಗ ಇದರ ತುಂಡು ಅಥವಾ ಮೂಲ ಧೂಮಕೇತು ದೂರದರ್ಶಕಕ್ಕೆ ಪುನಃ ಗೋಚರಿಸಿದಾಗ ಬರಿಗಣ್ಣಿಗೆ ಕಾಣುವ ವರ್ಷದ ಧೂಮಕೇತುವಾಗಲಿದೆ ಎಂದು ಅಂದಾಜಿಸಲಾಗಿದೆ ಅಂತಾ ಡಾ. ಎ.ಪಿ. ಭಟ್ ಈಟಿವಿ ಭಾರತಕ್ಕೆ ಮಾಹಿತಿಯನ್ನು ವಿವರಿಸಿದರು.
ಓದಿ: ಟಾಟಾ ಪಂಚ್ ಅಪ್‌ಗ್ರೇಡ್ ಮಾಡೆಲ್ ಮಾರುಕಟ್ಟೆಗೆ ಬಿಡುಗಡೆ: ಬೆಲೆ, ವೈಶಿಷ್ಟ್ಯಗಳ ವಿವರ - TATA Punch Upgrade Model