ಬೆಂಗಳೂರು: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ಸಿ)ದ ದರ ಇಳಿಕೆ ನಿರ್ಧಾರವು ಸಂಕಷ್ಟಕ್ಕೆ ಸಿಲುಕಿದ್ದ ಕೈಗಾರಿಕೆಗಳಿಗೆ ಹೊಸ ದಿಕ್ಕನ್ನು ತೋರಿಸಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ ಹೇಳಿದ್ದಾರೆ.
ಹೊಸ ವಿದ್ಯುತ್ ದರದ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ವಿಶೇಷವಾಗಿ ಕೈಗಾರಿಕಾ ಮತ್ತು ವಾಣಿಜ್ಯ ದರಗಳ ಕಡಿತದ ವರ್ಗಗಳು ಸ್ವಾಗತಾರ್ಹ ಕ್ರಮವಾಗಿದೆ. ಆಯೋಗದ ಈ ನಿರ್ಧಾರ ಸಕಾರಾತ್ಮಕವಾಗಿದೆ. ಹೊಸ ವಿದ್ಯುತ್ ದರಗಳು ಏಪ್ರಿಲ್ 1 ರಿಂದ ಅನ್ವಯವಾಗುತ್ತಿದ್ದು, ಆದೇಶವು ಮಹತ್ವದ ಮೈಲಿಗಲ್ಲನ್ನು ಸೂಚಿಸುತ್ತದೆ. ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸುವುದು ಮತ್ತು ಪರಿಹಾರವನ್ನು ಒದಗಿಸುವುದರ ಮೂಲಕ ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕದ ಕೈಗಾರಿಕೆ ಮತ್ತು ಇತರ ವ್ಯಾಪಾರಗಳಿಗೆ ಹೊಸ ದಿಕ್ಕನ್ನು ತೋರಿಸಿದೆ ಎಂದು ರಮೇಶ್ ಚಂದ್ರ ಲಹೋಟಿ ಶ್ಲಾಘಿಸಿದ್ದಾರೆ.
ಗಮನಾರ್ಹ ಅಂಶಗಳಲ್ಲಿ ಕೈಗಾರಿಕಾ ಮತ್ತು ವಾಣಿಜ್ಯದ ಮೇಲಿನ ಹೊರೆಯನ್ನು ಕಡಿಮೆ ಮಾಡಲಾಗಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮಕ್ಕೆ 1486.23 ಕೋಟಿ ರೂ. ಪಿಂಚಣಿ ಮತ್ತು ಗ್ರಾಚ್ಯುಟಿಯ ಸರ್ಕಾರದ ಭಾಗವನ್ನು ನಿರಾಕರಿಸಲಾಗಿದೆ. ಇದನ್ನು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಆಕ್ಷೇಪಣೆಯಲ್ಲಿ ಈ ಮೊದಲು ತಿಳಿಸಿತ್ತು. ಆಯೋಗ ಈ ಬಗ್ಗೆ ಗಮನಿಸಿರುವುದು ಸಂತಸ ತಂದಿದೆ ಎಂದು ರಮೇಶ್ ಚಂದ್ರ ಲಹೋಟಿ ವಿವರಿಸಿದ್ದಾರೆ.
ಗ್ರಾಹಕರಿಗೆ ಪ್ರಿಪೇಯ್ಡ್ ಮಾಪಕವನ್ನು ಒದಗಿಸುವ ಬಗ್ಗೆ ನೀಡಿರುವ ನಿರ್ದೇಶನ ಗ್ರಾಹಕರಿಗೆ ಉಪಯುಕ್ತವಾಗಿದೆ. 2 ತಿಂಗಳ ಭದ್ರತಾ ಠೇವಣೆಗಳ ಹೊರೆಯನ್ನು 1 ತಿಂಗಳ ಭದ್ರತಾ ಠೇವಣಿಗೆ ಇಳಿಸಲಾಗಿರುವ ಗ್ರಾಹಕ ಸ್ನೇಹಿ ಆದೇಶವನ್ನು ಎಫ್‍ಕೆಸಿಸಿಐ ಸ್ವಾಗತಿಸುತ್ತದೆ ಎಂದು ರಮೇಶ್ ಚಂದ್ರ ಲಹೋಟಿ ತಿಳಿಸಿದ್ದಾರೆ.
ಇದನ್ನೂ ಓದಿ : ಶಾಂತಿಸಾಗರದಲ್ಲಿ ನೀರು ಸಂಗ್ರಹ ಇಳಿಕೆ; ಅನಧಿಕೃತ ಪಂಪ್‍ಸೆಟ್ ತೆರವಿಗೆ ಡಿಸಿ ಸೂಚನೆ