ಶಿವಮೊಗ್ಗ: "ಬಿಜೆಪಿಯವರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಾಗಿದ್ದಾರೆ. ಭ್ರಷ್ಟ ರಾಜಕಾರಣಿಗಳು, ಅತ್ಯಾಚಾರಿಗಳೇ ಆಗಿದ್ದರೂ ಅವರನ್ನು ರಕ್ಷಣೆ ಮಾಡುತ್ತಿದ್ದಾರೆ. ಒಬ್ಬ ಸಾಮೂಹಿಕ ಅತ್ಯಾಚಾರಿಗೆ ದೇಶ ತೊರೆಯಲು ಅನುಕೂಲ ಮಾಡಿಕೊಡುವುದೇ ಪ್ರಧಾನಿ ಮೋದಿಯವರ ಗ್ಯಾರಂಟಿ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ನಗರದ ಅಲ್ಲಮಪ್ರಭು ಮೈದಾನದಲ್ಲಿ ಇಂದು ನಡೆದ ಲೋಕಸಭೆ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
''ಪ್ರಜ್ಚಲ್ ರೇವಣ್ಣ 400 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ, ವಿಡಿಯೋ ಮಾಡಿದ್ದಾರೆ. ಇದು ಕೇವಲ ಲೈಂಗಿಕ ಹಗರಣವಲ್ಲ. ಇದನ್ನು ಮಾಸ್ ರೇಪ್ ಎನ್ನುತ್ತಾರೆ. ಕರ್ನಾಟಕದ ಜನತೆಯ ಮುಂದೆ ಪ್ರಧಾನಿ ಮೋದಿ ವೇದಿಕೆ ಮೇಲೆಯೇ ಈ ಮಾಸ್ ರೇಪಿಸ್ಟ್ ಅನ್ನು ಬೆಂಬಲಿಸಿದ್ದಾರೆ. ಅಷ್ಟೇ ಅಲ್ಲ, ಪ್ರಜ್ವಲ್ ರೇವಣ್ಣಗೆ ಮತ ನೀಡಿದರೆ, ನನಗೆ ನೆರವಾಗುತ್ತದೆ ಎಂದು ಕರ್ನಾಟಕದ ಜನತೆಗೆ ಹೇಳಿದ್ದಾರೆ. ಪ್ರಧಾನಿ ಯಾವಾಗ ನಿಮ್ಮಿಂದ (ಜನತೆ) ಮತ ಕೇಳುತ್ತಿದ್ದರೋ, ಆಗ ಅವರಿಗೆ ಪ್ರಜ್ವಲ್ ರೇವಣ್ಣ ಏನು ಮಾಡಿದ್ದರು ಎಂಬುದು ಅವರಿಗೆ ಗೊತ್ತಿತ್ತು. ಇದನ್ನು ಕರ್ನಾಟಕದ ಮಹಿಳೆಯರು, ಜನತೆ ಅರ್ಥ ಮಾಡಿಕೊಳ್ಳಬೇಕು'' ಎಂದರು.
ದೇಶದ ಮಹಿಳೆಯರಲ್ಲಿ ಮೋದಿ, ಅಮಿತ್ ಶಾ ಕ್ಷಮೆ ಕೇಳಲಿ: ''ಬಿಜೆಪಿ ಮತ್ತು ಬಿಜೆಪಿಯ ಪ್ರತಿಯೊಬ್ಬ ನಾಯಕರಿಗೂ ಪ್ರಜ್ವಲ್ ಒಬ್ಬ ಮಾಸ್ ರೇಪಿಸ್ಟ್ ಎಂಬುದು ಗೊತ್ತಿತ್ತು. ಇದಾದ ಮೇಲೂ ಪ್ರಜ್ವಲ್ಗೆ ಸಹಕಾರ ನೀಡಿ, ಅವರ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಹೀಗಾಗಿ ಪ್ರಧಾನಿ ಮೋದಿ ಹಾಗು ಅಮಿತ್ ಶಾ ದೇಶದ ಪ್ರತಿ ಮಹಿಳೆಯರಲ್ಲೂ ಕ್ಷಮೆ ಕೇಳಬೇಕು" ಎಂದು ವಾಗ್ದಾಳಿ ನಡೆಸಿದರು.
''ಕೆಲವು ದಿನಗಳ ಹಿಂದೆ ಬಿಜೆಪಿ ಅಧ್ಯಕ್ಷರು ಸಮಾನತೆ ಬೇಕೆನ್ನುವವರು ನಕ್ಸಲರು ಎಂದು ಕರೆದಿದ್ದರು. ಈ ಮೂಲಕ ಇಡೀ ದೇಶದ ಮುಂದೆ ಸಂವಿಧಾನದ ಮೇಲೆ ಮತ್ತೊಮ್ಮೆ ದಾಳಿ ಮಾಡಿದ್ದಾರೆ. ಬಿಜೆಪಿ ಅಧ್ಯಕ್ಷರು ಸಮಾನತೆ ಬೇಡ ಅಂತಿದ್ದರೆ, ಮೋದಿ ಸಂವಿಧಾನ ಉಳಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಬಿಜೆಪಿಯುವರು ಸಂವಿಧಾನ ತಿರುಚುವ ಉದ್ದೇಶ ಹೊಂದಿದ್ದಾರೆ'' ಎಂದು ಆಕ್ರೋಶ ವ್ಯಕ್ತಪಡಿಸಿದರು.
22 ಜನರಿಗಷ್ಟೇ ಮೋದಿ ಕೆಲಸ: ''ಕಳೆದ ಹತ್ತು ವರ್ಷಗಳಿಂದ ಕೇವಲ 22 ಜನರಿಗಾಗಿ ಮಾತ್ರ ಮೋದಿ ಕೆಲಸ ಮಾಡಿದ್ದಾರೆ. ದೇಶದ ಸಂಪತ್ತು ಅದಾನಿ, ಅಂಬಾನಿಯವರ ಜೇಬು ಸೇರಿದೆ. ಈ 22 ಜನರ 16 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದಾರೆ. ಮೋದಿ 22 ಜನ ಶ್ರೀಮಂತರಿಗೆ ಕೆಲಸ ಮಾಡಿದ್ದರೆ, ನಾವು ಈ ದೇಶದ ಕೋಟ್ಯಂತರ ಜನರಿಗಾಗಿ ಕೆಲಸ ಮಾಡುತ್ತೇವೆ'' ಎಂದು ರಾಹುಲ್ ತಿಳಿಸಿದರು.
ಇದನ್ನೂ ಓದಿ: 'ಪಾತ್ರವಲ್ಲ, ಅಭಿನಯ ಮುಖ್ಯ', ಪ್ರಜ್ವಲ್ ಪ್ರಕರಣದಲ್ಲಿ ಇಡೀ ದೇವೇಗೌಡ ಕುಟುಂಬ ರಾಜಕೀಯದಿಂದ ಹೊರ ಇರಬೇಕು: ಮೊಯ್ಲಿ