ಬೆಳಗಾವಿ: ಹಿಂಡಲಗಾ ಜೈಲಿನಲ್ಲಿದ್ದ ಭಯೋತ್ಪಾದಕ ಅಫ್ಸರ್ ಪಾಷಾ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದ ವಿಚಾರ ಸೇರಿ ಸಾಕಷ್ಟು ವಿಚಾರಗಳಿಂದ ಸದ್ದು ಮಾಡಿತ್ತು. ಈಗ ನಿಯಮ ಪಾಲಿಸು ಎಂದು ಹೇಳಿದ್ದಕ್ಕೆ ಜೈಲಿನ ಸಿಬ್ಬಂದಿ ಮೇಲೆಯೇ ಕೈದಿಗಳು ಹಲ್ಲೆ ಮಾಡಿರುವ ಘಟನೆಯಿಂದ ಮತ್ತೆ ಸುದ್ದಿಯಾಗಿದೆ.
ಹೌದು, ಹಿಂಡಲಗಾ ಜೈಲಿನಲ್ಲಿ ಸಿಬ್ಬಂದಿಗಳಿಗೆ ರಕ್ಷಣೆ ಇಲ್ಲದ ಸ್ಥಿತಿ ನಿರ್ಮಾಣವಾಗಿದ್ದು, ಜೀವ ಭಯದಲ್ಲೇ ಕೆಲಸ ಮಾಡುವಂತಾಗಿದೆ. ಕಾರಾಗೃಹದ ನಿಯಮಗಳನ್ನು ಪಾಲಿಸುವಂತೆ ಹೇಳಿದ್ದಕ್ಕೆ ಜೈಲಿನಲ್ಲಿ ಕೈದಿಗಳು ಗೂಂಡಾಗಿರಿ ಪ್ರದರ್ಶಿಸಿದ್ದಾರೆ. ಹಿಂಡಲಗಾ ಜೈಲಿನ ವಾರ್ಡರ್ ವಿನೋದ್ ಲೋಕಾಪುರ ಹಲ್ಲೆಗೊಳಗಾದವರು. ಕೈದಿ ರಾಹಿಲ್ ಅಲಿಯಾಸ್ ರೋಹನ್ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ.
ಹಾಸನದಿಂದ ಗಡಿಪಾರಾಗಿ ಬೆಳಗಾವಿ ಹಿಂಡಲಗಾ ಜೈಲಿಗೆ ಈ ಕೈದಿ ಶಿಫ್ಟ್ ಆಗಿದ್ದಾನೆ. ಅತೀ ಭದ್ರತೆ ವಿಭಾಗದಲ್ಲಿದ್ದ ಕೈದಿ ರೋಹನ್ ಆಸ್ಪತ್ರೆಗೆ ಹೋಗಲು ಸ್ಥಳೀಯ ಸಿಬ್ಬಂದಿ ಅನುಮತಿ ಪಡೆಯಬೇಕಾಗುತ್ತದೆ. ತಡವಾಗಿ ಅನುಮತಿ ನೀಡಿದ್ದಾರೆ ಎನ್ನುವ ಕಾರಣಕ್ಕೆ ಹೊರಬಂದು ವಾರ್ಡರ್ ವಿನೋದ್ ಮೇಲೆ ಹಲ್ಲೆ ಮಾಡಿದ್ದಾನೆ. ಕಾಲಿನಿಂದ ಒದ್ದು, ಕೈಯಿಂದ ಹಿಗ್ಗಾಮಗ್ಗಾ ಹಲ್ಲೆ ಮಾಡಿದ್ದಾನೆ. ತೀವ್ರವಾಗಿ ಗಾಯಗೊಂಡಿರುವ ವಿನೋದ್ ಅವರಿಗೆ ಸದ್ಯ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಕೈದಿಗಳ ಗೂಂಡಾಗಿರಿಗೆ ಬೇಸತ್ತು ಕೆಲಸಕ್ಕೆ ಬರಲು ಸಿಬ್ಬಂದಿಗಳು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆಯೂ ಸಿಬ್ಬಂದಿ ಮೇಲೆ ಹಲ್ಲೆಯಾಗಿದ್ದು, ಕ್ರಮ ಆಗಿಲ್ಲ. ಮೇಲಾಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಗಾಯಾಳು ವಾರ್ಡರ್ ವಿನೋದ ಮನವಿ ಮಾಡಿದ್ದಾರೆ.
ಒಟ್ಟಿನಲ್ಲಿ ಕೆಲ ದಿನಗಳಿಂದ ನಾಲ್ಕೈದು ಬಾರಿ ಸಿಬ್ಬಂದಿ ಮೇಲೆ ಕೈದಿಗಳು ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಸಿಬ್ಬಂದಿ ಆಸ್ಪತ್ರೆಗೆ ದಾಖಲಾಗಿದ್ದಕ್ಕೆ ಈ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, ಇನ್ಮುಂದೆ ಆದರೂ ಮೇಲಾಧಿಕಾರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಹಿಂಡಲಗಾ ಜೈಲಿನಲ್ಲಿ ಆಗುತ್ತಿರುವ ಯಡವಟ್ಟುಗಳನ್ನು ತಡೆಗಟ್ಟುವ ಕೆಲಸ ತುರ್ತಾಗಿ ಮಾಡಬೇಕಿದೆ.
ಇದನ್ನೂ ಓದಿ: ಮಂಡ್ಯ: ಬೆಳ್ಳೂರಿನಲ್ಲಿ ಯುವಕನ ಮೇಲೆ ಹಲ್ಲೆ, ಪೊಲೀಸ್ ಬಿಗಿ ಭದ್ರತೆ - Assault on youth